ದಕ್ಷಿಣ ಕನ್ನಡ

ಜಿಲ್ಲೆಗೆ ಸಿಕ್ಕಿತು ಎರಡು ಹೊಸ ತಾಲೂಕು

Published On :

ಮಂಗಳೂರು: ದ.ಕ.ಜಿಲ್ಲೆಗೆ ಕಡಬ ಮತ್ತು ಮೂಡುಬಿದಿರೆ ತಾಲೂಕು ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನ ಬಂಪರ್ ಕೊಡುಗೆ. ಅದು ಬಿಟ್ಟರೆ ಹೇಳುವಂಥ ಹೊಸ ಯೋಜನೆಗಳು ಇಲ್ಲ, ಹಳೆ ಯೋಜನೆಗಳಿಗೆ ಹಣಕಾಸಿನ ಹೊಂದಾಣಿಕೆಯ ಪ್ರಸ್ತಾಪವೂ ಕಂಡುಬಂದಿಲ್ಲ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 125 ಕೋಟಿ, ಕರಾವಳಿಯಲ್ಲಿ ಮೀನುಗಾರಿಕಾ ಬಲೆ ನಿರ್ವಹಣೆಗೆ ರು. 2 ಕೋಟಿ, ಕುಡಿಯುವ ನೀರಿಗಾಗಿ ಸೌಭಾಗ್ಯ ಸಂಜೀವಿನಿಗೆ 200 ಕೋಟಿ ನೆರವು, ಕೃಷಿಗೆ ಉಚಿತ ವಿದ್ಯುತ್ ಮುಂದುವರಿಕೆ, ಸಹಕಾರಿ ಕೃಷಿ ಸಾಲ ಮನ್ನಾ ವಿಸ್ತರಣೆ, ಕರಾವಳಿ ರಕ್ಷಣಾ ಯೋಜನೆ, ಪುತ್ತೂರಿಗೂ ದಿನದ 24 ಗಂಟೆ ನೀರು ಪೂರೈಕೆ ಯೋಜನೆ, ಪರಿಸರ ವಿಜ್ಞಾನ ಕೇಂದ್ರ, ಎಂಡೋ ಸಂತ್ರಸ್ತರಿಗೆ 2 ಕೋಟಿ, ಕಲಾಂಗಣ ವಸ್ತು ಸಂಗ್ರಹಾಲಯಕ್ಕೆ 2 ಕೋಟಿ, ಟ್ರಕ್ ಟರ್ಮಿನಲ್, ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗೆ 5 ಕೋಟಿ, ವಾಹನ ಚಾಲನಾ ತರಬೇತಿ ಸಂಸ್ಥೆಗೆ 15 ಕೋಟಿ ಘೋಷಿಸಲಾಗಿದೆ.
ಈ ಬಾರಿಯೂ ನದಿ ತಿರುವು ಪ್ರಸ್ತಾಪ: ಕಳೆದ ಬಜೆಟ್‌ನಲ್ಲಿ ನದಿ ತಿರುವಿಗೆ 200 ಕೋಟಿ ಮೀಸಲಿಟ್ಟಂತೆ ಈ ಬಾರಿಯೂ ಅನುದಾನ ಪ್ರಸ್ತಾಪಿಸಲಾಗಿದೆ. ಈ ಯೋಜನೆಗೆ ಎತ್ತಿನ ಹೊಳೆ ಎಂದು ಹೆಸರಿಸಲಾಗಿದೆ.  ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಜಾನಪದ ಲೋಕ, ಓಷನೇರಿಯಂ ಸ್ಥಾಪನೆ, 3ಡಿ ತಾರಾಲಯ,  ಕೊಯ್ಲದಲ್ಲಿ ಪಶುವೈದ್ಯಕೀಯ ಕಾಲೇಜು, ಸುಳ್ಯದಲ್ಲಿ ರಬ್ಬರ್ ಘಟಕ ಸ್ಥಾಪನೆಗೆ ಹಣಕಾಸಿನ ನೆರವು ಪ್ರಸ್ತಾಪಗೊಂಡಿಲ್ಲ. ಮೂಡುಬಿದಿರೆ ಬಳಿ ಜೈನಪಥ ನಿರ್ಮಾಣ, ಮಂಗಳೂರು-ಉಡುಪಿ ಮೋನೋ ರೈಲು ಅಧ್ಯಯನಕ್ಕೆ ಹಣ ಬಿಡುಗಡೆಯ ಮಾಹಿತಿ ಇಲ್ಲ.
ಸಾವಯವ ಕೃಷಿಗೆ ಕಳೆದ 2 ವರ್ಷದಲ್ಲಿ ತಲಾ 200 ಕೋಟಿ ಬಿಡುಗಡೆ ಮಾಡಿದ್ದರೂ ನಯಾ ಪೈಸೆ ರೈತರಿಗೆ ಸಿಕ್ಕಿಲ್ಲ. ಈ ಬಾರಿ 100 ಕೋಟಿ ಮಾತ್ರ ಕಾದಿರಿಸುವುದಾಗಿ ಹೇಳಿದ್ದು, ಇದು ಸಾವಯವ ಕೃಷಿಕರನ್ನು ಮರುಳುಗೊಳಿಸುವ ತಂತ್ರ ಎಂದು ಕೃಷಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕೇರಳ ಮಾದರಿ ಪ್ಯಾಕೇಜ್ ಕನಸು: ಎಂಡೋ ಸಂತ್ರಸ್ತರಿಗೆ ಕೇರಳ ಮಾದರಿ ಪ್ಯಾಕೇಜ್ ಘೋಷಿಸುವ ಜನಪ್ರತಿನಿಧಿಗಳ ಭರವಸೆ ಪೊಳ್ಳು ಎಂಬುದು ಸಾಬೀತಾಗಿದೆ. ಎಂಡೋ ಸಂತ್ರಸ್ತರಿಗೆ ಮೀಸಲಿಟ್ಟ ಮೊತ್ತ ಕೇವಲ ರು. 2  ಕೋಟಿ. 2 ವರ್ಷ ಹಿಂದೆ 213 ಮಂದಿ ಸಂತ್ರಸ್ತರಿಗೆ ತಲಾ ರು. 50 ಸಾವಿರ ಮೊತ್ತವನ್ನು ಸರ್ಕಾರ ನೀಡಿದ್ದು ಬಿಟ್ಟರೆ ಇವರಿಗೆ ಮಾಸಾಶನವೂ ಸರಿಯಾಗಿ ಸಿಗುತ್ತಿಲ್ಲ. ಮೊನ್ನೆ ಮೊನ್ನೆ ಜಿಲ್ಲಾಡಳಿತ ಎಂಡೋ ಸಂತ್ರಸ್ತರ ಸರ್ವೇ ನಡೆಸಿ ಮೂಗಿಗೆ ತುಪ್ಪ ಸವರಿದ್ದೇ ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.