ಮಹಾನಗರದಲ್ಲಿ ಒಂದು ಮನೆಯ ಮಾಡಿ..
ಮಂಗಳೂರು: ಎಲ್ಲ ರೀತಿಯಿಂದಲೂ ಬೆಳೆಯುತ್ತಿರುವ ಮಹಾನಗರದಲ್ಲಿ ಈಗ ಮನೆ ನಿರ್ಮಾಣ ಮತ್ತು ಖರೀದಿಯದ್ದೇ ಸುಗ್ಗಿ. ಮಂಗಳೂರಿನಲ್ಲಿ 2 ಸಾವಿರ ಮನೆಗಳು ಮಾರಾಟಕ್ಕೆ ಸಿದ್ಧವಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ 5 ಸಾವಿರ ಮನೆಗಳು ನಿರ್ಮಾಣಗೊಳ್ಳಲಿದೆ.
ಅಪಾರ್ಟ್‌ಮೆಂಟ್‌ಗಳಿಗೆ ಚದರಡಿಗೆ ಕನಿಷ್ಠ ರು. 3 ಸಾವಿರ ಲೆಕ್ಕದಲ್ಲಿ ರು. 30 ಲಕ್ಷ ಅಸುಪಾಸಲ್ಲಿ ಅಪಾರ್ಟ್‌ಮೆಂಟ್‌ಗಳ 2 ಬೆಡ್ ರೂಮ್‌ನ ಸಾಮಾನ್ಯ ಮನೆ ಸಿಗಲಿದೆ. ಹೆಲಿಪ್ಯಾಡ್‌ಗಳಿರುವ ವಸತಿ ಸಂಕೀರ್ಣಗಳು ಮಂಗಳೂರಲ್ಲಿ ಹೆಚ್ಚುತ್ತಿದೆ. ಮುಂಬೈಯ ರಹೇಜಾ ಬಿಲ್ಡರ್ಸ್, ಬಜಾಜ್, ರಿಲಯನ್ಸ್ ಸಂಸ್ಥೆಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಹಣ ಹೂಡಿವೆ.
ಬೆಂಗಳೂರಿನ ಪ್ರೈಮ್‌ಕಾರ್ಪ್ ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ 50 ಲಕ್ಷಕ್ಕಿಂತ ಕಡಿಮೆ ಮನೆಯೇ ಇಲ್ಲ ಎನ್ನುತ್ತಾರೆ. ಟೋಟಲ್ ಎನ್ವಾಯರ್ನ್‌ಮೆಂಟ್ ಸಂಸ್ಥೆ ಪರಿಸರ ಪ್ರೇಮಿ ಮನೆ ನಿರ್ಮಿಸಬೇಕಾದರೆ ಕನಿಷ್ಠ ರು. 1.8 ಕೋಟಿ ಯುನಿಟ್ ಕಾಸ್ಟ್ ಪಡೆದುಕೊಳ್ಳುತ್ತದೆ ! ಮಂಗಳೂರಿನ ಎಕ್ಸ್‌ಪೊ ಸಮಾವೇಶದಲ್ಲಿ ಪ್ರತಿನಿಧಿಗಳು ಈ ವಿವರ ನೀಡಿದ್ದಾರೆ. ನಗರದ ಬ್ರಿಗೇಡ್ ವಸತಿ ಸಂಕೀರ್ಣದಲ್ಲಿ ಮನೆಗೆ ಕನಿಷ್ಠದರ ರು. 42 ಲಕ್ಷ, ಪ್ರಾಪರ್ಟಿ ಸಂಸ್ಥೆಯ ವಸತಿ ಸಂಕೀರ್ಣದಲ್ಲಿ ಚದರಡಿಗೆ 3,500, 4,500, 5000 ! ಹೀಗೆ ವಿವಿಧ ಸ್ತರಗಳಲ್ಲಿ ಮನೆಗಳ ಮೌಲ್ಯ ನಿಗದಿ ಪಡಿಸಲಾಗಿದೆ.
ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳು ಚದರಡಿಗೆ 5 ಸಾವಿರದಿಂದ ಆರಂಭವಾಗುತ್ತದೆ. ಅಲ್ಲಿಯೂ ಪ್ರಾವಿಡೆಂಟ್ ಸಂಸ್ಥೆ 28 ಲಕ್ಷ ವೆಚ್ಚದಲ್ಲಿ 2 ಬೆಡ್‌ರೂಮ್ ಮನೆ ನಿರ್ಮಿಸಿ ನೀಡುತ್ತಿದೆ. ಮಂಗಳೂರಲ್ಲಿಯೂ 'ಬಜೆಟ್' ಮನೆಗಳನ್ನು ನಿರ್ಮಿಸಲು ಮುಂದಾಗಿದೆ.
'ಬಜೆಟ್ ಮನೆ'ಗಳು: ಜೆಪ್ಪಿನಮೊಗರಲ್ಲಿ ವಿಶ್ವಾಸ್ ಬಾವ ಸಂಸ್ಥೆ 'ಬಜೆಟ್' ಮನೆ ನಿರ್ಮಾಣಗೊಳ್ಳುತ್ತಿವೆ. 25 ಲಕ್ಷ ನೀಡಿದರೆ 3 ವರ್ಷದಲ್ಲಿ 2 ಬೆಡ್‌ರೂಮ್‌ನ 'ಬಜೆಟ್' ಮನೆ ನಿರ್ಮಿಸಿಕೊಡುತ್ತಾರೆ.
ಸ್ಥಳೀಯ ಯುವ ಉದ್ಯಮಿಗಳ ಆ್ಯಪಲ್ ಹೋಮ್ಸ್ ಸಂಸ್ಥೆ ಚದರಡಿಗೆ 2.5 ಸಾವಿರ ಬೆಲೆಯ ಬಜೆಟ್ ಮನೆಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. 12 ಲಕ್ಷದಿಂದ 22 ಲಕ್ಷ ವರೆಗೆ 'ವಿಲ್ಲಾ' ಶೈಲಿಯ ನೆಲಮಹಡಿ ಮತ್ತು ಮಹಡಿ ಇರುವ ಮನೆಗಳನ್ನು ಶಕ್ತಿನಗರದಲ್ಲಿ ನಿರ್ಮಿಸುತ್ತಿವೆ.
'ಈಗ ಸಾಧಾರಣವಾಗಿ 40 ಲಕ್ಷಕ್ಕಿಂತ ಕಡಿಮೆ ಮನೆ ಸಿಗುವುದಿಲ್ಲ. 25 ಲಕ್ಷದ ಒಳಗೆ ಮನೆ ಬೇಕು ಎನ್ನುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಬುದ್ಧಿವಂತ ಎಂಜಿನಿಯರ್‌ಗಳ ಅನುಭವ ಬಳಸಿ, ಕಡಿಮೆ ಖರ್ಚು, ಕಡಿಮೆ ಜಾಗದಲ್ಲಿ ಉತ್ತಮ ಮನೆ ನಿರ್ಮಿಸುವ ಯೋಜನೆ ಇದು. ಒಂದುವರೆ ವರ್ಷದೊಳಗೆ ಮನೆ ನಿರ್ಮಿಸಿಕೊಡುತ್ತೇವೆ' ಎನ್ನುತ್ತಾರೆ ಸಂಸ್ಥೆ ಮುಖ್ಯಸ್ಥ ದರ್ಶನ್.
'ಎರಡು ಮಹಡಿಗಳು ಇರುವ ಕಾರಣ ಇಲ್ಲಿ ಲಿಫ್ಟ್ ಇಲ್ಲ, ನಿರ್ವಹಣೆ ವೆಚ್ಚದ ತಲೆನೋವಿಲ್ಲ, ಎರಡೇ ಮನೆಗಳು ಇರುವುದರಿಂದ ಖಾಸಗಿತನಕ್ಕೂ ಅವಕಾಶ ಹೆಚ್ಚು. ಹೀಗಾಗಿ ನಮಗೆ ಬಜೆಟ್ ಮನೆ ನಿರ್ಮಿಸುವುದು ಸಾಧ್ಯವಾಗಲಿದೆ ಎನ್ನುತ್ತಾರೆ ಅವರು.
ಕುಲಶೇಖರದಲ್ಲಿ ಮುಂಬೈ ಮೂಲದ ರೆಡ್ ಬ್ರಿಕ್ ಸಂಸ್ಥೆ 16.5 ಲಕ್ಷದಲ್ಲಿ 2 ಬಿಎಚ್‌ಕೆ ಮನೆ ನಿರ್ಮಿಸಿಕೊಡುವ ಬಗ್ಗೆ ಹೇಳುತ್ತಿವೆ. ಇನ್ನೂ ಅನೇಕ ಸಂಸ್ಥೆಗಳು 'ಲೋ ಬಜೆಟ್' ಮನೆ ಮಾಡುವುದಾಗಿ ಹೇಳುತ್ತಿವೆ.
ಆದರೆ 'ಹೇಳುವುದು ಒಂದು, ಮಾಡುವುದು ಇನ್ನೊಂದು' ಎಂಬ ಪರಿಸ್ಥಿತಿ ನಿರ್ಮಾಣವಾದರೆ, ಬಿಲ್ಡರ್ ಕೈಕೊಟ್ಟು ಓಡಿದರೆ, ಜೀವಮಾನದ ಆದಾಯ ಕೈಬಿಟ್ಟರೆ ಎಂಬ ಹೆದರಿಕೆ ಗ್ರಾಹಕರದ್ದು. ಬಿಲ್ಡರ್‌ಗಳು ಇರುವುದು ಲಾಭ ಮಾಡಲೆಂದೇ ಆದರೂ ಮನೆ ನಿರ್ಮಿಸಿಕೊಡುವ ಸ್ಥಳೀಯ ಸಂಸ್ಥೆ ಮತ್ತು ನಂಬಿಕಸ್ಥ 'ಬಿಲ್ಡರ್'ಗಳತ್ತ ಗ್ರಾಹಕರು ಮುಖ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

