ದಕ್ಷಿಣ ಕನ್ನಡ

ಹಳೆ ಸೊತ್ತು ರವಾನೆ- ದೂರು

Published On :

ವಿಟ್ಲ: ಕೊಳ್ನಾಡು ನಿವಾಸಿಯೊಬ್ಬರ ದೂರವಾಣಿಗೆ ಕರೆ ಮಾಡಿದ ಮಹಿಳೆ ರು. 22 ಸಾವಿರದ ಸೊತ್ತನ್ನು 3500ಕ್ಕೆ ಕೊಡುವುದಾಗಿ ಹೇಳಿ ಅಂಚೆ ಮೂಲಕ ಹಳೆ ಸ್ವತ್ತುಗಳನ್ನು ರವಾಸಿದ ಘಟನೆ ನಡೆದಿದೆ. ಹಾಸನದ ಮಹಿಳೆಯೊಬ್ಬಳು ಮೊಬೈಲ್ ಸಂಖ್ಯೆ 7795681700 ರಿಂದ ಕರೆ ಮಾಡಿ ಅಗ್ಗದಲ್ಲಿ ಸ್ವತ್ತುಗಳನ್ನು ನೀಡುವುದಾಗಿ ಹೇಳಿದ್ದರು. ಇದು ಸತ್ಯ ಇರಬಹುದೆಂದು ನಂಬಿ ಸೊತ್ತನ್ನು ಕಳುಹಿಸಿಕೊಡುವಂತೆ ಕೊಳ್ನಾಡು ನಿವಾಸಿ ತಿಳಿಸಿದ್ದರು. ಶುಕ್ರವಾರ ಅಂಚೆ ಮೂಲಕ ಬಂದ ಕಟ್ಟನ್ನು ಹಣ ಕಟ್ಟಿ ಬಿಡಿಸಿಕೊಂಡು ತೆರೆದು ನೋಡಿದಾಗ ಅದರಲ್ಲಿ ಹಳೆಯ ಬೆಲ್ಟ್‌ಗಳು ಇದ್ದವು ಇದರಿಂದ ವ್ಯಕ್ತಿಯ ಪರಿಸ್ಥಿತಿ ಹಣವೂ ಇಲ್ಲ, ಸಾಮಾನೂ ಇಲ್ಲ ಎನ್ನುವಂತಾಗಿದೆ.
ಆತ್ಮಹತ್ಯೆಗೆ ಯತ್ನ: ದೂರು
ಸುಳ್ಯ: ಪೆರುವಾಜೆ ಗ್ರಾಮದ ದೋಳ ಎಂಬಲ್ಲಿ ವ್ಯಕ್ತಿಯೊಬ್ಬರು ತನ್ನ ಬಟ್ಟೆಬರೆಗಳನ್ನು ಸುಟ್ಟು ಹಾಕಿ, ಮನೆಯಲ್ಲಿದ್ದ ದಿನಸಿ ಸಮಾನುಗಳಿಗೆ ಸೀಮೆಎಣ್ಣೆ ಸುರಿದು ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ದೋಳ ನಿವಾಸಿ ನಾರಾಯಣ ಶೆಟ್ಟಿ(60) ಎಂಬವರು ಗುರುವಾರ ಸಂಜೆ ವೇಳೆ ತನ್ನ ಮನೆಯೊಳಗೆ ಈ ಕೃತ್ಯ ನಡೆಸಿದ್ದು, ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ಅವರ ಪತ್ನಿ ರಕ್ಷಿಸಿದ್ದಾರೆ. ಕಿವುಡುತನದಿಂದ ಬಳಲುತ್ತಿರುವ ನಾರಾಯಣ ಶೆಟ್ಟಿ ಕೆಲ ದಿನಗಳಿಂದ ತನ್ನ ಪತ್ನಿ ಹಾಗೂ ಮಗನಲ್ಲಿ ಮಾತು ಬಿಟ್ಟಿದ್ದರೆನ್ನಲಾಗಿದೆ. ಇವರ ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ತನ್ನ ಬಟ್ಟೆಗಳಿಗೆ ಸೀಮೆ ಣ್ಣೆ ಸುರಿದು ಬೆಂಕಿ ಹಚ್ಚಿ, ಮನೆಯಲ್ಲಿದ್ದ ಅಕ್ಕಿ, ಸಕ್ಕರೆ ಮುಂತಾದ ದಿನಸಿ ಸಾಮಾನುಗಳಿಗೂ ಸೀಮೆಣ್ಣೆ ಸುರಿದು ಬಳಿಕ ಮನೆಯೊಳಗೆ ನೇಣು ಹಾಕಿಕೊಂಡರೆನ್ನಲಾಗಿದೆ. ಪತ್ನಿ ಮನೆಗೆ ಬಂದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ಇವರನ್ನು ಹಗ್ಗ ತುಂಡರಿಸಿ ರಕ್ಷಿಸಿದ್ದಾರೆ. ನಾರಾಯಣ ಶೆಟ್ಟರ ಪತ್ನಿ ಹಾಗೂ ಮಗ ಈ ಬಗ್ಗೆ ಬೆಳ್ಳಾರೆ ಪೋಲೀಸರಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದಾರೆ.
ತಾಮ್ರ ಹಂಡೆ ಕಳವು ಆರೋಪಿ ಸೆರೆ
ಮೂಲ್ಕಿ: ಕಳೆದ ಎರಡು ದಿನಗಳ ಹಿಂದೆ ಕಾರ್ನಾಡು ಬೈಪಾಸ್ ಬಳಿ ರೇಮಂಡ್ ರೆಬೆಲ್ಲೊ ಎಂಬವರ ಬಚ್ಚಲು ಮನೆಯಲ್ಲಿದ್ದ ತಾಮ್ರದ ಹಂಡೆ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲ್ಕಿ ಕಾರ್ನಾಡು ಸರ್ಕಾರಿ ಆಸ್ಪತ್ರೆ ಬಳಿಯ ನಿವಾಸಿ ವಿಶ್ವನಾಥ (35) ಬಂಧಿತ ಆರೋಪಿ. ಮೂಲ್ಕಿ ಠಾಣಾ ನಿರೀಕ್ಷಕ ಬಶೀರ್ ಅಹಮ್ಮದ್ ನೇತೃತ್ವದ ತಂಡವು ವಿಶ್ವನಾಥನನ್ನು ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 22ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಲೆಟ್ಟಿಯ ಯುವತಿ ನಾಪತ್ತೆ
ಸುಳ್ಯ: ಆಲೆಟ್ಟಿ ಗ್ರಾಮದ ಪರಿವಾರಕಾನ ಮಲ್ಲ ಯಾನೆ ಮಾಧವ ಎಂಬವರ ಪುತ್ರಿ ಕು. ಸರೋಜಿನಿ(26) ಎಂಬವರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಫೆ.5 ರಂದು ಬೆಳಿಗ್ಗೆ ಸರೋಜಿನಿಯವರು ತಾಯಿಯಲ್ಲಿ ನಾಗಪಟ್ಟಣದಲ್ಲಿರುವ ನರ್ಸರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು, ನರ್ಸರಿಗೂ ಹೋಗದೆ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಯುವತಿ 5 ಅಡಿ ಎತ್ತರ, ಸಪೂರ ಶರೀರ, ಕನ್ನಡ, ತುಳು, ತಮಿಳು ಭಾಷೆಗಳನ್ನು ಮಾತನಾಡಬಲ್ಲವಳಾಗಿದ್ದಾಳೆ. ಎಣ್ಣೆ ಕಪ್ಪು ಮೈಬಣ್ಣ ಹೊಂದಿರುವ ಈಕೆ, ನಾಪತ್ತೆಯಾದ ದಿನ ಹಸಿರು ಬಣ್ಣದ ಟಾಪ್ ಮತ್ತು ನೇರಳೆ ಬಣ್ಣದ ಪ್ಯಾಂಟ್ ಧರಿಸಿದ್ದಳು. ಹುಡುಗಿಯ ಇರುವಿಕೆಯ ಬಗ್ಗೆ ಮಾಹಿತಿ ದೊರೆತಲ್ಲಿ, ಪೋಲೀಸ್ ಉಪ ನಿರೀಕ್ಷಕರು ಸುಳ್ಯ ಪೋಲೀಸ್ ಠಾಣೆ 08257- 230337 ಅಥವಾ 9480805365 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.