ಮರಕ್ಕೆ ಕಾರು ಡಿಕ್ಕಿ; ಚಾಲಕ ಸಾವು, ಆರು ಮಂದಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಉದನೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಯಾತ್ರಾರ್ಥಿಗಳು ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ. ಬೆಂಗಳೂರು ರಾಮನಗರ ಹಾರವಳ್ಳಿ ನಿವಾಸಿ ಚಾಲಕ ಲೋಕೇಶ್ (24) ಮೃತಪಟ್ಟಿ ದುರ್ದೈವಿ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಡುವ ಸಲುವಾಗಿ ರಾತ್ರಿ ಪ್ರಯಾಣ ಬೆಳೆಸಿದ ಕಾರಣ, ಭಾನುವಾರ ನಸುಕಿನಲ್ಲಿ ಚಾಲಕ ನಿದ್ದೆ ಮಂಪರಿಗೆ ಒಳಗಾಗಿದ್ದು, ಕಾರು ಆತನ ನಿಯಂತ್ರಣಕ್ಕೆ ಸಿಗದೇ ಹೆದ್ದಾರಿಯಿಂದ 20 ಅಡಿ ದೂರದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳಾದ ಬೆಂಗಳೂರಿನ ಹೆಬ್ಬಗೋಡಿಯ ಎಲೆಕ್ಟ್ರಾನಿಕ್ ಸಿಟಿ ಹೊಸೂರು ರಸ್ತೆ ವಿನಾಯಕ ನಗರದ ನಿವಾಸಿಗಳಾದ ಅನಿತಾ (15), ಮಂಜುಳಾ (30), ಮಹಾಲಕ್ಷ್ಮಿ (6), ಚಂದ್ರಕಲಾ (28), ಶೋಭಾ (29), ರಘು (22), ಇವರೆಲ್ಲಾ ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಶನಿವಾರ ರಾತ್ರಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಪ್ರಯಾಣ ಆರಂಭಿಸಿದ್ದರು.
ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪೈಕಿ ಮಂಜುಳಾ ಮತ್ತು ಚಂದ್ರಕಲಾ ಎಂಬವರ ಕೈಮುರಿತಕ್ಕೊಳಗಾಗಿದೆ ಎನ್ನಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
---
ಪೆರಾಜೆ ಮಠದ ಅಶ್ವತ್ಥ ಮರ ಕಡಿದ ಕಿಡಿಗೇಡಿಗಳು
ವಿಟ್ಲ: ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಸೇರಿದ ಅಶ್ವತ್ಥ ಮರವೊಂದನ್ನು ಕಿಡಿಗೇಡಿಗಳು ತುಂಡರಿಸಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿತ್ರ ಪೆರಾಜೆ - ಬೊಳ್ಳುಕಲ್ಲು ರಸ್ತೆಯಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನೆಟ್ಟಿದ್ದ ಮರಕ್ಕೆ ಕಟ್ಟೆ ಕಟ್ಟಿ ಪೋಷಿಸಲಾಗುತ್ತಿತ್ತು. ಆದರೆ, ಯಾರೋ ಕಿಡಿಗೇಡಿಗಳು ಶಾಂತಿ ಕದಡುವ ನಿಟ್ಟಿನಲ್ಲಿ ಮರ ಕತ್ತಿಯಿಂದ ಕಡಿದು ತುಂಡರಿಸಿದ್ದಾರೆ ಎಂದು ವಿಟ್ಲ ಠಾಣೆಯಲ್ಲಿ ಮಠದ ಮ್ಯಾನೇಜರ್ ಶಿವಪ್ರಸಾದ್ ದೂರು ನೀಡಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

