ದಕ್ಷಿಣ ಕನ್ನಡ

ಕೇರಳ-ಸುಳ್ಯ ರೈಲು ಮಾರ್ಗಕ್ಕೆ ಒತ್ತಾಯ: ನಳಿನ್

Published On :

ಮಂಗಳೂರು: ಮಂದಿನ ರೇಲ್ವೆ ಬಜೆಟ್‌ನಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕೇರಳ ಸಂಪರ್ಕಿಸುವ ರೇಲ್ವೆ ಮಾರ್ಗ ನಿರ್ಮಾಣಕ್ಕಾಗಿ ಅನುದಾನ ಮೀಸಲಿಡುವಂತೆ ಒತ್ತಾಯಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ ಮಂಗಳೂರು ಕೆನರಾ ರೇಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಮಾತನಾಡಿದರು.
ಸುಮಾರು ರು. 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮಂಗಳೂರು ರೇಲ್ವೆ ಮೇಲ್ಸೇತುವೆ ಹಲವಾರು ಬೇಡಿಕೆಗಳಲ್ಲಿ ಒಂದಾಗಿದ್ದು, ಅನೇಕ ಮಂದಿಯ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಸರ್ಕಾರದ ಸೂಚನೆ ಮೇರೆಗೆ ರೇಲ್ವೆ ನಿಲ್ದಾಣದಲ್ಲಿ ಶುಚಿತ್ವಕ್ಕೆ ಮಹತ್ವ ಕೊಡುವ ಸಲುವಾಗಿ, ಸ್ವಚ್ಛತೆಯನ್ನು ಯಂತ್ರಗಳ ಮೂಲಕ ನಿರ್ವಹಿಸುವಂತೆ ದಿಲ್ಲಿ ಮೂಲದ ಹುಗ್ಸ್ ಆ್ಯಂಡ್ ಹುಗ್ಸ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎಂದರು.
ಪಡೀಲ್ ಮೇಲ್ಸೆತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಪಾಲಿಕೆ, ರಾಜ್ಯ ಸರ್ಕಾರ, ರೇಲ್ವೆ ಇಲಾಖೆ ಸಹಭಾಗಿತ್ವದಲ್ಲಿ ಜಪ್ಪು-ಕುಡ್ಪಾಡಿ ಕೆಳಸೇತುವೆ ಕಾಮಗಾರಿ ಪ್ರಕ್ರಿಯೆ ನಡೆಯಲಿದೆ. ಬೈಕಂಪಾಡಿಯಲ್ಲಿ ನಿರ್ಮಾಣವಾಗಬೇಕಾದ ಮೇಲ್ಸೇತುವೆಗೆ ತಾಂತ್ರಿಕ ಅನುಮತಿ ದೊರಕಿದೆ ಎಂದು ಹೇಳಿದರು.
ಬೇಡಿಕೆಗಳು: ಕಾರವಾರಕ್ಕೆ ಹೆಚ್ಚುವರಿ ಬೋಗಿ ನೀಡಬೇಕು. ಮಂಗಳೂರಿನಿಂದ ಹೊರಡುವ ಮತ್ತು ಆಗಮಿಸುವ ರೈಲಿನ ಸಮಯದಲ್ಲಿ ವ್ಯತ್ಯಾಸ ಮಾಡಬೇಕು. ಸುಬ್ರಹ್ಮಣ್ಯಕ್ಕೆ ಹೆಚ್ಚುವರಿ ಲೋಕಲ್ ರೈಲು, ಗೋವಾ-ಕೇರಳಕ್ಕೆ ರೈಲನ್ನು ಒದಗಿಸಬೇಕು ಎಂಬ ಬೇಡಿಕೆಯಿದೆ. ಪಾಲ್ಘಾಟಿನಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಮೈಸೂರಿನಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.
ಫೆ. 14 ರಂದು ಮಂಗಳೂರಿಗೆ 12 ಮಂದಿಯ ರೇಲ್ವೆ ಪಾರ್ಲಿಮೆಂಟ್ ಕಮಿಟಿ ಆಗಮಿಸಲಿದೆ. ಈಸಂದರ್ಭ ಕೆಲವೊಂದು ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ನಳಿನ್ ಹೇಳಿದರು.
ಬೇಡಿಕೆಗಳು: ಮಂಗಳೂರು-ಯಶವಂತಪುರಕ್ಕೆ ಮತ್ತೊಂದು ರೈಲು ನೀಡಬೇಕು. ಮುಂಬೈ-ಮಂಗಳೂರಿಗೆ ಹೆಚ್ಚುವರಿ ರೈಲು, 27 ರೈಲ್ವೆ ಕ್ರಾಸಿಂಗ್‌ನಲ್ಲಿ 12 ಕ್ರಾಸಿಂಗ್ ಸಮಸ್ಯೆಯಲ್ಲಿದ್ದು, ಇಲ್ಲಿ ಕೂಡಲೆ ಕೆಳಸೇತುವೆ ಮತ್ತು ಮೇಲ್ಸೇತುವೆ ನಿರ್ಮಿಸಬೇಕು. ಮಂಗಳೂರು ಪ್ರತ್ಯೇಕ ರೇಲ್ವೆ ವಿಭಾಗ ಹಾಗೂ ಅದರಲ್ಲಿ ಕರ್ನಾಟಕದವರಿಗೆ ಉದ್ಯೋಗ ದೊರಕುವಂತೆ ಮಾಡಬೇಕು.
ಪಾಲ್ಘಾಟ್ ವಿಭಾಗೀಯ ರೇಲ್ವೆ ಮ್ಯಾನೇಜರ್ ಪಿಯುಶ್ ಅಗರ್‌ವಾಲ್ ಮಾತನಾಡಿ, ಮಂಗಳೂರು ಪ್ರತ್ಯೇಕ ವಿಭಾಗಕ್ಕಾಗಿ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಪಾಲ್ಘಾಟ್ ವಿಭಾಗದಲ್ಲಿ ರೇಲ್ವೆ ನಿಲ್ದಾಣದ ನಿರ್ವಹಣೆ ಮತ್ತು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗಿದೆ. ತೋಕೂರಿನಿಂದ ಮಂಗಳೂರಿನೊಳಗೆ ರೈಲು ಆಗಮಿಸಲು ವಿಳಂಬವಾಗುತ್ತಿದ್ದು, ತೋಕೂರಿನಲ್ಲಿ ಅವಳಿ ಹಳಿಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.