ಮಂಗಳೂರಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಡಗರ
ಮಂಗಳೂರು: ಸಾಕ್ಷಾತ್ ತಿರುಪತಿ ದೇವಸ್ಥಾನ ಕಣ್ಮುಂದೆ ಬಂದಂತೆ ಭಾಸವಾಗುವ ವೇದಿಕೆ, ಪುರೋಹಿತರ ವೇದಮಂತ್ರ ಘೋಷ ಮಧ್ಯೆ ಆಗಾಗ ಭಜನ್... ವಾದ್ಯ ಹಿಮ್ಮೇಳದ ನಡುವೆ ಶ್ರೀದೇವಿ, ಭೂದೇವಿ ಜತೆ ಶ್ರೀನಿವಾಸನಿಗೆ ಕಲ್ಯಾಣೋತ್ಸವ.
ಇದು ತಿರುಮಲ ತಿರುಪತಿ ದೇವಸ್ಥಾನ ಹಾಗೂ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಮಂಗಳೂರಿನ ಪ್ರಥಮ ಬಾರಿಗೆ ಮಾಲಾಡಿ ಕೋರ್ಟ್ನಲ್ಲಿ ಮಂಗಳವಾರ ಸಂಜೆ ನಡೆದ ವೈಭವದ ಶ್ರೀನಿವಾಸ ಕಲ್ಯಾಣೋತ್ಸವದ ಸಂಭ್ರಮ.
ಸಂಜೆ ಶ್ರೀದೇವಿ ಮತ್ತು ಭೂದೇವಿ ಹಾಗೂ ಶ್ರೀನಿವಾಸ ದೇವರ ದಿಬ್ಬಣ ಅದ್ದೂರಿಯಾಗಿ ಸಾಗಿತು. ಸಂಜೆ 5.30ರಿಂದ ವೈದಿಕ ವಿಧಿವಿಧಾನದಿಂದ ಶ್ರೀನಿವಾಸ ಕಲ್ಯಾಣ ಪ್ರಾರಂಭಗೊಂಡಿತು. ತಿರುಪತಿ ಪುರೋಹಿತ ಗುರುರಾಜ ಆಚಾರ್ಯ ನೇತೃತ್ವದಲ್ಲಿ ಆಗಮಿಸಿದ ಪುರೋಹಿತರು ಚಿನ್ನದ ವಿಗ್ರಹ ಪ್ರತಿಷ್ಠಾಪಿಸಿದರು.
ಮೊದಲು ಮಂತ್ರಸಹಿತ ಜಲ ಪ್ರೋಕ್ಷಣೆ ನಡೆಸಿ, ಅಂಕುರಾರ್ಪಣೆ ಮಾಡಿದರು. ವಿವಾಹಕ್ಕೆ ಯಾವುದೇ ಎಡರುತೊಡರು ಬಾರದಿರಲಿ ಎಂದು ರಕ್ಷೆ ಬಂಧನ ನಡೆಸಿದರು. ಬಳಿಕ ವಿವಾಹಕ್ಕೆ ದೇವದೇವತೆಗಳನ್ನು ಆಹ್ವಾನಿಸುವ ವಿಧಾನ ನಡೆಯಿತು. ವೇದಿಕೆಯಲ್ಲಿ ಅಗ್ನಿಪ್ರತಿಷ್ಠಾಪಿಸಿ, ಹವಿಸ್ಸು ಸಮರ್ಪಿಸಿದರು. ಆ ಮೂಲಕ ದೇವತೆಗಳ ಅನುಗ್ರಹ ಪಡೆದರು. ಇದೇ ಸಂದರ್ಭ ಲೋಕಕಲ್ಯಾಣದ ಸಂಕಲ್ಪ ಮಾಡಲಾಯಿತು. ಶ್ರೀನಿವಾಸ, ಶ್ರೀದೇವಿ, ಭೂದೇವಿಯ ಗೋತ್ರ ಪ್ರವರ ಪಠಿಸುತ್ತಾ, ವಧೂವರರ ಶೃಂಗಾರ ನೆರವೇರಿಸಲಾಯಿತು. ವಧೂವರರು ಪರಸ್ಪರ ಹಾರ ಬದಲಾಯಿಸಿದ ನಂತರ ಅಕ್ಷತಾರೋಪಣ ಮಾಡಲಾಯಿತು. ಪುರೋಹಿತ ನಾಗಭೂಷಣ್ ಕನ್ಯಾದಾನ ಮಾಡಿದರು. ಹಿಮ್ಮೇಳನದಲ್ಲಿ ಶೋಭಾನೆ ಹಾಡಲಾಯಿತು. ಮಹಾನೈವೇದ್ಯ ಬಳಿಕ ಮಹಾ ಮಂಗಳಾರತಿ ಬೆಳಗಿದರು. ಇದೇ ವೇಳೆ ಗೋವಿಂದ... ಹರಿ.. ಗೋವಿಂದ ದೇವಿಂದ ಸಂಕೀರ್ತನೆಯಲ್ಲಿ ನೆರೆದ ಭಕ್ತಸ್ತೋಮ ಭಕ್ತಿಪರವಶತೆಯಿಂದ ನಲಿದಾಡಿತು. ಶಂಖಧ್ವನಿಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ಭಕ್ತಾದಿಗಳಿಗೆ ಹಂಚಲು ಸುಮಾರು 20 ಸಾವಿರ ಲಡ್ಡುಪ್ರಸಾದವನ್ನು ತಿರುಪತಿಯಿಂದ ತರಲಾಗಿತ್ತು.
ಪುತ್ತಿಗೆ ಮಠ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಒಡಿಯೂರು ಸ್ವಾಮೀಜಿ, ಕೇಮಾರಿನ ಶ್ರೀಈಶವಿಠ್ಠಲದಾಸ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಘುಪತಿ ಭಟ್ ಮತ್ತಿತರರು ಹಾಜರಿದ್ದರು. ಸಮಿತಿ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಡಾ.ಆಶಾ ಜ್ಯೋತಿ ರೈ ದಂಪತಿ ಕಲ್ಯಾಣೋತ್ಸವ ಸಂಕಲ್ಪ ಕೈಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

