ಪೊಲೀಸರಿಗೆ ಆರೋಗ್ಯ ಕಾರ್ಡ್, ಸಮವಸ್ತ್ರ, ಶೂ ಸಿಕ್ಕಿಲ್ಲ
ಮಂಗಳೂರು: ಆರೋಗ್ಯ ಭಾಗ್ಯ ಯೋಜನೆ ಆರಂಭವಾಗಿ ಅನೇಕ ವರ್ಷಗಳೇ ಉರುಳಿದರೂ ಪೊಲೀಸರ ಕೈಗೆ ಕಾರ್ಡ್ ಇನ್ನೂ ಸಿಕ್ಕಿಲ್ಲ. ಸಮವಸ್ತ್ರ, ಶೂ, ಹ್ಯಾಟ್ ಬಾರದೆ ಮೂರು ವರ್ಷಗಳೇ ಕಳೆದಿವೆ.
ಪೊಲೀಸರಿಗೆ ಆರೋಗ್ಯ ಭಾಗ್ಯ ಮಂಜೂರಾಗಬೇಕಾದರೆ ಅರ್ಜಿ ಭರ್ತಿ ಮಾಡಿ ಎಸ್ಪಿಗೆ ಕಳುಹಿಸಬೇಕು. ಅಲ್ಲಿ ಪಾಸ್ ಆಗುವಾಗ ನಾನಾ ಕಾರಣಗಳಿಂದ ವಿಳಂಬವಾಗುತ್ತದೆ. ಸರಿಯಾದ ಸಮಯದಲ್ಲಿ ಎಸ್‌ಪಿ ಸಹಿ ಆಗದಿದ್ದರೆ ಆಸ್ಪತ್ರೆಯಲ್ಲಿ ರೋಗಿಗೆ ಪ್ರವೇಶ ಕೂಡಾ ನೀಡುವುದಿಲ್ಲ. ಆರೋಗ್ಯ ಭಾಗ್ಯ ಅರ್ಜಿ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳದ ಕಾರಣಕ್ಕೆ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಯನ್ನು 3 ಗಂಟೆಗಳ ಕಾಲ ಹೊರಗೆ ಕುಳ್ಳಿರಿಸಿ ಕಾಯಿಸಿದ್ದಾರೆ ಎಂದು ಪೊಲೀಸರು ಆಕ್ರೋಶದಿಂದ ಹೇಳುತ್ತಾರೆ. ಹೀಗಾಗಿ ಪೊಲೀಸರ ಕೈಗೆ ಕಾರ್ಡ್ ನೀಡಿದರೆ ಸುಲಭವಾಗಲಿದೆ.
ಆರೋಗ್ಯ ಭಾಗ್ಯ ಫಲಾನುಭವಿ ಆಗಿದ್ದರೂ ಆಸ್ಪತ್ರೆಯಲ್ಲಿ ನಾನಾ ರೀತಿಯ ತಪಾಸಣೆಗಳನ್ನು ಹೊರಗಡೆ ಮಾಡಿಸುತ್ತಾರೆ. ಇದಕ್ಕೆ ಪೊಲೀಸರೆ ಹಣ ಪಾವತಿಸಬೇಕು. ಇಂಥ ಪ್ರಕರಣಗಳಲ್ಲಿ ಆಸ್ಪತ್ರೆಯವರು ಹೆಚ್ಚಿನ ಬಿಲ್ ಮಾಡುತ್ತಾರೆ, ಎಷ್ಟು ಬಿಲ್ ಮಾಡಿದ್ದಾರೆ, ಏನು ಬಿಲ್ ಮಾಡಿದ್ದಾರೆ ಎನ್ನುವುದನ್ನು ಆಸ್ಪತ್ರೆಯವರು ನಮಗೆ ತೋರಿಸುವುದೇ ಇಲ್ಲ ಎನ್ನುವುದು ಪೊಲೀಸರ ಆರೋಪ. ಇದು ಕೇವಲ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರ ವ್ಯಥೆ, ಕತೆ ಅಲ್ಲ, ರಾಜ್ಯಾದ್ಯಂತ ಪೊಲೀಸರ ಪಾಡು.
ತಾರತಮ್ಯ: ಪೊಲೀಸ್ ಸಿಬ್ಬಂದಿಗೆ ವೇತನದಲ್ಲಿ 100 ಕಡಿತವಾಗುತ್ತಿದೆ. ಎಸ್‌ಐ, ಇನ್‌ಸ್ಪೆಕ್ಟರ್ ಮೇಲಿನ ಅಧಿಕಾರಿಗಳಿಗೂ ಕಡಿತವಾಗುವುದು 100.
ಪೊಲೀಸ್ ಸಿಬ್ಬಂದಿಗೆ ಜನರಲ್ ವಾರ್ಡ್, ಮೇಲಧಿಕಾರಿಗಳಿಗೆ ವಿಶೇಷ ವಾರ್ಡ್, ಕಟ್ಟುವ ಹಣ ಒಂದೇ ಆದರೆ ಸೌಲಭ್ಯದಲ್ಲಿ ತಾರತಮ್ಯ. ಪೊಲೀಸ್ ಗುಲಾಮಗಿರಿ ಪದ್ಧತಿಗೆ ಜ್ವಲಂತ ಉದಾಹರಣೆ.
ಆರೋಗ್ಯ ಭಾಗ್ಯ ಕುಟುಂಬದವರಿಗೂ ಅನ್ವಯವಾಗುತ್ತದೆ. ಸಂತೋಷದ ವಿಚಾರ. ಬೇರೆ ವಿಮೆ ಸಂಸ್ಥೆಗಳಂತೆ ಇಲ್ಲಿಯೂ ಕಾರ್ಡ್ ನೀಡಿದರೆ ಆಸ್ಪತ್ರೆ ದಾಖಲಾಗುವುದು ಸುಲಭ ಎಂದು ಪೊಲೀಸರ ಅಭಿಪ್ರಾಯ
ಶೂ, ಸಾಕ್ಸ್, ವಿಝಿಲ್ 2009 ರಿಂದ ರವಾನೆ ಆಗಿಲ್ಲ. ಬಂದರೂ ಅಳತೆ, ಪ್ರಮಾಣ ತಾಳೆಯಾದರೆ ಅದೃಷ್ಟ! ಮಂಗಳೂರಿನ ಧೂಳಿನಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರು ದಿನಕ್ಕೆ 2 ಜತೆ ಸಮವಸ್ತ್ರ ಧರಿಸಿದರೂ ಬಣ್ಣ ಬದಲಾಗುತ್ತಿದೆ. ಹೀಗಿರುವಾಗ 2 ವರ್ಷಕ್ಕೊಮ್ಮೆಯೂ ಸಮವಸ್ತ್ರ ಬಾರದೆ ಇದ್ದರೆ ಪರಿಸ್ಥಿತಿ ಹೇಗಿರಬೇಡ?.
ಪ್ರತಿ ವರ್ಷ ಎರಡು ಜತೆ ಖಾಕಿ ಪ್ಯಾಂಟ್ ಮತ್ತು ಅಂಗಿ ನೀಡುತ್ತಾರೆ. ಸಂಚಾರಿ ಪೊಲೀಸರಿಗಾದರೆ ಬಿಳಿ ಅಂಗಿ. 90 ರಂತೆ 180 ನೀಡುತ್ತಾರೆ! ಈಗ ಹೊಲಿಗೆ ದರ 400 ತಲುಪಿದೆ. ಸಮವಸ್ತ್ರ ಗುಣಮಟ್ಟ ಕೂಡಾ ಸಾಧಾರಣ. ಶೂ 4 ತಿಂಗಳ ಬಳಿಕ ಜರ್ಝರಿತವಾಗುತ್ತದೆ. ಶ್ರೀಮಂತಿಕೆ ಇರುವ ಪೊಲೀಸರು ಸರ್ಕಾರ ಕೊಟ್ಟ ಸಮವಸ್ತ್ರ ಬೇರೆಯವರಿಗೆ ನೀಡಿ ತಾವೇ ಕಡಕ್ ಖಾಕಿ ಧರಿಸುತ್ತಾರೆ!
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅಭಿಷೇಕ್ ಗೋಯಲ್ ಬಳಿ ಹೇಳಿದರೆ, 'ಹೌದಾ, ನಿಮಗೆ ಯಾರು ಹೇಳಿದರು? ಪರಿಶೀಲಿಸುತ್ತೇವೆ' ಎನ್ನುತ್ತಾರೆ.
ರಾಜಹಂಸ ಇಲ್ಲ: ರಾಜಹಂಸ ಬಸ್‌ನಲ್ಲಿ ವಾರಂಟ್ ಹಿಡಿದು ಹೋಗಲು ಪೊಲೀಸರಿಗೆ ಬಿಡುವುದಿಲ್ಲ. ರಾಜಹಂಸದಲ್ಲಿ ಪೊಲೀಸ್‌ಗೆ ಅವಕಾಶ ಇಲ್ಲ ಎಂದ ಕೆಳಗೆ ಇಳಿಸುತ್ತಾರೆ. ಮಂಗಳೂರಿಂದ ಬೆಂಗಳೂರಿಗೆ ವೇಗದೂತಗಳು ಇರುವುದೇ ಕಡಿಮೆ. ಒಂದೇ ಪ್ರಕರಣದ ತನಿಖೆಗೆ ಇನ್‌ಸ್ಪೆಕ್ಟರ್ ರಾಜಹಂಸದಲ್ಲಿ ಹೋದರೆ, ಕೈದಿಗಳ ಜತೆ ಪೊಲೀಸರು ವೇಗದೂತದಲ್ಲಿ ಹೋಗುತ್ತಾರೆ!
ಇಲ್ಲಿ ವರ್ಗಭೇದ ಮಾಡಬಾರದು. ಪೊಲೀಸರು ಮಾಡುತ್ತಿರುವುದು ಸರ್ಕಾರದ ಕೆಲಸ ಎಂದು ಸರ್ಕಾರ ತಿಳಿಯಬೇಕು ಎನ್ನುವುದು ಪೊಲೀಸರು ವಾದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

