ಧಾರಾಕಾರ ಮಳೆ
ಸುಳ್ಯ/ ಉಪ್ಪಿಗಂಗಡಿ; ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಹಗಲು ಭಾರಿ ಮಳೆಯಾಗಿದೆ. ಸೆಖೆಯಿಂದ ಬಳಲುತ್ತಿದ್ದ ಜನರಿಗೆ ಮೊದಲ ಮಳೆ ತಂಪು ತಂದರೂ ಅಕಾಲಿಕ ಮಳೆಗೆ ವಾಣಿಜ್ಯ ಬೆಳೆಗಳಿಗೆ ಹಾನಿಯಾಗಿದ್ದು, ದನವೊಂದು ಸಿಡಿಲಿಗೆ ಬಲಿಯಾಗಿದೆ.
ಸುಳ್ಯ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ ಸುತ್ತಮುತ್ತ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದೆ. ಉಪ್ಪಿನಂಗಡಿಯ ಆಲಂಕಾರು ಗ್ರಾಮದಲ್ಲಿ ಕಟ್ಟಿ ಹಾಕಿದ್ದ ದನವೊಂದು ಸಿಡಿಲು ಬಡಿದು ಮೃತಪಟ್ಟಿದೆ. ಸುಳ್ಯ ತಾಲೂಕಿನಲ್ಲಿ ಹಲವೆಡೆ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಪುತ್ತೂರು ತಾಲೂಕಿನ ಸವಣೂರು, ಸರ್ವೆ, ಮುಂಡೂರು ಕಡೆಗಳಲ್ಲಿ ಗುರುವಾರ ರಾತ್ರಿ ಮಳೆ ಸುರಿದಿದೆ. ಈಶ್ವರಮಂಗಲ, ಸುಳ್ಯಪದವು , ಕರ್ನೂರು, ಕಾವು, ಕೌಡಿಚ್ಚಾರು, ಕುಂಬ್ರ, ಕೊಳ್ತಿಗೆ, ಮಾಡಾವು, ಬಡಗನ್ನೂರು ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಶುಕ್ರವಾರ ತುಂತುರು ಮಳೆ ಸುರಿದಿದೆ. ಗುರುವಾರ ರಾತ್ರಿ ಸುರಿದ ದಿಢೀರ್ ಮಳೆಯಿಂದಾಗಿ ರೈತರು ಅಂಗಳದಲ್ಲಿ ಒಣಹಾಕಿದ್ದ ಅಡಕೆ ಒದ್ದೆಯಾಗಿದ್ದು, ಕೆಲವೆಡೆ ಕೊಚ್ಚಿ ಹೋಗಿದೆ.
ಉಪ್ಪಿನಂಗಡಿ ಪೇಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಾದ ಕೊಕ್ಕಡ, ಇಳಂತಿಲ, ಆಲಂಕಾರು, ಕೈಲ, ರಾಮಕುಂಜ, ಹಳೆನೇರಿಂಕಿ, ಪೆರಾಬೆ, ಕುಂತೂರು ಮುಂತಾದೆಡೆ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಮಿಂಚು, ಗುಡುಗು, ಗಾಳಿಯೊಂದಿಗೆ ಆರಂಭಗೊಂಡು ಸುಮಾರು ಒಂದು ಗಂಟೆಗಳ ಕಾಲ ಧಾರಕಾರ ಮಳೆ ಸುರಿಯಿತು.
ಭಾರಿ ನಷ್ಟ: ಕೃಷಿಕರು ಮನೆಯಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಿಕೆ, ತೆಂಗಿನ ಕಾಯಿ ಮತ್ತಿತ್ತರ ಬೆಳೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಭಾರಿ ನಷ್ಟ ಸಂಭವಿಸಿದೆ. ಅಕಾಲಿಕ ಮಳೆಯಿಂದಾಗಿ ಕೃಷಿಕರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಆಲಂಕಾರು ಗ್ರಾಮದ ಶರವೂರು ನಗ್ರಿ ಆನಂದ ಶೆಟ್ಟಿ ಅವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಸುಮಾರು 9 ಕ್ವಿಂಟಾಲ್ ಅಡಕೆ, ಇದೇ ಗ್ರಾಮದ ನಡ್ಜಿರ್ ಕಿರಣ್ ಎಂಬುವವರ ಸುಮಾರು ಆರು ಕ್ವಿಂಟಾಲ್, ಅಮೈ ಎಂಬಲ್ಲಿ ರೈತರೊಬ್ಬರ ಸುಮಾರು 50 ಸಾವಿರದಷ್ಟು ಅಡಕೆ ಅಲ್ಲದೆ ಇನ್ನೂ ಹಲವೆಡೆ ಅಡಿಕೆ ನೀರಿನಲ್ಲಿ ಕೊಚ್ಚಿಹೋಗಿದೆ.
ಆಲಂಕಾರು ಗ್ರಾಮದ ಬುಡೇರಿಯಾ ಪಜ್ಜಡ್ಕ ನಿವಾಸಿ ಸೂಸಿ ಪದವು ಎಂಬುವವರು ಮನೆ ಸಮೀಪ ಕಟ್ಟಿಹಾಕಿದ್ದ ದನ ಸಿಡಿಲಿನ ಒಡೆತಕ್ಕೆ ಬಲಿಯಾಗಿದೆ. ಹಳೆನೇರಿಂಕಿ ಭಾಗದ ಬರೆಂಬಾಡಿ ಪ್ರದೇಶದ ಮನೆಗಳಲ್ಲಿನ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಶುಕ್ರವಾರ ಮಧ್ಯಾಹ್ನ ನೆಲ್ಯಾಡಿ, ಉಪ್ಪಿನಂಗಡಿ ಪರಿಸರದಲ್ಲಿ ಮತ್ತೆ ಅರ್ಧ ತಾಸು ಸಾಧಾರಣ ಮಳೆ ಸುರಿಯಿತು.
ಕೊಡಗಿನಲ್ಲಿ ಉತ್ತಮ ಮಳೆ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಕೆಲವು ನಿಮಿಷಗಳ ಕಾಲ ಸುರಿದ ಮಳೆ ತಂಪೆರೆಯಿತು. ಶುಕ್ರವಾರ ಬೆಳಗ್ಗಿನಿಂದಲೂ ಮಡಿಕೇರಿಯಲ್ಲಿ ಮೋಡ ಕವಿದ, ಮಂಜು ಮುಸುಕಿದ ವಾತಾವರಣವಿತ್ತು. ಇಬ್ಬನಿಯೂ ಸುರಿಯತೊಡಗಿತ್ತು. ಮಧ್ಯಾಹ್ನ ಕೆಲ ನಿಮಿಷಗಳ ಕಾಲ ಉತ್ತಮ ಮಳೆ ಕೂಡ ಬಿದ್ದು ಭೂಮಿ ತಂಪಾಯಿತು. ಮಾದಾಪುರ, ನಾಪೋಕ್ಲು, ಮೂರ್ನಾಡು, ಚೆಟ್ಟಳ್ಳಿ ಸೇರಿದಂತೆ ಕೊಡಗು ಜಿಲ್ಲೆಯ ಅನೇಕ ಕಡೆಯೂ ಉತ್ತಮ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

