ಮರವೂರು ಡ್ಯಾಂ ನಿಧಾನಗತಿ: ನೆರೆ ಭೀತಿ
-ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ಅಂದು 2012 ಜುಲೈ 17. ಭಾರಿ ಮಳೆ ಸುರಿದು ಮರವೂರಿನಲ್ಲಿ ಪಲ್ಗುಣಿ ನದಿ ಹರಿಯಲು ಜಾಗವಿಲ್ಲದೆ ನದಿ ತಟದಲ್ಲಿರುವ ಮೂರು ಮನೆಗಳಿಗೆ ನುಗ್ಗಿ ನೂರಾರು ತೆಂಗಿನ ಮರಗಳ ತೋಟಗಳನ್ನು ನೀರು ಪಾಲಾಗಿತ್ತು. ರಾತ್ರೋರಾತ್ರಿ ತಾವು ನಿಂತ ನೆಲೆಯನ್ನೇ ಕಳೆದುಕೊಂಡ ಕರಾಳ ರಾತ್ರಿಯದು. ಘಟನೆ ಸಂಭವಿಸಿ 7 ತಿಂಗಳು ಕಳೆದಿದೆ. ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಭೋರ್ಗರೆವ ಮಳೆಗಾಲ ಆರಂಭವಾಗಲಿದೆ. ಆದರೆ ಅಂದು ನಡೆಯುತ್ತಿದ್ದ ವೆಂಟೆಡ್ ಡ್ಯಾಂ ಕಾಮಗಾರಿ ಇಂದಿಗೂ ಕುಂಟುತ್ತಾ ಸಾಗಿದೆ. ಇಲ್ಲಿ ಇನ್ನೂ 26 ಮನೆಗಳಿದ್ದು, ಇಲ್ಲಿನ ಜನರು ಜೀವಭಯದಿಂದ ಜೀವನ ಸಾಗಿಸುವಂತಾಗಿದೆ.
ನದಿಯ ತಟವು ಕೃಷಿ ಭೂಮಿಗೆ ಹತ್ತಿರವಾಗಿದ್ದು, ತಡೆಗೋಡೆ ನಿರ್ಮಿಸದಿದ್ದರೆ ಈ ಮಳೆಗಾಲದಲ್ಲಿ ಕಳೆದ ವರ್ಷಕ್ಕಿಂತ ಅಧಿಕ ಹಾನಿ ಸಂಭವಿಸುವ ಭಯ ಗ್ರಾಮಸ್ಥರದ್ದು.
ಪಲ್ಗುಣಿ ನದಿಯಲ್ಲಿ ಈಗಾಗಲೇ ರಸ್ತೆ, ರೇಲ್ವೆ ಸೇತುವೆ ನಿರ್ಮಾಣಗೊಂಡಿದ್ದು, ಇವುಗಳ ಮಧ್ಯದಲ್ಲಿ ಮರವೂರು ಡ್ಯಾಂ ನಿರ್ಮಾಣ ಹಂತದಲ್ಲಿದೆ. ಇದಲ್ಲದೆ ರೇಲ್ವೆ ಸೇತುವೆ ಕೆಳಭಾಗದಲ್ಲಿ ಇನ್ನೊಂದು ಸೇತುವೆ ಸಿದ್ಧಗೊಳ್ಳುತ್ತಿದೆ. ಇದರ ಕಾಮಗಾರಿಯೂ ಅರ್ಧದಲ್ಲಿ ನಿಂತಿದೆ. ಎಂಕೆಸಿ ಕಂಪೆನಿ ಈ ಕಾಮಗಾರಿ ನಡೆಸುತ್ತಿದೆ.
ಕಳೆದ ವರ್ಷದ ಘಟನೆ: ಜುಲೈ 17 ರಂದು ರಾತ್ರೋರಾತ್ರಿ ಸುರಿದ ಭಾರಿ ಮಳೆಗೆ ನೆರೆ ನೀರು ಡ್ಯಾಂನಿಂದ ಹರಿಯಲು ಸಾಧ್ಯವಾಗದೆ, ದಡದಲ್ಲಿರುವ ಮೂರು ಮನೆ, ನೂರಕ್ಕಿಂತ ಹೆಚ್ಚು ತೆಂಗಿನಮರಗಳನ್ನು ಕೊಚ್ಚಿಕೊಂಡು ಹಾನಿಯುಂಟುಮಾಡಿತ್ತು. ಕಳೆದ ಜನವರಿಯಲ್ಲಿ ಪ್ರಾರಂಭಗೊಂಡಿರುವ ಅಣೆಕಟ್ಟು ಕೆಲಸ ಪೂರ್ತಿಗೊಳ್ಳದೆ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೆಲವೊಂದು ಕಿಂಡಿಗಳು ನೀರುಪಾಲಾಗಿದೆ. ಇದರಲ್ಲಿ ಓಸ್ವಾಲ್ಡ್ ಡಿಸೋಜ ಅವರ ಮನೆ, ಆಸ್ತಿಗೆ ಹಾನಿ ಸಂಭವಿಸಿದ್ದು, ಮನೆ ಕಳೆದುಕೊಳ್ಳುವಂತಾಯಿತು.
ಯಾಕಾಗಿ ಡ್ಯಾಂ: 7 ಪಂಚಾಯ್ತಿನ 11 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಮರವೂರಲ್ಲಿ ಈ ಡ್ಯಾಂ ನಿರ್ಮಾಣಗೊಳ್ಳುತ್ತಿದೆ. ಬೇಸಗೆ ಕಾಲದಲ್ಲಿ ನೀರು ಸಮುದ್ರಕ್ಕೆ ಸೇರಿ ನದಿ ನೀರು ಉಪ್ಪಾಗಿ ಪರಿವರ್ತನೆಗೊಳ್ಳುತ್ತದೆ. ಸಮುದ್ರಕ್ಕೆ ಸೇರುವ ನೀರನ್ನು ತಡೆಗಟ್ಟಿ ಕುಡಿಯುವ ನೀರಿನ ಬಳಕೆಗಾಗಿ ವೆಂಟೆಡ್ ಡ್ಯಾಂ ಕಟ್ಟಲಾಗುತ್ತದೆ.
ಗ್ರಾಮಸ್ಥರ ಬದುಕು ಒಡೆದ ಕಟ್ಟೆ : ಮರವೂರು ಡ್ಯಾಂನ ನದಿ ತಟದಲ್ಲಿರುವ ಕೃಷಿ ಆಧಾರಿತ ಪಡುಶೆಡ್ಡೆ ಪ್ರದೇಶವಿದೆ. ಇಲ್ಲಿ ಕಬ್ಬು, ಭತ್ತ ಕೃಷಿ ಮಾಡುತ್ತಿದ್ದಾರೆ. ದಡದಲ್ಲಿರುವ ನದಿ ನೀರಿಗೆ ಡ್ಯಾಂ ಕಟ್ಟಿದ ಪರಿಣಾಮ ಮಳೆಗಾಲದಲ್ಲಿ ನೆರೆ ನೀರು ಸರಾಗವಾಗಿ ಸಾಗಲು ಸ್ಥಳಾವಕಾಶವಿಲ್ಲದೆ ತಗ್ಗು ಪ್ರದೇಶದಲ್ಲಿರುವ ತೋಟ, ಮನೆಗಳಿಗೆ ನುಗ್ಗಿ ಹಾನಿ ಸಂಭವಿಸುತ್ತದೆ.
ತಡೆಗೋಡೆ ಇಲ್ಲ: ಡ್ಯಾಂ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲದೊಳಗೆ ಮುಗಿಯುವ ಲಕ್ಷಣ ಹೊಂದಿಲ್ಲ. ಕಳೆದ ಬಾರಿ ನೆರೆ ನೀರಿಗೆ ಹಾನಿಗೊಳಗಾದ ಕಿಂಡಿಗಳನ್ನು ಇನ್ನೂ ಪೂರ್ತಿಗೊಳಿಸಲಾಗಿಲ್ಲ. ಹಾನಿಗೊಳಗಾದ ಮನೆಗಳ ಬಳಿ ಎತ್ತರದ ತಡೆಗೋಡೆ ನಿರ್ಮಾಣಗೊಂಡಿಲ್ಲ.
ನದಿ ಮಧ್ಯಭಾಗದಲ್ಲಿ ರಸ್ತೆ: ಡ್ಯಾಂನ ಎಡ ಮತ್ತು ಬಲಭಾಗದಲ್ಲಿ ನದಿ ಮಧ್ಯಕ್ಕೆ ಮಣ್ಣು ಹಾಕಿ ಎರಡು ಬದಿಗೆ ರಸ್ತೆ ಸಂಪರ್ಕಿಸಲಾಗಿದೆ. ಇವುಗಳ ಮುಖಾಂತರ ನದಿ ತಟಕ್ಕೆ ಮಣ್ಣು ತಂದು ಸುರಿಯುತ್ತಿದ್ದಾರೆ.ಡ್ಯಾಂ ಕಾಮಗಾರಿ ನಡೆಯುವ ಸ್ಥಳಕ್ಕೆ ಮಣ್ಣು ಹಾಕಿ ಇನ್ನೊಂದು ರಸ್ತೆ ನಿರ್ಮಿಸಿಲಾಗಿದೆ. ನದಿ ಮಧ್ಯದಲ್ಲಿ ಮೂರು ರಸ್ತೆ ನಿರ್ಮಾಣವಾಗಿದೆ.
ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ: ಪಡುಶೆಡ್ಡೆಯಲ್ಲಿ ನೆರೆಭೀತಿ ಎದುರಿಸುತ್ತಿರುವ 24 ಕುಟುಂಬಗಳ ಪಟ್ಟಿ ಮಾಡಲಾಗಿದೆ. ಪಡುಶೆಡ್ಡೆಯಲ್ಲಿ ಸರ್ಕಾರಿ ಜಾಗದ ಕೊರತೆಯಿದ್ದು, ಬೇರೆ ಕಡೆ ತೆರಳಲು ಗ್ರಾಮಸ್ಥರು ಒಪ್ಪಿಕೊಳ್ಳುತ್ತಿಲ್ಲ. ಜಾಗದ ಸಮೀಕ್ಷೆ ನಡೆಸಲಾಗುತ್ತಿದೆ ಎನ್ನುತ್ತಾರೆ ಪಡುಶೆಡ್ಡೆ ಗ್ರಾಮ ಪಂಚಾಯ್ತಿ ಗ್ರಾಮಕರಣಿಕ ಸುರೇಶ್.
ಮೇ ತಿಂಗಳಲ್ಲಿ ಪೂರ್ಣ: ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಸತ್ಯನಾರಾಯಣ, ಮರವೂರು ವೆಂಟೆಂಡ್ ಡ್ಯಾಂ ನಿರ್ಮಾಣ ರು. 18 ಕೋಟಿ ವೆಚ್ಚದ್ದಾಗಿದ್ದು, 2010-11ರಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಡ್ಯಾಂನ ಎಡ,ಬಲಭಾಗದಲ್ಲಿ 200ಮೀ ಉದ್ದದಲ್ಲಿ ತಡೆಗೋಡೆ ಕಟ್ಟಲಾಗುತ್ತಿದೆ. ಹಾನಿಗೊಳಗಾದ ಡ್ಯಾಂನ ಪಿಲ್ಲರ್ಗಳನ್ನು ಇನ್ಸೂರೆನ್ಸ್ ಕಂಪನಿ ಸಮೀಕ್ಷೆ ನಡೆಸುವ ಪ್ರಕ್ರಿಯೆ ತಡವಾದ ಪರಿಣಾಮ ಅಲ್ಲಿನ ಕಾಮಗಾರಿ ನಿಧಾನವಾಗಿದೆ. ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗೆ ಮನವಿ: 1974ರಲ್ಲಿ ದೊಡ್ಡ ನೆರೆ ಬಂದಾಗಲೂ ಕಳೆದ ಬಾರಿ ಸಂಭವಿಸಿದ ಅನಾಹುತ ಆಗಿರಲಿಲ್ಲ. ಒಂದೇ ಕಡೆ ನೀರು ಹರಿದ ಪರಿಣಾಮ ಸಮಸ್ಯೆ ಉಂಟಾಗಿದೆ. ನೆರೆ ಸಮಯದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಸರ್ಕಾರದಿಂದ ಜಾಗವನ್ನು ಪರಿಶೀಲಿಸಿ ವರದಿ ಸಲ್ಲಿಸಲು ಆದೇಶ ಬಂದಿದೆ. ಪಡುಶೆಡ್ಡೆ ಅಲಾಡಿಯಲ್ಲಿ ಸರ್ಕಾರಿ ಜಾಗವಿದ್ದರೂ ಪಂಚಾಯ್ತಿ ಅದನ್ನು ಪರಿಗಣಿಸುತ್ತಿಲ್ಲ ಎನ್ನುತ್ತಾರೆ ಪಡುಶೆಡ್ಡೆ ಗ್ರಾಮ ಪಂಚಾಯ್ತಿ ಸದಸ್ಯ ವಿಕ್ಟರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

