ಜೆಡಿಎಸ್ನತ್ತ ಡೀವಿ ಸಾಬೀತು: ಧನಂಜಯ ಕುಮಾರ್
ಮಂಗಳೂರು/ಉಡುಪಿ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಜೆಡಿಎಸ್ಗೆ ಹೋಗಲು ಸಿದ್ಧತೆ ನಡೆಸುತ್ತಿರುವುದು ಸಾಬೀತಾಗಿದೆ ಎಂದು ಕೆಜೆಪಿ ಮುಖಂಡ ಧನಂಜಯ ಕುಮಾರ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿ ಚುನಾವಣಾ ಸಿದ್ಧತಾ ಸಭೆಗೆ ಅವರು ಗೈರಾಗಿರುವುದನ್ನು ಉಲ್ಲೇಖಿಸಿ, ಬಿಜೆಪಿಯಲ್ಲಿ ಡೀವಿ ಮೂಲೆಗುಂಪಾಗುವುದಾಗಿ ಹೇಳಿರುವುದನ್ನು ಪುನರುಚ್ಚರಿಸಿದರು.
ಈ ವಿಚಾರವನ್ನು ತಾನು ಅಂದೇ ಹೇಳಿದ್ದೆ, ಅದೀಗ ಸಾಬೀತಾಗಿದೆ. ಡೀವಿ ಜೆಡಿಎಸ್ ಕುರ್ಚಿಯಲ್ಲಿ ಕೂತರೆ ಅದರ ಲಾಭ ಕರಾವಳಿಯಲ್ಲಿ ಕೆಜೆಪಿಗೆ ಆಗಲಿದೆ ಎಂದರು.
ಕೆಜೆಪಿ ಚುನಾವಣೆ ಸಿದ್ಧತೆ: ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಶೇ.40 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿಯಲ್ಲಿ ಉಳಿದಿರುವ ಮುಖಂಡರು ಕೆಜೆಪಿ ಸೇರ್ಪಡೆ ಬಗ್ಗೆ ಅಧಿಕೃತ ಆಹ್ವಾನ ನೀಡುವುದಿಲ್ಲ. ಅವರಾಗಿ ಬರುವುದಿದ್ದರೆ ಸ್ವಾಗತ ಎಂದರು.
ಇದೇ ಸಂದರ್ಭ ದ.ಕ. ಜಿಲ್ಲೆಯ ಪದಾಧಿಕಾರಿಗಳನ್ನು ಘೋಷಿಸಿದರು. ರಾಜ್ಯ ಕಾರ್ಯದರ್ಶಿ ರಾಮಚಂದರ್ ಬೈಕಂಪಾಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮರಿಯಮ್ಮ ಥಾಮಸ್, ಜಿಲ್ಲಾಧ್ಯಕ್ಷ ರವೀಂದ್ರ ರೈ ಮತ್ತಿತರರಿದ್ದರು.
ಡೀವಿ ಮೂಲೆಗುಂಪು: ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ್, ಬಿಜೆಪಿಯಲ್ಲಿ ಡಿ.ವಿ. ಸದಾನಂದ ಗೌಡ ಮೂಲೆಗುಂಪಾಗಲು ಸಂಸದ ಅನಂತ ಕುಮಾರ್ ಕಾರಣ ಎಂದರು.
ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಗಳು ಅಂತ ಯಾರಿದ್ದಾರೋ ಅವರನ್ನೆಲ್ಲಾ ಅನಂತಕುಮಾರ್ ಮೂಲೆಗುಂಪು ಮಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರನ್ನು ಕೂಡ ಮೂಲೆಗುಂಪು ಮಾಡುವುದಕ್ಕೆ ಇದೇ ರೀತಿ ಪ್ರಯತ್ನ ಮಾಡಿದ್ದರು. ಅವರ ಮೂಲೆಗುಂಪು ಮಾಡುವ ಮುಂದಿನ ಸರದಿ ಜಗದೀಶ್ ಶೆಟ್ಟರ್ ಅವರದ್ದು ಎಂದರು.
ಹಾಲಾಡಿ ಅವರೇ ಬಾಯಿಬಿಡಿ: ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟರು ಮುಂದಿನ ರಾಜಕೀಯ ನಡೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ರಾಜಕೀಯವಾಗಿ ಒಳ್ಳೆಯದಲ್ಲ. ಅವರು ಮೌನವಾಗಿರುವುದನ್ನು ನೋಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದಿಲ್ಲ ಎಂದು ಸಂಶಯ ಉಂಟಾಗುತ್ತಿದೆ ಎಂದ ಧನಂಜಯಕುಮಾರ್, ಹಾಲಾಡಿ ತಮ್ಮ ನಾಯಕ ಯಾರೂ ಅಂತ ಹೇಳಿದರೆ ಅದು ಯಡಿಯೂರಪ್ಪ ಅಂತಾನೇ ಹೇಳುತ್ತಾರೆ ಎನ್ನುವುದು ಮಾತ್ರ ಸತ್ಯ ಎಂದರು.
ಕೆಜೆಪಿಗೆ ಸಮಾಧಾನಕರ ಮತ ಸಿಗಲಿದೆ: ಮುಂದಿನ ನಗರಾಡಳಿತ ಚುನಾವಣೆಯಲ್ಲಿ ಎಲ್ಲಾ ಕಡೆಗಳಲ್ಲಿ ಸ್ಪರ್ಧಿಸಲಿರುವ ಕೆಜೆಪಿಯೇ ಗೆಲ್ಲುತ್ತದೆ ಎನ್ನುವ ಭರವಸೆ ಇಲ್ಲ. ಆದರೆ, ಸಮಾಧಾನಕರ ಮತಗಳನ್ನು ಗಳಿಸುತ್ತದೆ ಎನ್ನುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಭಾನುವಾರ, ಮುಂಬರುವ ನಗರಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಸಮಾಲೋಚನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ,
ಉಡುಪಿ ಸೇರಿದಂತೆ ರಾಜ್ಯದ 208 ನಗರಾಡಳಿತ ಮತ್ತು 6 ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯ ಸ್ಥಾನಗಳಲ್ಲಿ ಕೆಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಅದಕ್ಕಾಗಿ ಈಗಾಗಲೇ ಪಕ್ಷದ ವತಿಯಿಂದ ಪ್ರತಿಯೊಂದು ನಗರಾಡಳಿತ ವ್ಯಾಪ್ತಿಯಲ್ಲಿ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಉಡುಪಿಯ 2 ಪುರಸಭೆ, 1 ಪಟ್ಟಣ ಪಂಚಾಯಿತಿ ಮತ್ತು 1 ನಗರಸಭೆಯ ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ನಗರಾಡಳಿತ ಚುನಾವಣೆಗಳು ಮಾ. 7ರಂದು ನಡೆಸುವುದಕ್ಕೆ ಚುನಾವಣಾ ಆಯೋಗ ನಿರ್ಧರಿಸಿರುವುದನ್ನು ಕೆಜೆಪಿ ಸ್ವಾಗತಿಸುತ್ತದೆ. ಪ್ರತಿ 5 ವರ್ಷಕ್ಕೊಮ್ಮೆ ತಮ್ಮನ್ನು ಆಳುವವರು ಯಾರಾಗಬೇಕು ಎಂದು ನಿರ್ಧರಿಸುವುದು ಜನರ ಹಕ್ಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

