ದಕ್ಷಿಣ ಕನ್ನಡ

ಚಿನ್ನ, ನಗದಿನೊಂದಿಗೆ ಯುವತಿ ನಾಪತ್ತೆ

Published On :

ಬೈಂದೂರು: ಇಲ್ಲಿನ ಮೂಳೆಬೈಲು ಗ್ರಾಮದ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ಸೋಮವಾರ ನಡೆದಿದೆ. ದೊಟ್ಟಮ್ಮ ಮತ್ತು ಶೇಷ ಪೂಜಾರಿ ಎಂಬವರ ಪುತ್ರಿ ಸವಿತಾ (21) ಕಾಣೆಯಾದ ಯುವತಿ. ಸೋಮವಾರ ಬೆಳಗ್ಗೆ 7.15ಕ್ಕೆ ಮನೆಯ ಸಮೀಪದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಮನೆಗೆ ವಾಪಸು ಬಾರದೇ ಕಾಣೆಯಾಗಿದ್ದಾಳೆ. ಹೋಗುವಾಗ ಮನೆಯಿಂದ 17 ಪವನ್ ಚಿನ್ನ, 3,95,000 ನಗದು ಹಾಗೂ ಕವಾಟಿನ ಬೀಗವನ್ನು ತೆಗೆದುಕೊಂಡು ಹೋಗಿರುತ್ತಾಳೆ. ಅಪರಾಹ್ನ 3.37 ಗಂಟೆಗೆ ಸವಿತಾಳು ತನ್ನ ಅಮ್ಮನ ಅಕ್ಕ ನಾಗಮ್ಮ ಎಂಬವರ ಮೊಬೈಲಿಗೆ ಕರೆಮಾಡಿ ನಾನು ಈ ದಿನ ಮದುವೆಯಾಗಿರುತ್ತೇನೆ. ನೀವು ನನ್ನನ್ನು ಹುಡುಕುವುದು ಬೇಡ ಎಂಬುದಾಗಿ ತಿಳಿಸಿರುತ್ತಾಳೆ. ಈ ಬಗ್ಗೆ ದೊಟ್ಟಮ್ಮ ಅವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಯೂಷನ್‌ಗೆ ಹೋದ ಬಾಲಕಿ ನಾಪತ್ತೆ
ಮೂಲ್ಕಿ: ಹಳೆಯಂಗಡಿ ಗ್ರಾಮದ ಕೊಳುವೈಲು ನಿವಾಸಿ ಭೋಜ ಕುಂದರ್ ಅವರ ಪುತ್ರಿ ತೃಪ್ತಿ(16) ಸೋಮವಾರ ಮಧ್ಯಾಹ್ನ ಮನೆಯಿಂದ ಟ್ಯೂಷನ್‌ಗೆ ಹೋದವಳು ವಾಪಾಸು ಬಾರದೇ ಕಾಣೆಯಾಗಿದ್ದಾಳೆ. ಈ ಬಗ್ಗೆ ಆಕೆಯ ತಾತ ಸಂಜೀವ ಕುಕ್ಯಾನ್ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತೃಪ್ತಿ ಗುಂಡು ಮುಖ, ಸಾಧಾರಣ ಮೈಕಟ್ಟು,150 ಸೆ.ಮಿ ಉದ್ದ ಹೊಂದಿದ್ದು ಗೋದು ಮೈಬಣ್ಣ, ಹಸಿರು ಬಣ್ಣದ ಬಿಳಿ ಚುಕ್ಕೆಯ ಚೂಡಿದಾರ್, ಕಪ್ಪು ಪೈಜಾಮ ಧರಿಸಿದ್ದು ಕನ್ನಡ, ತುಳು ಭಾಷೆ ಬಲ್ಲವಳಾಗಿದ್ದಾಳೆ. ಮಾಹಿತಿ ಸಿಕ್ಕವರು ಪೋಲಿಸ್ ಆಯುಕ್ತ ಮಂಗಳೂರು ಮಹಾನಗರ ದೂರವಾಣಿ 0824- 2220857 ಅಥವಾ ಮೂಲ್ಕಿ ಠಾಣೆ ನಿರೀಕ್ಷಕರು ದೂರವಾಣಿ 0824- 2290533, ಮೊಬೈಲ್ 9480805332 ಸಂಪರ್ಕಿಸುವಂತೆ ಮೂಲ್ಕಿ ಪೊಲೀಸ್ ಠಾಣಾ ನಿರೀಕ್ಷಕ ಬಶೀರ್ ಅಹಮ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬ್ರಹ್ಮಾವರ: ಇಲ್ಲಿನ ಹಂದಾಡಿ ಗ್ರಾಮದ ಗೋಳಿಯಾರಮನೆ ಎಂಬಲ್ಲಿ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ನಿವಾಸಿ ಚಂದ್ರ ಪೂಜಾರಿ ಅವರ ತಾಯಿ ಮೀನಾಕ್ಷಿ ಪೂಜಾರಿ (55) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಮನೆಯ ಬಳಿಯ ಬಾಲಕೃಷ್ಣ ರೈ ಎಂಬವರ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಚಂದ್ರ ಪೂಜಾರಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಗುಪ್ಸೆ: ಬಾಲಕ ನೇಣಿಗೆ ಶರಣು
ಕಾರ್ಕಳ: ಮಾಳ ಗ್ರಾಮದ ಪರಬೆಟ್ಟು ಎಂಬಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಸುಂದರ ಕೊಟ್ಯಾನ್ ಎಂಬವರ ಪುತ್ರ ಅಜಿತ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಸುಮಾರು 1 ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇದರಿಂದ ಜಿಗುಪ್ಸೆಗೊಂಡು ಮನೆ ಸಮೀಪದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಭರಣ ಅಂಗಡಿಗೆ ಐಟಿ ದಾಳಿ
ವಿಟ್ಲ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ಮಂಗಳವಾರ ಮಧ್ಯಾಹ್ನ ಆದಾಯ ಇಲಾಖಾಧಿಕಾರಿಗಳು ದಾಳಿ ನಡೆಸಿ ಅಂಗಡಿಯ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.  ವಿಟ್ಲ- ಪುತ್ತೂರು ರಸ್ತೆಯ ಎಂಪೈರ್ ಮಹಲ್‌ನಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಯ ಮುಂಭಾಗಿಲನ್ನು ಮುಚ್ಚಿ ರಾತ್ರಿಯವರೆಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಇಲಾಖಾ ಮೂಲದ ಅಧಿಕಾರಿಗಳಿಂದ ತಿಳಿದು ಬಂದಿದೆ. ಆದರೆ ದಾಳಿಯ ಕುರಿತಂತೆ ಹೆಚ್ಚಿನ ವಿವಿರಗಳು ತಿಳಿದುಬಂದಿಲ್ಲ.
ರೈಲು ಹಳಿ ಬಳಿ ಶವ ಪತ್ತೆ
ಮೂಲ್ಕಿ: ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಅತಿಕಾರಿಬೆಟ್ಟುವಿನ ಕೊಲಕಾಡಿಯಲ್ಲಿ ಮಂಗಳವಾರ ಬೆಳಗ್ಗೆ ರೈಲು ಹಳಿ ಬಳಿ ಕವತ್ತಾರು ನಿವಾಸಿ ಸುಮಾರು 60- 65 ಪ್ರಾಯದ ಜಾರಪ್ಪ ಮೂಲ್ಯರ ಶವ ಪತ್ತೆಯಾಗಿದೆ. ರೈಲು ಹಳಿ ದಾಟುತ್ತಿದ್ದಾಗ ರೈಲು ಅಡಿಗೆ ಸಿಲುಕಿ ಮೃತ ಪಟ್ಟಿರಬೇಕು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಗೆ  ಸೂಚನೆ
ಮಂಗಳೂರು: ರಾಜ್ಯದ ನಗರಾಡಳಿತ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಘೋಷಣೆಗೊಂಡಿದ್ದು, ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಸಹಕಾರದಿಂದ ದೃಢೀಕರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮುಂಬರುವ ಚುನಾವಣೆಗಳಿಗೆ ಭದ್ರ ಅಡಿಪಾಯ ಒದಗಿಸುವ ಸಲುವಾಗಿ ಪೂರ್ವ ಸಿದ್ಧತೆ ಮತ್ತು ಸ್ಥಳೀಯ ಸ್ಥಿತಿಗತಿಯ ಅವಲೋಕನ, ಪಕ್ಷದಲ್ಲಿ ಇರಬಹುದಾದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಅಭ್ಯರ್ಥಿಗಳನ್ನು ಗೆಲ್ಲುವಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಅಧಿಕೃತ ಅಭ್ಯರ್ಥಿಯನ್ನು ಕೂಡಲೇ ನಿರ್ಧರಿಸಬೇಕಾಗಿದ್ದು, ಚುನಾವಣಾ ಕಾರ್ಯಗಳ ಮೇಲುಸ್ತುವಾರಿ ಮತ್ತು ಜವಾಬ್ದಾರಿಗಳ ಪಟ್ಟಿ ನೀಡಲಾಗಿದೆ. ಚುನಾವಣೆ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ಪಕ್ಷದ ಅಭ್ಯರ್ಥಿಗಳು ಕಾರ್ಯನಿರ್ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.