ವಿಶಿಷ್ಟ ಮಕ್ಕಳ ಕ್ರೀಡೋತ್ಸವಕ್ಕೆ ಚಾಲನೆ
ಮಂಗಳೂರು: 6 ಜಿಲ್ಲೆಯಿಂದ 700 ಭಿನ್ನ ಸಾಮರ್ಥ್ಯದ ಮಕ್ಕಳು ಭಾಗಿ
ಮಂಗಳೂರು: ನೋಡಲು ದೊಡ್ಡವರಾಗಿ ಕಂಡರೂ, ಅವರು ಮುಗ್ಧ ಮಕ್ಕಳಂತೆ. ಆಟಕ್ಕೆ ಮೈದಾನದಲ್ಲಿ ನಿಂತರೆ ಸಾಕು ಎಲ್ಲದ್ದಕ್ಕೂ ಸೈ ಎಂದು ಧುಮುಕ್ಕುತ್ತಾರೆ. ಸುಡುಬಿಸಿಲಿನ ತಾಪಕ್ಕೂ ಲೆಕ್ಕಿಸದೆ ತಮ್ಮ ಶಿಕ್ಷಕರ ಆಜ್ಞೆಯನ್ನು ಪಾಲಿಸುತ್ತಿರುವ ಇವರು ರಾಜ್ಯದ ವಿವಿಧ ಕಡೆಯಿಂದ ಬಂದ ವಿಶಿಷ್ಟ ಸಾಮರ್ಥ್ಯದ ಮಕ್ಕಳು.
ಶುಕ್ರವಾರ ಶಕ್ತಿನಗರದ ನಾಲ್ಯಪದವು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ವಿಶಿಷ್ಟ ಮಕ್ಕಳ ಕ್ರೀಡೋತ್ಸವದಲ್ಲಿ ನೂರಾರು ಮಂದಿ ಭಿನ್ನ ಸಾಮರ್ಥ್ಯದ ಮಕ್ಕಳು ಪಾಲ್ಗೊಂಡಿದ್ದರು. ಕ್ರೀಡೋತ್ಸವವನ್ನು ಉದ್ಘಾಟಿಸಿದ ಉದ್ಯಮಿ ವಿನೋದ್ ಶೆರ್ಲೇಕರ್, ಮಕ್ಕಳಿಗೆ ಶುಭ ಹಾರೈಸಿದರು.
ತಮ್ಮ ಶಾಲೆಯನ್ನು ಪ್ರತಿನಿಧಿಸಿ ಕ್ರೀಡಾಂಗಣದಲ್ಲಿ ಮಕ್ಕಳು ಪಥ ಸಂಚಲನ ನಡೆಸಿದರು. ಸಾನಿಧ್ಯ ವಸತಿಯುತ ಶಾಲೆಯ ದಶಮಾನೋತ್ಸವದ ಅಂಗವಾಗಿ ನಡೆದ ಕ್ರೀಡೋತ್ಸವಕ್ಕೆ ಬಣ್ಣದ ಬೆಲೂನುಗಳನ್ನು ಹಾರಿ ಬಿಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ರಾಜ್ಯದ 16 ಜಿಲ್ಲೆಯಿಂದ 700 ಭಿನ್ನ ಸಾಮರ್ಥ್ಯದ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ 150 ಸಹಾಯಕಿಯರು ಭಾಗವಹಿಸಿದ್ದರು.
ಹೆಚ್ಚು ಸಾಮರ್ಥ್ಯ ಮತ್ತು ಕಡಿಮೆ ಸಾಮರ್ಥ್ಯ ಎಂಬ ಎರಡು ವಿಭಾಗದಲ್ಲಿ 200 ಮೀ, 100 ಮೀ ಓಟ, 50 ಮೀ ಓಟ, ಚೆಂಡೆಸೆತ ಸ್ಫರ್ಧೆ ನಡೆದವು. 5 ರಿಂದ 60 ವರ್ಷ ವಯೋವುತಿಯ ವಿಶಿಷ್ಟರು ಪಾಲ್ಗೊಂಡಿದ್ದರು. 5 ವರ್ಷದ ಪುಟಾಣಿಗಳಿಗೆ 50 ಮೀ ಓಟ ಮತ್ತು ಚೆಂಡೆಸೆತ ಸ್ಪರ್ಧೆಗಳಿದ್ದವು.
ಕೊಡಗಿನ ಸುಂಟಿಕೊಪ್ಪದ ಸ್ವಸ್ಥಾ ಸಂಸ್ಥೆಯ ಕೋಚ್ ಬಿಜು, 'ಇವರಿಗೆ ಸ್ಪರ್ಧೆಗಳೆಂದರೆ ತುಂಬಾ ಇಷ್ಟ. ಓದಿಗಿಂತಲೂ ಆಟಗಳಿಗೆ ತುಂಬಾ ಆಸಕ್ತಿ ವಹಿಸುತ್ತಾರೆ. ಯಾವುದಾದರೂ ಕ್ರೀಡೆ ಅವಕಾಶವಿದೆ ಎಂದರೆ ಸಾಕು ಅಭ್ಯಾಸ ಮಾಡುವ ಅಂತ ದುಂಬಾಲು ಬೀಳುತ್ತಾರೆ. ಇವರ ಮನಃಸ್ಥಿತಿ ಸರಿ ಮಾಡುವುದಾದರೆ ಚಿಕ್ಕಂದಿನಲ್ಲೇ ಶಾಲೆಗೆ ಸೇರಿಸಿದರೆ ಉತ್ತಮ. ದೊಡ್ಡವರಾದರೆ ಅವರನ್ನು ತಿದ್ದುವುದು ಕಷ್ಟ' ಎನ್ನುತ್ತಾರೆ.
ಇಲ್ಲಿನ 5 ಮಂದಿ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ 4 ಚಿನ್ನ, 3 ಬೆಳ್ಳಿ, 2 ಕಂಚುಗಳನ್ನು ಗೆದ್ದಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು.
ಬೆಂಗಳೂರಿನ ಕೆಪಿಎಎಂಆರ್‌ಸಿ ಸಂಸ್ಥೆಯ ಕೃಷ್ಣಮೂರ್ತಿ, 6 ಮಂದಿ ಹಿರಿಯರನ್ನು ಸ್ಪರ್ಧೆಗೆ ಕರೆದುಕೊಂಡು ಬಂದಿದ್ದು, ಇವರು ಹಿಂದೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿರುತ್ತಾರೆ ಎಂದರು.
ಉದ್ಯಮಿಗಳಾದ ಸುಧಾಕರ್ ಆಳ್ವ, ಪ್ರೇಮಾನಂದ ಶೆಟ್ಟಿ, ಅಮೃತ ವಿವೇಕ್‌ರಾಜ್, ಪಾಲಿಕೆ ಸದಸ್ಯೆ ಮರಿಯಮ್ಮ ಥೋಮಸ್, ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ಮಹೋತ್ಸವದ ಸಂಚಾಲಕ ಜಗದೀಶ್ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

