ದಕ್ಷಿಣ ಕನ್ನಡ

ಇಂದು ಬೆಳ್ತಂಗಡಿ ತಾಲೂಕು 12ನೇ ಸಾಹಿತ್ಯ ಸಮ್ಮೇಳನ

Published On :

ಬೆಳ್ತಂಗಡಿ: ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಬೆಳ್ತಂಗಡಿ ತಾಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶನಿವಾರ ವೇಣೂರಿನ ಬಾಹುಬಲಿ ಸಭಾಭವನದಲ್ಲಿ ನಡೆಯಲಿದ್ದು ಸಮ್ಮೇಳನಾಧ್ಯಕ್ಷರಾಗಿ ಬೆಳ್ತಂಗಡಿಯ ಖ್ಯಾತ ಆಯುರ್ವೇದ ವೈದ್ಯ, ಜ್ಯೋತಿಷಿ, ಸಾಹಿತ್ಯ ಚಿಂತಕ, ಪುಸ್ತಕ ಪ್ರೇಮಿ ಡಾ. ಟಿ.ಎನ್ ತುಳಪುಳೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಕುಗ್ರಾಮ ದಿಡುಪೆಯ ಆನಡ್ಕ ಎಂಬಲ್ಲಿನ ನಾರಾಯಣ ಮುಕುಂದ ತುಳಪುಳೆ ಮತ್ತು ರಮಾಬಾಯಿ ದಂಪತಿ ಪುತ್ರರಾಗಿ 1935 ಜನವರಿ 18ರಂದು ಹುಟ್ಟಿದ ಟಿ. ಎನ್. ತುಳಪುಳೆ ಹುಬ್ಬಳ್ಳಿಯಲ್ಲಿ ವೈದ್ಯವಿಶಾರದ ಮತ್ತು ಆಯುರ್ವೇದದಲ್ಲಿ ಪದವಿಯನ್ನು ಪಡೆದು 1962ರಲ್ಲಿ ಬೆಳ್ತಂಗಡಿಯಲ್ಲಿ ವೈದ್ಯ ವೃತ್ತಿ ಆರಂಭಿಸಿದವರು. ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ವಿವಿಧ ನಿಯತಕಾಲಿಕಗಳಿಗೆ ಬರೆದಿರುವ ಡಾ. ತುಳಪುಳೆ ಸಾಹಿತ್ಯ ರಚನೆಗಿಂತಲೂ ಹೆಚ್ಚಾಗಿ ಓರ್ವ ಉತ್ತಮ ಓದುಗನಾಗಿ, ಅತ್ಯುತ್ತಮ ಪುಸ್ತಕ ಪ್ರೇಮಿ , ಅಪೂರ್ವ ಪುಸ್ತಕ ಸಂಗ್ರಾಹಕನಾಗಿ ಸಾಹಿತ್ಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವವರು. ಮಂದಾರದ ಹೂವುಗಳು ಲೇಖನಗಳ ಸಂಗ್ರಹವನ್ನೂ ಪ್ರಕಟಿಸಿದ್ದಾರೆ. ಹೊರನಾಡ ಕನ್ನಡಿಗರಿಗೆ ಸೇವಾಸಂಸ್ಥೆಯೊಂದರ ಮೂಲಕ 150 ಕ್ಕೂ ಹೆಚ್ಚು ಗ್ರಂಥಗಳನ್ನು ಕೊಡುಗೆಯಾಗಿ ಸಮರ್ಪಿಸಿದ್ದಾರೆ. ಧಾರ್ಮಿಕ ಸಾಹಿತ್ಯ ರಚನೆಯಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ತುಳಪುಳೆ  ಧರ್ಮ, ಪುರಾಣ, ಶಾಸ್ತ್ರ, ಸಂಗೀತ, ನಾಟ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಾಹಿತ್ಯ, ವಿಮರ್ಶೆ, ಸಂಶೋಧನೆ, ಭಾಷೆ, ವ್ಯವಹಾರ, ವೈದ್ಯ, ಜ್ಯೋತಿಷ್ಯ, ಭೂಗೋಳ, ಜೀವನಚರಿತ್ರೆ, ತಂತ್ರ, ಮುಂತಾದ ಅನೇಕ ಗ್ರಂಥಗಳು, ನಿಯತಕಾಲಿಕಗಳು, ಎಲ್ಲೂ ಸಿಗದ ಕೆಲವು ಪುಸ್ತಕಗಳು ಇವರ ಸಂಗ್ರಹದಲ್ಲಿದೆ. ಸುಮಾರು 65ಕ್ಕೂ ಹೆಚ್ಚು ನಿಯತಕಾಲಿಕಗಳ ಚಂದಾದಾರರಾಗಿ ವರ್ಷಕ್ಕೆ ಕನಿಷ್ಠ ರು. 30-35 ಸಾವಿರ ಪುಸ್ತಕ ಸಂಗ್ರಹಕ್ಕಾಗಿಯೇ ಖರ್ಚು ಮಾಡುತ್ತಾರೆ. ಸುಮಾರು 8 ಸಾವಿರಕ್ಕೂ ಮಿಕ್ಕಿದ ಗ್ರಂಥ ರಾಶಿ ಇವರ ಬಳಿ ಇದೆ. ಲತಾ ತುಳುಪುಳೆ ಅವರನ್ನು ವಿವಾಹವಾಗಿ ಸಂತುಷ್ಟ ದಾಂಪತ್ಯ ಜೀವನ ಸಾಗಿಸುತ್ತಿರುವ ಇವರಿಗೆ ಇವರ ಬಳಿ ಇರುವ ಪುಸ್ತಕಗಳ ಮಹಾರಾಶಿಯೇ ಮಕ್ಕಳಾಗಿದೆ ಎಂದರೆ ತಪ್ಪಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.