ದಕ್ಷಿಣ ಕನ್ನಡ

ಅಂಗನವಾಡಿಗಳಲ್ಲಿ ತೆಂಗಿನಕಾಯಿ ಇಲ್ಲದ ಗಂಜಿಚಟ್ನಿ!

Published On :

 ಆತ್ಮಭೂಷಣ್
ಮಂಗಳೂರು: 'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಎನ್ನುವುದು ಎಷ್ಟು ನಿಜವೋ 'ತೆಂಗಿನಕಾಯಿ ಇಲ್ಲದೆ ಗಂಜಿ ಚಟ್ನಿ ಇಲ್ಲ' ಎನ್ನುವುದು ಅಷ್ಟೇ ನಿಜ.
ಆದರೆ ದಕ್ಷಿಣ ಕನ್ನಡದ ಅಂಗನವಾಡಿಗಳಲ್ಲಿ ಮಾತ್ರ ಈ ಮಾತು ಸುಳ್ಳಾಗಿದೆ, ಯಾಕೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿಗಳಿಗೆ ಪೂರೈಸುತ್ತಿರುವ ಮೆನುವಿನಲ್ಲಿ ತೆಂಗಿನಕಾಯಿ ಇಲ್ಲ. ಗಂಜಿ ಚಟ್ನಿಗೆ ಉಪ್ಪು, ಹುರುಳಿ ಕಾಳು ಮತ್ತು ಮೆಣಸು ಮಾತ್ರ. ತೆಂಗಿನ ಕಾಯಿ ಹಾಕದೆ ಚಟ್ನಿ ಮಾಡಿ ಎನ್ನುತ್ತಿದೆ. ಇದು ನಾಲಿಗೆಗೆ ರುಚಿಸದೆ ಮಕ್ಕಳಿಗೆ ಗಂಜಿ ಚಟ್ನಿ ಸೌಲಭ್ಯ ಇದ್ದೂ ಇಲ್ಲದೆ ಜೊಲ್ಲುಮೋರೆ ಹಾಕುತ್ತಿದ್ದಾರೆ.
ಪಾಯಸಕ್ಕೂ ತೆಂಗಿನಕಾಯಿ ಇಲ್ಲ: ವಾರದಲ್ಲಿ 2 ದಿನ ಕೊಡುವ ಗಂಜಿ ಚಟ್ನಿ ವಿಷಯ ಈ ರೀತಿಯಾದರೆ, ವಾರದಲ್ಲಿ 4 ದಿನ ಅಂಗನವಾಡಿಗಳಲ್ಲಿ ಚಿಣ್ಣರಿಗೆ ಗೋಧಿ ಪಾಯಸ ನೀಡುತ್ತಾರೆ. ಇಲಾಖೆ ಕೊಡುವುದು ಗೋಧಿ ಕಡಿ ಮತ್ತು ಬೆಲ್ಲ ಮಾತ್ರ. ಇಲ್ಲಿಯೂ ತೆಂಗಿನಕಾಯಿ ಸೊನ್ನೆ. ತೆಂಗಿನಕಾಯಿ ಇಲ್ಲದೆ ಚಟ್ನಿ ತಿನ್ನುವ ಸಂಕಷ್ಟ ಹೇಗೆ ಮಕ್ಕಳು ಅನುಭವಿಸುತ್ತಾರೋ ಹಾಗೆ ತೆಂಗಿನಕಾಯಿ ಹಾಲು ಇಲ್ಲದೆ ಪಾಯಸ ಸವಿ ಸವಿಯಬೇಕು.
ತೆಂಗಿನಕಾಯಿ ಇಲ್ಲದಿದ್ದರೂ ಪಾಯಸ ಸಿಹಿ ಇರುವುದರಿಂದ ಮಕ್ಕಳು ಒಪ್ಪುತ್ತಾರೆ. ಆದರೆ ಗಂಜಿಗೆ ತೆಂಗಿನಕಾಯಿ ರಹಿತ ರುಚಿ ಇಲ್ಲದ ಚಟ್ನಿಯನ್ನು ಸರ್ವಥಾ ಚಿಣ್ಣರು ಒಪ್ಪುವುದಿಲ್ಲ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು. ಇಲ್ಲಿಯೂ ಪೌಷ್ಟಿಕಕ್ಕೆ ಒತ್ತು ನೀಡಬೇಕು. ಇದನ್ನು ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ.
ಅನುದಾನ ಲಭ್ಯವಿಲ್ಲ: ತೆಂಗಿನಕಾಯಿ ಯಾಕಿಲ್ಲ ಎಂದು ಇಲಾಖೆಯನ್ನು ಪ್ರಶ್ನಿಸಿದರೆ ಅಧಿಕಾರಿಗಳು ಹೇಳುವುದಿಷ್ಟು, ಅಂಗನವಾಡಿಗಳಲ್ಲಿ 3 ವರ್ಷದಿಂದ 6 ವರ್ಷದವರೆಗಿನ ಪ್ರತಿ ಮಗುವಿಗೆ ಸರ್ಕಾರ ರು. 4.60 ಖರ್ಚು ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚಿನ ವೆಚ್ಚ ಮಾಡುವಂತಿಲ್ಲ. ಯಾವುದೇ ಪೌಷ್ಟಿಕ ಆಹಾರ ನೀಡಿದರೂ ಅದು ಈ ಖರ್ಚಿನ ಮಿತಿಯೊಳಗಿರಬೇಕು. ಈಗ ನೀಡುತ್ತಿರುವ ಗೋಧಿ ಕಡಿ ಮತ್ತು ಬೆಲ್ಲದ ಪ್ರಮಾಣ ಸ್ವಲ್ಪ ಕಡಿಮೆ ಮಾಡಿ ತೆಂಗಿನಕಾಯಿ ಬದಲಿಗೆ ಹಾಲಿನ ಪುಡಿ ನೀಡಲು ಉದ್ದೇಶಿಸಲಾಗಿದೆ. ಆದರೆ ಗಂಜಿ ಚಟ್ನಿಗೆ ತೆಂಗಿನಕಾಯಿಯನ್ನು ಅಕ್ಷಯಪಾತ್ರೆ ಯೋಜನೆಯಲ್ಲಿ ಸಂಗ್ರಹಿಸಲು ಸೂಚಿಸಿದ್ದೇವೆ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.
2 ತಿಂಗಳು ಪಡಿತರ ಅಕ್ಕಿ ಸಿಕ್ಕಿಲ್ಲ: ಅಂಗನವಾಡಿ ಮುಖೇನ ಗರ್ಭಿಣಿಯರಿಗೆ, ಬಾಣಂತಿಯರಿಗೆ, 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಬೇಕು ಎಂಬುದು ಸರ್ಕಾರದ ಸೂಚನೆ. ಡಿಸೆಂಬರ್‌ವರೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಅಕ್ಕಿ, ಧವಸಧಾನ್ಯ ಪೂರೈಕೆಯಾಗಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಅಕ್ಕಿ ಪೂರೈಕೆಯಾಗಿಲ್ಲ. ಹಾಗಾಗಿ ಕೃಷ್ಯುತ್ಪನ್ನ ಮಾರುಕಟ್ಟೆ ಮೂಲಕ ಅಕ್ಕಿಯನ್ನು ಜಾಸ್ತಿ ಕ್ರಮಯಕ್ಕೆ ಖರೀದಿಸಿ ಅಂಗನವಾಡಿಗಳಿಗೆ ಇಲಾಖೆ ಪೂರೈಸಿದೆ. ಇದರಿಂದ ಪೌಷ್ಟಿಕ ಆಹಾರ ನೀಡಿಕೆಯಲ್ಲಿ ಕ್ಯಾಲೊರಿ ಪ್ರಮಾಣ ಅನಿವಾರ್ಯವಾಗಿ ಇಳಿಕೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.