ಅತ್ಯಾಚಾರ ಯತ್ನ, ಕೊಲೆ ಶಂಕೆ; ಕೆರೆಯಲ್ಲಿ ಯುವತಿ ಮೃತದೇಹ
ಬಂಟ್ವಾಳ: ನಾಗರಿಕ ಸಮಾಜವೇ ಬೆಚ್ಚಿ ಬೀಳುವ ಅಮಾನವೀಯ ಘಟನೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದಲ್ಲಿ ನಡೆದಿದ್ದು, ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ಕೊಂದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ನಿವಾಸಿ ಸೀತಾರಾಮ ಸೇರಿಗಾರ-ನಳಿನಾಕ್ಷಿ ದಂಪತಿ ಪುತ್ರಿ ಸೌಮ್ಯ (22) ಕೊಲೆಗೀಡಾದ ಯುವತಿ. ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಅದೇ ಪರಿಸರದ ಶಂಕಿತ ಆರೋಪಿ ಸತೀಶ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ವಿವರ: ಮಣಿಪಾಲದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಸೌಮ್ಯಾ, ಬಾಳ್ತಿಲದ ಕಶೆಕೋಡಿಯಲ್ಲಿರುವ ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿಭಟಿಸಿದ ಸೌಮ್ಯಳನ್ನು ಕೊಂದಿರಬೇಕೆಂದು ಶಂಕಿಸಲಾಗಿದೆ. ಸೌಮ್ಯಾಳ ಮೃತದೇಹ ನಿರ್ಜನ ಪ್ರದೇಶದ ಕೆರೆಯಲ್ಲಿ ಪತ್ತೆಯಾಗಿದ್ದು, ರಸ್ತೆಯಿಂದ ಕೆರೆಯವರೆಗೆ ಸಂಪೂರ್ಣ ಇಳಿಜಾರಾಗಿದ್ದು ಆರೋಪಿ ಅಲ್ಲಿವರೆಗೆ ಎಳೆದಾಡಿಕೊಂಡು ಹೋಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸೌಮ್ಯ ಬಳಸುತ್ತಿದ್ದ ಮೊಬೈಲ್ ಫೋನ್ ರಸ್ತೆಯಲ್ಲಿ ಬಿದ್ದಿದ್ದು, ಬ್ಯಾಗ್ ಹಾಗೂ ಚೂಡಿದಾರದ ಶಾಲು ಇಳಿಜಾರಿನ ಪೊದೆಯಲ್ಲಿ ಪತ್ತೆಯಾಗಿದೆ. ಇದೀಗ ಪೊಲೀಸ್ ವಶದಲ್ಲಿರುವ ಸತೀಶ್ ಈ ಹಿಂದೆಯೂ ಎರಡು ಬಾರಿ ಸೌಮ್ಯಳನ್ನು ಅತ್ಯಾಚಾರಕ್ಕೆ ಯತ್ನಿಸಿದ್ದ ಅಂಶವನ್ನು ಸ್ವತಃ ಸೌಮ್ಯಳ ತಾಯಿ ಪೊಲೀಸರಿಗೆ ತಿಳಿಸದ್ದಾರೆ.
ಅಲ್ಲದೆ ಸ್ಥಳೀಯ ಕೆಲ ಯುವತಿಯರನ್ನು ಈತ ಪೀಡಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ, ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಶೇಖರ್, ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ಮಹೇಶ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಮೊಬೈಲ್ ಬಿಚ್ಚಿಟ್ಟ ಸತ್ಯ
ಸೌಮ್ಯಳ ನೆರೆಮನೆಯ ಯುವತಿಯೊಬ್ಬಳು ಘಟನೆ ನಡೆದ ಕೆಲ ಹೊತ್ತಿನ ಬಳಿಕ ಇದೇ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಅನಾಥವಾಗಿ ಬಿದ್ದಿದ್ದ ಸೌಮ್ಯಳ ಮೊಬೈಲ್ ಫೋನ್ ಸಿಕ್ಕಿದೆ. ಅದನ್ನು ಎತ್ತಿಕೊಂಡು ಮನೆಗೆ ತಂದ ಯುವತಿ ಸೌಮ್ಯಳ ಮನೆಯವರಿಗೆ ಒಪ್ಪಿಸಬೇಕೆನ್ನುವಷ್ಟರಲ್ಲೇ ಮಣಿಪಾಲದಿಂದ ಸೌಮ್ಯಳ ಚಿಕ್ಕಮ್ಮ ದೂರವಾಣಿ ಕರೆ ಮಾಡಿದ್ದರು. ಆ ಕೂಡಲೇ ಯುವತಿ ಫೋನನ್ನು ಸೌಮ್ಯಳ ತಾಯಿಗೆ ನೀಡಿದ್ದು ಸೌಮ್ಯ ಮನೆಗೆ ತಲುಪಿದ್ದಾಳಾ? ಎಂದು ವಿಚಾರಿಸಲು ಫೋನ್ ಮಾಡಿರುವುದಾಗಿ ತಿಳಿಸಿದ್ದರು. ರಸ್ತೆಯಲ್ಲಿ ಮೊಬೈಲ್ ಮಾತ್ರ ಪತ್ತೆಯಾಗಿದ್ದು ಸೌಮ್ಯ ಇನ್ನೂ ಮನೆಗೆ ಬಾರದಿರುವುದನ್ನು ಕಂಡು ಆತಂಕಗೊಂಡ ಮನೆಮಂದಿ ಮೊಬೈಲ್ ದೊರೆತ ಸ್ಥಳದ ಬಳಿಗೆ ಧಾವಿಸಿ ಸುತ್ತಮುತ್ತಲು ಹುಡುಕಾಡಿದಾಗ ಆಕೆಯ ಚೂಡಿದಾರ ಶಾಲು ಹಾಗೂ ಬ್ಯಾಗ್ ದೊರೆತಿದೆ. ಸಂಶಯದಿಂದ ಪಕ್ಕದ ಕೆರೆ ಪರಿಸೀಲಿಸಿದಾಗ ಮೃತದೇಹ ಪತ್ತೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

