ರಕ್ಷಣಾ ವ್ಯವಸ್ಥೆಯಲ್ಲಿ ರಾಜಿ ಇಲ್ಲ: ವಿ. ಉಮೇಶ್
ಮಂಗಳೂರು: ಚುನಾವಣೆ ಸಂದರ್ಭದಲ್ಲಿ ದೇಶದ ಭದ್ರತೆ ದೃಷ್ಟಿಯಿಂದ ರಕ್ಷಣಾ ವ್ಯವಸ್ಥೆಗೆ ಮಾರಕವೆನಿಸುವ ಯಾವುದೇ ರಾಜಿಗೆ ರಾಜ್ಯದಲ್ಲಿ ಅವಕಾಶವಿಲ್ಲಎಂದು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ಉಮೇಶ್ ಹೇಳಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲಾ ಮುಖ್ಯಸ್ಥರ, ಪೊಲೀಸ್ ಮತ್ತು ಮೀನುಗಾರಿಕೆ, ಪ್ರವಾಸೋದ್ಯಮ ಇಲಾಖೆ, ಕೋಸ್ಟ್ ಗಾರ್ಡ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹೈದರಾಬಾದ್ ದಾಳಿ ಹಿನ್ನಲೆ ಮತ್ತು ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ಭದ್ರತೆ ನೀಡಬೇಕಾದ ಆದ್ಯತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ, ಕರಾವಳಿ ಸುರಕ್ಷತೆ ಬಗ್ಗೆ ಅವರು ದೃಢಪಡಿಸಿಕೊಂಡರು. ಕರಾವಳಿ ತೀರಗಳ ಮೂಲಕ ಅಕ್ರಮ ಪ್ರವೇಶ, ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳು, ಮಾನವ ಕಳ್ಳ ಸಾಗಾಣಿಕೆ ತಡೆಯಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಣೆ ಮಾಡಬೇಕು. ಪೊಲೀಸ್ ಮತ್ತು ಮೀನುಗಾರಿಕೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಪರಸ್ಪರ ಸಮನ್ವತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಕರಾವಳಿ ರಕ್ಷಣಾ ಪಡೆ ಮತ್ತು ಆಂತರಿಕ ಭದ್ರತೆ ಐಜಿಪಿ ಭಾಸ್ಕರ್ ರಾವ್, ಕೋಸ್ಟ್ ಗಾರ್ಡ್ಗಳ ಕರ್ತವ್ಯ ಮತ್ತು ಸ್ಥಳೀಯರ ಸಹಕಾರದಿಂದ ನಡೆಸಬಹುದಾದ ಚಟುವಟಿಕೆ ಮತ್ತು ಕರ್ತವ್ಯಗಳ ಕುರಿತು ತಿಳಿಸಿದರು. ಅಲ್ಲದೆ ರಕ್ಷಣಾ ಪಡೆಯ ಸಾಧನೆಯನ್ನು ವಿವರಿಸಿದರು. ಸಾಗರ ರಕ್ಷಾ ದಳವನ್ನು ಇನ್ನಷ್ಟು ಸಬಲಗೊಳಿಸಲು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಾರ್ಯದರ್ಶಿಗಳಲ್ಲಿ ತಿಳಿಸಿದರು.
ಮೀನುಗಾರಿಕಾ ಇಲಾಖೆಯು ಮೀನುಗಾರಿಕಾ ದೋಣಿಗಳ ಬಗ್ಗೆ ವಾರ್ಷಿಕ ತನಿಖೆಯನ್ನು ಆರ್ಟಿಒ ಅವರು ಕೈಗೊಳ್ಳುವ ಮಾದರಿಯಲ್ಲಿ ಕೈಗೊಂಡರೆ ಅಕ್ರಮ ದೋಣಿಗಳನ್ನು ತಡೆಗಟ್ಟಬಹುದು ಎಂದರು
ಕಾರ್ಯದರ್ಶಿಗಳು ಮೀನುಗಾರಿಕಾ ಉಪನಿರ್ದೇಶಕ ಸುರೇಶ್ ಕುಮಾರ್, ಮೀನುಗಾರರಿಗೆ ಸ್ಮಾರ್ಟ್ಕಾರ್ಡ್ ನೀಡಿದ ಮಾಹಿತಿ ಕಾರ್ಯದರ್ಶಿಗಳಿಗೆ ನೀಡಿದರು. ಬಂದರು ಮತ್ತು ಲೋಕೋಪಯೋಗಿ ಇಲಾಖೆಯ ಸಹಕಾರ ಅಂಡರ್ ಬ್ರಿಡ್ಜ್ ರಕ್ಷಣಾ ವ್ಯವಸ್ಥೆಗೆ ಬೇಕಾಗಿದೆ. ಹಳ್ಳಿಗಳ ಗಸ್ತು ಪುಸ್ತಕವನ್ನು ರಚಿಸಿ, ಸಾರ್ವಜನಿಕ ಸಮಿತಿ ರಚಿಸಿ ವಿಚಾರ ವಿನಿಮಯ ನಡೆಸಿ ಎಂದರು.
ಭಟ್ಕಳ ಸಹಾಯಕ ಆಯುಕ್ತ ರಾಮ್ ಪ್ರಸಾದ್, ಕರಾವಳಿ ರಕ್ಷಣಾ ಪಡೆಗೆ ತಾಂತ್ರಿಕ ನೈಪುಣ್ಯ ಪಡೆದ ಸಿಬ್ಬಂದಿಗಳನ್ನು ನೇಮಿಸಿ, ಮೂಲಭೂತ ಸೌಕರ್ಯ ನೀಡಬೇಕು ಎಂದರು. ಜಿಲ್ಲಾಧಿಕಾರಿ ಎನ್. ಪ್ರಕಾಶ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ನಿರ್ವಹಣಾ ನೀತಿ ಮತ್ತು ನಿರ್ಬಂಧಗಳ ಬಗ್ಗೆ ಇಲಾಖಾ ನಿರ್ದೇಶಕರಿಗೆ ಪತ್ರ ಬರೆದು ನೀತಿ ರಚಿಸಲು ತಿಳಿಸುವುದಾಗಿ ಹೇಳಿದರು.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ಆಯುಕ್ತ ಮನೀಷ್ ಕರ್ಬೀಕರ್, ಎನ್ಎಂಪಿಟಿಯ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೊಯಲ್, ಕೋಸ್ಟ್ ಗಾರ್ಡ್ ಐಜಿಪಿ ರಾಜೇಂದ್ರ ಸಿಂಗ್, ಕಮಾಂಡೆಂಟ್ ಸಫಲ್ ಸಿಂಗ್, ಪ್ರವಾಸೋದ್ಯಮ ಇಲಾಖಾಧಿಕಾರಿ ಜಿತೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

