ದಕ್ಷಿಣ ಕನ್ನಡ

ಮರ್ಕಂಜ: ಖಾತ್ರಿ ಕೂಲಿಗೆ ಆಗ್ರಹಿಸಿ ಪ್ರತಿಭಟನೆ

Published On :

ಸುಳ್ಯ: ಉದ್ಯೋಗ ಖಾತ್ರಿ ಯೋಜನೆಯಡಿ ಸಾರ್ವಜನಿಕ ಹಾಗೂ ಖಾಸಗಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಕೂಲಿ ಪಾವತಿಸದೇ ಪಂಚಾಯಿತಿ ಕಾರ್ಯದರ್ಶಿ ಯೋಜನೆಯನ್ನು ಬುಡಮೇಲು ಮಾಡಲು ಕಾರ್ಯತಂತ್ರ ಹಾಕಿದ್ದಾರೆ ಎಂದು ಮರ್ಕಂಜ ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಮಿತಿ ಸಂಚಾಲಕ ಶಂಕರನಾರಾಯಣ ಶಾಸ್ತ್ರಿ ದೋಳ ಆರೋಪಿಸಿದ್ದಾರೆ.
ಖಾತರಿ ಫಲಾನುಭವಿಗಳಿಗೆ ಕೂಲಿ ನೀಡದೇ ವಂಚಿಸಲಾಗಿದೆ ಎಂದು ಫಲಾನುಭವಿಗಳು ಸೋಮವಾರ ಪಂಚಾಯಿತಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಸಿರು ಗ್ರಾಮ ಯೋಜನೆಯಡಿ ಪಂಚಾಯಿತಿ ರಸ್ತೆಯ ಎರಡೂ ಪಕ್ಕ ಸಾಲು ಮರ ನೆಡುವ ಯೋಜನೆ ಕಾಮಗಾರಿ ಆರಂಭಿಸಿದ್ದರು, ಅರಣ್ಯ ಇಲಾಖೆಯ ಮೂಲಕ ಹಲಸು, ಮಾವು, ಪುನರ್ಪುಳಿ, ನೆಲ್ಲಿ ಮೊದಲಾದ 1000ಕ್ಕೂ ಮಿಕ್ಕೂ ಗಿಡಗಳನ್ನು ನೆಟ್ಟು ಅದಕ್ಕೆ ರಕ್ಷಣಾ ಬೇಲಿ ನಿರ್ಮಿಸಿ, ಬೇಸಿಗೆಯಲ್ಲಿ ನೀರು ಹಾಕಿ ಬೆಳೆಸಿದ್ದರು. ಪ್ರತಿ ಗಿಡಕ್ಕೆ ತಲಾ 322 ರುಪಾಯಿಯಂತೆ ಕೂಲಿ ನೀಡಲು ಯೋಜನೆಯಲ್ಲಿ ಅವಕಾಶ ಇದ್ದರೂ, ಕೇವಲ 122 ರುಪಾಯಿ ಮಾತ್ರ ಕೂಲಿ ನೀಡಲಾಗಿದೆ.
ಸುಮಾರು 1 ಕೋಟಿ ರೂಪಾಯಿ ವೆಚ್ಚದ ಯೋಜನೆ ತಯಾರಿಸಿದ್ದರೂ ಕೇವಲ 6 ಲಕ್ಷ ರುಪಾಯಿ ಮಾತ್ರ ಬಿಡುಗಡೆ ಆಗಿದೆ. ಉಳಿದಂತೆ ಕಾಮಗಾರಿ ಮುಗಿದು 6 ತಿಂಗಳು ಕಳೆದಿದ್ದರೂ ಹಣ ಬಿಡುಗಡೆ ಮಾಡಲು ಪಂಚಾಯತಿ ಕಾರ್ಯದರ್ಶಿ ವೃಥಾ ವಿಳಂಬ ಮಾಡುತ್ತಿದ್ದಾರೆ.
ಖಾತರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಎಂ.ಬಿ. ಪುಸ್ತಕದಲ್ಲಿ ನಮೂದಿಸಿದ್ದರೂ, ಎನ್.ಎಂ.ಆರ್ ಹಾಕದೇ ವಂಚಿಸಲಾಗಿದೆ. ಇದರಿಂದ ಜನರು ಭ್ರಮ ನಿರಸನಗೊಂಡಿದ್ದಾರೆ ಎಂದವರು ಅರೋಪಿಸಿದರು.
ಆರಂಭದಲ್ಲಿ ರಸ್ತೆ ಚರಂಡಿ ಕೆಲಸ ಮಾಡಿದ್ದರೂ ಅದರ ಕೂಲಿ ನೀಡಲೂ ಸತಾಯಿಸಿ ತಡವಾಗಿ ನೀಡಲಾಗಿದೆ. ಅಂತರ್ಜಲ ಉಳಿಸುವ ಸಲುವಾಗಿ 26 ಬಾವಿ, ಕೆರೆಗಳ ನಿಮರಾಣ ಮಾಡಿದ್ದರೂ ಎಂ.ಬಿ.ಪುಸ್ತಕದಲ್ಲಿ ಬರೆದಷ್ಟು ಹಣ ನೀಡದೇ ವಂಚನೆ ಮಾಡಲಾಗಿದೆ ಎಂದವರು ಹೇಳಿದರು. ಜಯರಾಮ ಹೊಸೋಳಿಕೆ, ವೀರಪ್ಪ ಗೌಡ ಮಿನುಂಗೂರು, ಚೆನ್ನಕೇಶವ ದೋಳ ನೇತೃತ್ವ ವಹಿಸಿದ್ದರು.
ತಾ.ಪಂ.ನಿಂದ ವಿಳಂಬ- ಕಾರ್ಯದರ್ಶಿ:
ರು. 73 ಲಕ್ಷ ಮೊತ್ತದ ಕಾಮಗಾರಿ ಮಾಡುವುದೆಂದು ಕ್ರಿಯಾಯೋಜನೆ ತಯಾರಿಸಿ ಕಳೆದ ಅಕ್ಟೋಬರ್ 22ರಂದು ತಾಲೂಕು ಪಂಚಾಯಿತಿಗೆ ಕಳುಹಿಸಲಾಗಿತ್ತು.
ಆದರೆ ರು. 16 ಲಕ್ಷಕ್ಕೆ ಮಾತ್ರ ಲೇಬರ್ ಬಜೆಟ್ ನೀಡಲು ಸಾಧ್ಯ. ಬೇರೆ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ ಎಂದು ಜನವರಿ 8ರಂದು ಅದು ಹಿಂದಕ್ಕೆ ಬಂದಿದೆ. ಹಾಗಿದ್ದೂ, ಈಗಾಗಲೇ ಕೆಲಸ ನಿರ್ವಹಿಸಿದ ಬಗ್ಗೆ ಫೋಟೋಗಳನ್ನು ತೆಗೆದು ಇಟ್ಟಿರುವವರು ನೀಡಿದಲ್ಲಿ ಅವರಿಗೆ ಕೂಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಪಂಚಾಯಿತಿ ಕಾರ್ಯದರ್ಶಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.