ನೇತ್ರಾವತಿ ನದಿ ತಿರುವಿಗೆ ತೀವ್ರ ವಿರೋಧ
ಪುತ್ತೂರು: ಶಿಕ್ಷಣದಲ್ಲಿ ಪರಿಸರಪರ ಪಾಠವಿಲ್ಲದ ಕಾರಣ ವಿದ್ಯಾವಂತರು ನಗರದ ಕಡೆಗೆ ಓಡಾಟ ನಡೆಸುತ್ತಿದ್ದಾರೆ. ವಿದ್ಯಾವಂತರನ್ನು ಮರಳಿ ಮಣ್ಣಿಗೆ ಕರೆತರುವ ಪ್ರಯತ್ನ ನಡೆಯಬೇಕಾಗಿದೆ ಎಂದು ಉಪನ್ಯಾಸಕ ದತ್ತಾತ್ರೇಯ ರಾವ್ ಹೇಳಿದ್ದಾರೆ.
ನಿರತ ನಿರಂತ ಬಹುವಚನಂ ಆಯೋಜನೆಯಲ್ಲಿ ಪುತ್ತೂರಿನ ಪುರಭವನದಲ್ಲಿ ಭಾನುವಾರ ನಡೆದ 'ನೇತ್ರಾವತಿ ತಿರುವು-ಹರಿವು-ಅರಿವು' ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೇತ್ರಾವತಿ ವರ: ಕಾವು ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ನೇತ್ರಾವತಿ ನದಿಯು ಜಿಲ್ಲೆಯ ಜನರಿಗೆ ದೇವರು ನೀಡಿದ ವರವಾಗಿದ್ದು, ಇದೀಗ ಅದನ್ನು ತಿರುಗಿಸುವ ಮೂಲಕ ಕಸಿಯುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ಜನರನ್ನು ದುರುಪಯೋಗ ಪಡಿಸಿಕೊಳ್ಳುವ ಈ ಷಡ್ಯಂತ್ರದ ವಿರುದ್ಧ ಜನಜಾಗೃತಿ ಹಾಗೂ ಹೋರಾಟ ನಡೆಯಬೇಕಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ನದಿ ತಿರುವಿಗೆ ಕುಮ್ಮಕ್ಕು ನೀಡುತ್ತಿರುವುದು ದುರಂತ. ನಮ್ಮ ನೆಲ ಮತ್ತು ಜಲ ಉಳಿದಲ್ಲಿ ಮಾತ್ರ ರಾಜಕೀಯ ಉಳಿವು ಸಾಧ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದರು.
ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ ಮಾತನಾಡಿ, ಪ್ರಾಕೃತಿಕ ನಿಯಮದಂತೆ ನದಿಗಳು ಹರಿಯಬೇಕು. ಈ ನಿಟ್ಟಿನಲ್ಲಿ ಬಲವಂತ ಸರಿಯಲ್ಲ. ನದಿ ತಿರುವಿನಿಂದ ಸಂಭವಿಸಬಹುದಾದ ಆಪತ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರೊಂದಿಗೆ ತಿರುವಿನ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದರು.
ಕೆಟ್ಟ ರಾಜಕೀಯ ನಿಲ್ಲಲಿ: ಉಪನ್ಯಾಸಕ ಜೋಸೆಫ್ ಮಡಂತ್ಯಾರ್ ಮಾತನಾಡಿ, ನದಿ ತಿರುವು ವಿಚಾರದಲ್ಲಿ ನಡೆಯುತ್ತಿರುವ ಕೆಟ್ಟ ರಾಜಕೀಯ ನಿಲ್ಲಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಶಿಕ್ಷಕಿ ಪ್ರವೀಣ ಕುಮಾರಿ ಮಾತನಾಡಿ, ನದಿ ತಿರುವಿನಿಂದ ಪಶ್ಚಿಮ ಘಟ್ಟದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಶಿಕ್ಷಕರ ಮೂಲಕ ಮಕ್ಕಳಿಗೆ ತಿಳಿಹೇಳುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಉಪನ್ಯಾಸಕ ಜಾನ್ ಸಿಕ್ವೇರಾ, ನದಿ ತಿರುವಿನ ಬಗ್ಗೆ ಪಂಚಾಯಿತಿಗಳು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಮಾಹಿತಿ ಪಡೆದುಕೊಂಡು ಕಾರ್ಯೋನ್ಮುಖರಾದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯ ಎಂದರು.
ಬಳೆಕೆದಾರರ ವೇದಿಕೆಯ ದಿನೇಶ್ ಭಟ್, ಬರ ಪೀಡಿತ ಪ್ರದೇಶಗಳಲ್ಲಿರುವ ನದಿಗಳ ಮತ್ತು ಕೆರೆಗಳ ಒತ್ತುವರಿ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಂತೆ ಮಾಹಿತಿ ಪಡೆದು ಅಲ್ಲಿನ ಜನರಿಗೆ ಜಲಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ನಾದಾ ಮಣಿನಾಲ್ಕೂರು ಮಾತನಾಡಿ, ನೇತ್ರಾವತಿಯನ್ನು ಈಗಾಗಲೇ ಇಲ್ಲಿನ ಕಂಪನಿಗಳು ತಮ್ಮೆಡೆಗೆ ತಿರುಗಿಸಿಕೊಂಡಿವೆ. ಈ ನಡುವೆ ಇನ್ನೊಂದು ತಿರುವು ನಡೆಸಿ ಜಿಲ್ಲೆಯ ಜನರನ್ನು ವಂಚಿಸುವ ಕೆಲಸವಾಗುತ್ತಿದೆ. ಬರ ಪೀಡಿತ ಕೋಲಾರದ ಮಂದಿ ಅಲ್ಲಿ ಜಲಜಾಗೃತಿಗಾಗಿ ಕೆಲಸ ಮಾಡದೆ ನೇತ್ರಾವತಿ ತಿರುವಿಗಾಗಿ ಹೋರಾಟ ಮಾತ್ರ ನಡೆಸುತ್ತಿರುವುದು ದುರದೃಷ್ಟಕರ ಎಂದರು. ವಿದ್ಯಾರ್ಥಿನಿ ಸಹಮತ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ. ಶ್ರೀಶ ಕುಮಾರ್ ಎಂ.ಕೆ. ಸ್ವಾಗತಿಸಿದರು. ಐ.ಕೆ. ಬೊಳುವಾರು ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

