ದಕ್ಷಿಣ ಕನ್ನಡ

ಕುಮ್ಕಿ ಪಕ್ಕಾ ಆಯ್ತು; ಬೆಟ್ಟ, ಹಾಡಿ, ಪಟ್ಟಾ ಯಾವಾಗ?

Published On :

ಮಂಗಳೂರು: ಸೊಪ್ಪು, ಗೋಚರಾವು, ಕೃಷಿಪೂರಕ ಚಟುವಟಿಕೆಗೆ ಬಳಸುತ್ತಿರುವ ಕುಮ್ಕಿ ಭೂಮಿ ಹಕ್ಕನ್ನು ರೈತರಿಗೆ ನೀಡಲು ನಿರ್ಧರಿಸುವ ಮೂಲಕ ರಾಜ್ಯ ಸರ್ಕಾರ 57 ವರ್ಷಗಳ ದೀರ್ಘಕಾಲದ ರೈತರ ಬೇಡಿಕೆ ಈಡೇರಿಸಿದೆ. ಇದು ಅವಿಭಜಿತ ದ.ಕ.ಜಿಲ್ಲೆ, ಬಳ್ಳಾರಿ, ಕೊಳ್ಳೇಗಾಲ ಪ್ರದೇಶದ 4 ಲಕ್ಷದಷ್ಟು ರೈತರಿಗೆ ಚುನಾವಣಾ ಪೂರ್ವದ ಬಂಪರ್ ಕೊಡುಗೆ.
ಇದೇ ರೀತಿ ಉತ್ತರ ಕರ್ನಾಟಕದಲ್ಲಿ ಬೆಟ್ಟ, ಹಾಡಿ ಭೂಮಿ, ಮೈಸೂರಿನ ಸೊಪ್ಪಿನಬೆಟ್ಟ, ಕೊಡಗಿನ ಜಮ್ಮಾ, ಬಾಣೆ ಮತ್ತು ಗುಲ್ಬರ್ಗದ ಪಟ್ಟಾ ಸ್ಥಳ (ಮೋಟ ಸ್ಥಳ)ಗಳಿಗೆ ಶನಿವಾರ ರಾಜ್ಯ ಸಚಿವ ಸಂಪುಟ ಕೈಗೊಂಡ ತೀರ್ಮಾನ ಅನ್ವಯವಾಗುವುದಿಲ್ಲ. ಇದರಿಂದ ಈ ಪ್ರದೇಶದಲ್ಲಿ ನ್ಯಾಯಕ್ಕಾಗಿ ಕಾಯುತ್ತಿರುವ ಲಕ್ಷಾಂತರ ರೈತರು ತಮ್ಮ ಭೂಮಿ ಹಕ್ಕಿಗಾಗಿ ಮತ್ತೆ ಸರ್ಕಾರದ ಕದ ತಟ್ಟಬೇಕಾಗಿದೆ.
ಹಳೆಮದ್ರಾಸ್ ಪ್ರಾಂತ್ಯ ಆಡಳಿತದಲ್ಲಿ ಜಾರಿಗೆ ತರಲಾದ ಕಾನ, ಬಾಣ, ಕುಮ್ಕಿ ಹಕ್ಕುಗಳ ಕಾನೂನನ್ನು 1905ರಲ್ಲಿ ಸೊಪ್ಪು, ಗೋಚರಾವು, ಇತ್ಯಾದಿ ಕೃಷಿ ಪೂರಕ ಚಟುವಟಿಕೆಗೆ ರೈತರಿಗೆ ನೀಡಲಾಗಿತ್ತು. ಅದು ಸೌಲಭ್ಯವಾಗಿತ್ತೇ ವಿನಃ ರೈತರ ಹಕ್ಕು ಆಗಿರಲಿಲ್ಲ. ಇದರ ವಿರುದ್ಧ ಆಗಲೇ ರೈತರು ಹಕ್ಕುಪತ್ರಕ್ಕೆ ಧ್ವನಿ ಎತ್ತಿದರೂ 1957ರಿಂದ ಹೋರಾಟದ ಸ್ವರೂಪ ಪಡೆದುಕೊಂಡಿತು. ರಾಜ್ಯ ಸರ್ಕಾರ, ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋರಾಟ ಹಾದಿ ಸವೆಸಿ, ಕೊನೆಗೆ ಸರ್ಕಾರವೇ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಸುದೀರ್ಘ ಹೋರಾಟಕ್ಕೆ ಇತಿಶ್ರೀ ಹಾಕಿತು.
ಶೇ.85 ಮಂದಿಯಲ್ಲಿ ಮೂಲ ದಾಖಲೆ ಇಲ್ಲ?: ಸಚಿವ ಸಂಪುಟ ರೈತ ಪರ ತೀರ್ಮಾನ ಕೈಗೊಂಡರೂ ಬಹುತೇಕ ರೈತರಲ್ಲಿ ತಮ್ಮಲ್ಲಿರುವ ಕುಮ್ಕಿ ಭೂಮಿ ಬಗ್ಗೆ ಮೂಲ ದಾಖಲೆಯೇ ಇಲ್ಲ.
ಕುಮ್ಕಿ ಹಕ್ಕಿಗಾಗಿ ಹೋರಾಟ ಮಾಡಿದ ಭಾರತೀಯ ಕಿಸಾನ್ ಸಂಘದ ಪ್ರಕಾರ, ಶೇ.15 ಮಂದಿಯಲ್ಲಿ ಮಾತ್ರ ಕುಮ್ಕಿ ಹಕ್ಕಿನ ಮೂಲ ದಾಖಲೆ ಇದೆ. ಉಳಿದ ಶೇ.85 ಮಂದಿಯಲ್ಲಿ ದಾಖಲೆಯೇ ಇಲ್ಲ. ಈಗ ಕುಮ್ಕಿ ಭೂಮಿಗೆ ಹಕ್ಕುಪತ್ರ ಪಡೆಯಬೇಕಾದರೆ 1974ರ ಮೊದಲಿನ ಮೂಲ ದಾಖಲೆಯನ್ನು ಅರ್ಜಿ ಜತೆ ಸಹಾಯಕ ಕಮಿಷನರ್‌ಗೆ ಸಲ್ಲಿಸಬೇಕು. ಕುಮ್ಕಿ ಸರ್ವೇ ನಡೆಸಿ ದೃಢಪಡಿಸಿದ ಬಳಿಕ ಹಕ್ಕುಪತ್ರ ನೀಡುವುದು ಕ್ರಮ. ಮೂಲ ದಾಖಲೆ ಇಲ್ಲದ ರೈತರು ಅದಕ್ಕಾಗಿ ಕಚೇರಿಗೆ ಎಡತಾಕುವ ಪ್ರಮೇಯ ಬಂದೊದಗಿದೆ.
ಮಾಹಿತಿ ಹಕ್ಕು, 'ಸಕಾಲ' ಮೊರೆ: ಕುಮ್ಕಿ ಮೂಲ ದಾಖಲೆ ಆಯಾ ತಾಲೂಕು, ಸಹಾಯಕ ಕಮಿಷನರ್ ಹಾಗೂ ಜಿಲ್ಲಾಡಳಿತ ಬಳಿ ಇರಬೇಕು. ಹೆಚ್ಚಿನ ಕಚೇರಿಗಳ ರೆಕಾರ್ಡ್ ರೂಮ್‌ಗಳಲ್ಲಿ ಈ ದಾಖಲೆಗಳಿಗೆ ಗೆದ್ದಲು ಹಿಡಿದಿದೆ. ಕುಮ್ಕಿ ಮೂಲ ದಾಖಲೆ ಕೇಳಿದರೆ ರೈತರಿಗೆ ಸಿಗುವುದು ಸುಲಭವಲ್ಲ. ಮೂಲ ದಾಖಲೆಗಾಗಿ ಮಾಹಿತಿ ಹಕ್ಕು ಮತ್ತು ತ್ವರಿತ ಅನುಷ್ಠಾನಕ್ಕೆ 'ಸಕಾಲ' ಪ್ರಯೋಗಿಸಲು ತೀರ್ಮಾನಿಸಲಾಗಿದೆ.
ಇನ್ನು ಕೆಲವು ಕಡೆಗಳಲ್ಲಿ ಜಾಗ ಸರ್ವೇ ವೇಳೆ ಭೂ ದಾಖಲೆಗಳಲ್ಲಿ ಕುಮ್ಕಿ ಜಾಗವನ್ನು ಅರಣ್ಯ ಭೂಮಿ ಎಂದು ತಪ್ಪಾಗಿ ನಮೂದಿಸಿದ್ದಾರೆ. ಇದನ್ನು ಸರಿಪಡಿಸಬೇಕಾದರೆ ಮತ್ತೆ ಸಹಾಯಕ ಕಮಿಷನರ್‌ಗೆ ಮೂಲ ದಾಖಲೆ ಒದಗಿಸಬೇಕು ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಕಾನ, ಬಾಣ, ಕುಮ್ಕಿ ಹೋರಾಟ ವೇದಿಕೆ ಸಂಚಾಲಕ ಎಂ.ಜಿ.ಸತ್ಯನಾರಾಯಣ.
ಜಮ್ಮಾ, ಬಾಣೆಗೆ ಅಂಕಿತ ಇಲ್ಲ: ಕುಮ್ಕಿ ಹಕ್ಕಿಗೆ ಸಂಬಂಧಿಸಿ ಮಾತ್ರ ಸಂಪುಟ ತೀರ್ಮಾನ ತೆಗೆದುಕೊಂಡಿರುವುದರಿಂದ ಕೊಡಗಿನಲ್ಲಿ ಕಾಫಿ ಮತ್ತಿತರ ಕೃಷಿ ನಡೆಸುತ್ತಿರುವ ಜಮ್ಮಾ, ಬಾಣೆ ರೈತರ ಭೂಮಿ ಹಕ್ಕು ಭೂ ಕಂದಾಯ ಕಾಯ್ದೆಗೆ ಸೇರ್ಪಡೆಯಾಗಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜುಮ್ಮಾ, ಬಾಣೆ ಹಕ್ಕಿಗೆ ಮಂಜೂರಾತಿ ನೀಡಲಾಗಿತ್ತು. ಆದರೆ ಅಲ್ಲಿನ ಕೆಲವು ಪ್ರದೇಶಗಳು ಅರಣ್ಯ ವ್ಯಾಪ್ತಿಗೆ ಒಳಪಡುವುದರಿಂದ ರಾಜ್ಯಪಾಲರು ಅಂಕಿತ ಹಾಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.