ಕೋಳಿ ಅಂಕಕ್ಕೆ ದಾಳಿ (ಸುದ್ದಿ ಸಂಕ್ಷೇಪ)
ಮಂಗಳೂರು: ಕಾವೂರಿನ ಮಹಾಲಿಂಗೇಶ್ವರ ದೇವಸ್ಥಾನ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಸೋಮವಾರ ವರದಿಯಾಗಿದೆ. ಬಂಧಿತರಿಂದ 13 ಕೋಳಿ, ರು. 3 ಸಾವಿರ ನಗದು ವಶಪಡಿಸಲಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಮಂಗಳೂರು: ಕಣ್ಣೂರು ವೀರನಗರ ನಿವಾಸಿ ಸುಷ್ಮಾ ಜ.16ರಿಂದ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಮನೆಯಿಂದ ಪೇಟೆಗೆ ಹೋದಾಕೆ ಮರಳಿ ಬಂದಿಲ್ಲ ಎಂದು ತಾಯಿ ವಿನೋದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯುವಕಗೆ ಜೀವದಾನ
ಮಂಗಳೂರು: ಸ್ನೇಹಿತನ ಜತೆ ಸಮುದ್ರ ನೀರಿಗೆ ಇಳಿದು ಅಪಾಯಕ್ಕೆ ಸಿಲುಕಿದ್ದ ಬಿಜಾಪುರ ಮೂಳೂರು ನಿವಾಸಿ ಶಿವು(20)ಎಂಬಾತನನ್ನು ಪಣಂಬೂರಿನ ಜೀವರಕ್ಷಕ ತಂಡ ಪ್ರಾಣಾಪಾಯದಿಂದ ಪಾರು ಮಾಡಿದೆ.
ಸ್ನೇಹಿತನ ಜತೆ ಪ್ರವಾಸಿಯಾಗಿ ಆಗಮಿಸಿದ ಶಿವು ಸಮುದ್ರಕ್ಕೆ ಇಳಿದು, ಮುಂದಕ್ಕೆ ಹೋಗುತ್ತಿದ್ದ. ಅಷ್ಟರಲ್ಲಿ ತೆರೆಅಪ್ಪಳಿಸಿ ದಡಕ್ಕೆ ಬರಲು ವಿಫಲ ಪ್ರಯತ್ನ ನಡೆಸಿದ್ದ. ಅಷ್ಟರಲ್ಲಿ ಜೀವರಕ್ಷಕ ತಂಡ ಆಗಮಿಸಿ ಆತನನ್ನು ಅಪಾಯದಿಂದ ಪಾರು ಮಾಡಿತ್ತು. 2008ರಿಂದ ಈವರೆಗೆ ಜೀವರಕ್ಷಕ ತಂಡ 70 ಮಂದಿಯನ್ನು ರಕ್ಷಿಸಿದೆ ಎಂದು ಪಣಂಬೂರು ಬೀಚ್ ಪ್ರವಾಸೋದ್ಯಮ ಸಮಿತಿ ಮುಂದಾಳು ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ಮರುಬಳಕೆಯಾಗದ ಪ್ಲಾಸ್ಟಿಕ್ ನಿಷೇಧ ಒತ್ತಾಯ
ಪುತ್ತೂರು: ಪ್ಲಾಸ್ಟಿಕ್ನಿಂದ ತಯಾರಿಸಲಾದ ಮರುಬಳಕೆಯಾಗದ ವಸ್ತುಗಳನ್ನು ರಾಜ್ಯವ್ಯಾಪಿ ಸಂಪೂರ್ಣವಾಗಿ ನಿಷೇಧಿಸುವಂತೆ ಚಿಕ್ಕಮುಡ್ನೂರಿನ ಕಲಿಯುಗ ಸೇವಾ ಸಮಿತಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಸಭೆ ಸಮಾರಂಭಗಳಲ್ಲಿ ಬಳಸಿ ಉಪಯೋಗಿಸಿದ ಇಂತಹ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು ಪರಿಸರಕ್ಕೆ ಹಾನಿಯಾಗುವುದಲ್ಲದೆ ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮದ ಕುರಿತು ಮನವಿಯಲ್ಲಿ ವಿವರಿಸಲಾಗಿದೆ. ಪುರಸಭೆ, ನಗರಸಭೆಗಳು ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದ್ದು ಇದನ್ನು ರಾಜ್ಯಮಟ್ಟದಲ್ಲೇ ಜಾರಿಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದೆ. ಇದರ ಬಗ್ಗೆ ಗ್ರಾಮ ಮಟ್ಟದಲ್ಲಿಯೂ ಜಾಗೃತಿ ಉಂಟು ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬರಬಹುದಾಗಿದ್ದು ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗಾಯಗೊಂಡ ವೃದ್ಧೆ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ಯಾತ್ರಾರ್ಥಿಯಾಗಿ ಪ್ರಯಾಣಿಸುತ್ತಿದ್ದಾಗ ಕಾರಿನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಬೆಂಗಳೂರು ಅಮೃತಬಳ್ಳಿ ನಿವಾಸಿ ಲಿಂಗಮ್ಮ (62) ಮೃತರು. ಅವರು ಜ.19ರಂದು ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಯಾಗಿ ಪ್ರಯಾಣಿಸುತ್ತಿದ್ದಾಗ ಕಾರಿನ ಬಾಗಿಲು ಹಠಾತ್ ತೆರೆಯಲ್ಪಟ್ಟು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟರೆಂದು ತಿಳಿದು ಬಂದಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಮಾಂಸ ಸಾಗಾಟ ಪತ್ತೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ಗ್ರಾಮದ ಮೇದರಬೆಟ್ಟು ಎಂಬಲ್ಲಿ ಬೈಕ್ನಲ್ಲಿ ಸಾಗಾಟ ಮಾಡುತ್ತಿದ್ದ ಗೋ ಮಾಂಸವನ್ನು ಉಪ್ಪಿನಂಗಡಿ ಪೊಲಿಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ವಾಹನ ತಪಾಸಣೆನಿರತ ಉಪ್ಪಿನಂಗಡಿ ಪೊಲೀಸರನ್ನು ಕಂಡು ಬದಲಿ ಮಾರ್ಗ ಹಿಡಿದ ಬೈಕ್ ಸವಾರರಿಬ್ಬರನ್ನು ಪೊಲೀಸರು ಬೆನ್ನಟ್ಟಿದಾಗ ಬೈಕನ್ನು ರಸ್ತೆಯಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಬೈಕ್ನಲ್ಲಿ ತಲಾ ಒಂದು ಕೆ.ಜಿ. ತೂಕದ ಇಪ್ಪತ್ತೊಂದು ಕಟ್ಟು ದನದ ಮಾಂಸ ಪತ್ತೆಯಾಗಿದೆ. ಬೈಕ್ ಮತ್ತು ದನದ ಮಾಂಸವನ್ನು ಪೊಲಿಸರು ಮುಟ್ಟುಗೋಲು ಹಾಕಿ, ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳ ನಡುವೆ ಸಂಘರ್ಷ
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಗಳಿಂದಾಗಿ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ವಾಗ್ವಾದ ಏರ್ಪಟ್ಟು ಸಂಘರ್ಷಮಯ ವಾತಾವರಣ ಮೂಡಿದ ಘಟನೆ ಸೋಮವಾರ ನಡೆದಿದೆ. ಈ ವೇಳೆ ಕಾಲೇಜಿನ ಕಿಟಕಿ ಗಾಜುಗಳನ್ನು ಕಿಡಿಗೇಡಿ ವಿದ್ಯಾರ್ಥಿಗಳು ಪುಡಿಗಟ್ಟಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕಳೆದ ಶುಕ್ರವಾರ ನಡೆದ ವಿವೇಕ ಜಾಗೃತಿ ಕಾರ್ಯಕ್ರಮದಲ್ಲಿ ಎಬಿವಿಪಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ ಬಗ್ಗೆ ಕಾರ್ಯಕ್ರಮದಲ್ಲಿ ಗೈರುಹಾಜರಾದ ವಿದ್ಯಾರ್ಥಿಗಳ ಗುಂಪು ಕ್ಷುಲ್ಲಕ ಕಾರಣಗಳನ್ನು ಮೂಡಿಸಿ ಸಂಘರ್ಷ ಉಂಟು ಮಾಡಿತ್ತೆನ್ನಲಾಗಿದೆ. ಈ ಮಧ್ಯೆ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಕಾಲೇಜಿನ ಕಿಟಕಿ ಗಾಜುಗಳನ್ನು ಪುಡಿಗಟ್ಟಿದ್ದು, ಈ ಬಗ್ಗೆ ಕಾಲೇಜು ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ದೂರಿನಲ್ಲಿ ತಪ್ಪೆಸಗಿದ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ಯಾಂಕ್ಗೆ ಬಿದ್ದು ಯುವತಿ ಸಾವು
ವಿಟ್ಲ: ತೋಟದೊಳಗಿದ್ದ ಟ್ಯಾಂಕ್ಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ವಿಟ್ಲಮೂಡ್ನೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ವಿಟ್ಲಮೂಡ್ನೂರು ಗ್ರಾಮದ ಪಿಲಿಂಜ ಸಂಕಪ್ಪ ಗೌಡ ಎಂಬವರ ಸೊಸೆ, ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಅಜೇಯ ನಗರದ ಸುಶೀಲ (24) ಮೃತರು. ಅವರು ಮಾವನ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯಕುಡಿಯಲು ಹಣವಿಲ್ಲದೆ ವ್ಯಕ್ತಿ ಆತ್ಮಹತ್ಯೆ
ಬ್ರಹ್ಮಾವರ: ಮದ್ಯಪಾನ ಮಾಡಲು ಹಣವಿಲ್ಲ ಎಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಗ್ಗೆ ಇಲ್ಲಿನ ಹಂದಾಡಿ ಗ್ರಾಮದ ಶಾಲೆಯ ಬಳಿ ನಡೆದಿದೆ. ಮೃತರು ನಾರಾಯಣ ಪೂಜಾರಿ, ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಭಾನುವಾರ ಮದ್ಯಪಾನಕ್ಕೆ ಹಣದ ಇಲ್ಲದೇ ಜೀವನದಲ್ಲಿ ಜಿಗುಪ್ಸೆಗೊಂಡು, ಶಾಲೆಯ ಬಳಿ ವಿಷ ಸೇವಿಸಿ ಅಸ್ವಸ್ತಗೊಂಡವರನ್ನು ನೋಡಿದ ಸ್ಥಳೀಯರು ಚಿಕಿತ್ಸೆಗೆ ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸತೀಶ ಪೂಜಾರಿ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ವಿಪರೀತ ಮದ್ಯಪಾನ: ವ್ಯಕ್ತಿ ಸಾವು
ಬ್ರಹ್ಮಾವರ: ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ರಾತ್ರಿ ಮಲಗಿದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿನ ಉಪ್ಪೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತರು ಬೊಗ್ಗು (50) ಎಂಬವರು ವಿಪರೀತ ಮದ್ಯಸೇವನೆ ಮಾಡುವ ಚಟ ಹೊಂದಿದ್ದು, ಎಂದಿನಂತೆ ಭಾನುವಾರ ರಾತ್ರಿ ಮದ್ಯಪಾನ ಮಾಡಿ ಹೋಲೊ ಬ್ಲಾಕ್ ಫ್ಯಾಕ್ಟರಿಯಲ್ಲಿ ಮಲಗಿದ್ದರು. ಸೋಮವಾರ ಮುಂಜಾನೆ ನೋಡುವಾಗ ಅವರು ಅಲ್ಲಿಯೇ ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಬಗ್ಗೆ ಅವರ ಮಗ ರಾಘವೇಂದ್ರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯ ಪೀಡಿತ ವ್ಯಕ್ತಿ ಆತ್ಮಹತ್ಯೆ
ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ಪಿಂಪ್ಲಹಿತ್ಲು ಎಂಬಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರು ರಂಗನಾಥ (48) ಅವರು ಕಳೆದ 2 ವರ್ಷಗಳಿಂದ ಮಾನಸಿಕ ಕಾಯಿಲೆ ಹಾಗೂ ಕರುಳು ಬೇನೆಯಿಂದ ನರಳುತ್ತಿದ್ದು, ಸಾಕಷ್ಟು ಚಿಕಿತ್ಸೆ ಪಡೆದರೂ ಗುಣಮುಖರಾಗಿರಲಿಲ್ಲ. ಇದೇ ಕಾರಣಕ್ಕೆ ಬೇಸತ್ತು, ಸೋಮವಾರ ಬೆಳಗ್ಗೆ 11.30ಕ್ಕೆ ದರ್ಲೆ (ಒಣಸೊಪ್ಪು) ತರುವುದಾಗಿ ಮನೆಯಲ್ಲಿ ಹೇಳಿ ಕಾಡಿಗೆ ಹೋದವರು ಅಲ್ಲಿಯೇ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಮಾವ ಗೋವಿಂದ ಅವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ನಲ್ಲಿ ದಾಂದಲೆ; ಓರ್ವ ಸೆರೆ
ಸುಳ್ಯ: ಬಾರೊಂದರಲ್ಲಿ ಕುಡಿದ ಯುವಕರಿಬ್ಬರು ದಾಂದಲೆ ನಡೆಸಿ, ಓರ್ವ ಪೊಲೀಸರ ಅತಿಥಿಯಾದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಬೆಳ್ಳಾರೆ ತಡಗಜೆಯ ಉದಯ ಹಾಗೂ ಸೋಣಂಗೇರಿಯ ಪ್ರವೀಣ ಎಂಬವರು ಬೆಳ್ಳಾರೆಯ ಕಾಮಧೇನು ಬಾರಿನಲ್ಲಿ ಕಂಠಪೂರ್ತಿ ಕುಡಿದು ಜೋರಾಗಿ ಮಾತನಾಡಿದ್ದಲ್ಲದೆ, ಸಪ್ಲಾಯರ್ ಜೊತೆ ಅಸಭ್ಯವಾಗಿ ವರ್ತಿಸಿದರೆ ನ್ನಲಾಗಿದೆ. ಇದನ್ನು ಪ್ರಶ್ನಿಸಲು ಬಂದ ಬಾರ್ನ ಕ್ಯಾಶಿಯರ್ ಜೊತೆಗೂ ಇಬ್ಬರೂ ಅಸಭ್ಯವಾಗಿ ವರ್ತಿಸಿದ್ದು, ಮೂರು ಗ್ಲಾಸ್ಗಳನ್ನು ಪುಡಿ ಮಾಡಿ, ಸ್ವಿಚ್ಬೋರ್ಡ್ಗೆ ಹಾನಿಯುಂಟು ಮಾಡಿದರು. ಇವರ ದಾಂದಲೆ ಹೆಚ್ಚಾಗುತ್ತಿದ್ದುದನ್ನು ನೋಡಿ ಬಾರ್ನವರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಉದಯನನ್ನು ಬಂಧಿಸಿ ಸುಳ್ಯ ಠಾಣೆಗೆ ಕರೆತಂದು ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ವ್ಯಕ್ತಿ ಸಾವು
ವಿಟ್ಲ: ಕರೋಪಾಡಿ ಗ್ರಾಮದ ಶಾರದಕೋಡಿ ಎಂಬಲ್ಲಿ ಕೆಲಸಕ್ಕೆ ಬಂದ ವ್ಯಕ್ತಿಯೊಬ್ಬರು ಗದ್ದೆಯಲ್ಲಿ ಮುಗ್ಗರಿಸಿ ಬಿದ್ದು, ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಪೊಂಬತ್ತಾಜೆ ನಿವಾಸಿ ಕೊರಗಪ್ಪ (55) ಎಂಬವರು ಶಾರದಕೋಡಿ ಜಾನ್ ಮಂತೆರೋ ಅವರ ಮನೆಗೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ಊಟವನ್ನೂ ನಿರಾಕರಿಸಿ ಗದ್ದೆಯಲ್ಲಿ ಮುಗ್ಗರಿಸಿ ಬಿದ್ದು ಮೃತಪಟ್ಟಿದ್ದಾರೆ. ಇವರು ವಿಪರೀತ ಪಾನಮತ್ತರಾಗಿರುತ್ತಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪುತ್ರ ರಮೇಶ್ ದೂರು ನೀಡಿದ್ದಾರೆ.
ಟಿಪ್ಪರ್ ಲಾರಿ ಕಳವು: ಪೊಲೀಸರಿಗೆ ದೂರು
ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿ ಕಳವಾದ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತೂರಿನ ದರ್ಬೆಯಲ್ಲಿ ಕಚೇರಿ ಹೊಂದಿರುವ ನಸೀಬ್ ಬೋರವಲ್ ಸಂಸ್ಥೆಯ ಮಾಲಕ ಅಬೂಬಕ್ಕರ್ ಎಂಬವರು ನಡೆಸುತ್ತಿದ್ದ ಕೆಎಲ್ 07ಜೆ 3861 ನಂಬರಿನ 95ನೇ ಮಾಡೆಲ್ನ ಟಿಪ್ಪರ್ ಲಾರಿ ಕಳವಾಗಿದ್ದು, ಕಳವಾದ ಲಾರಿಯ ಮೌಲ್ಯ ರು. 1.5 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

