ವಜ್ರಾಕ್ಷಿ ಪದತ್ಯಾಗ ಆಗ್ರಹಿಸಿ ಕಾಂಗ್ರೆಸ್ ಸಭಾತ್ಯಾಗ
ಮಂಗಳೂರು: ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರ ನೇಮಕಾತಿಯನ್ನು ತಾಲೂಕು ಪಂಚಾಯ್ತಿ ಅಧ್ಯಕ್ಷರು ಸಮರ್ಪಕವಾಗಿ ನಡೆಸಿಲ್ಲ ಎಂದು ಆರೋಪಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಮಂಗಳವಾರ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ತಾ.ಪಂ. ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ರಾಜ್ ಕಾಯ್ದೆ ಉಲ್ಲಂಘಿಸಿ ಸಾಮಾಜಿಕ ನ್ಯಾಯ ಸಮಿತಿಗೆ ಅಧ್ಯಕ್ಷೆಯಾಗಿ ವಜ್ರಾಕ್ಷಿರವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರನ್ನು ನೇಮಿಸದೆ ಅಧ್ಯಕ್ಷರ ಆಯ್ಕೆ ನಡೆಸಲು ಅವಕಾಶವಿಲ್ಲ ಎಂದು ಕಾಂಗ್ರೆಸ್ನ ಪ್ರಕಾಶ್ ಆರೋಪಿಸಿದರು. ಇದಕ್ಕೆ ವಿಪಕ್ಷ ಸದಸ್ಯರು ದನಿಗೂಡಿಸಿದರು. ವಜ್ರಾಕ್ಷಿ ಆಯ್ಕೆಯನ್ನು ರದ್ದುಪಡಿಸುವಂತೆ ಸದಸ್ಯರು ಆಗ್ರಹಿಸಿದರು.
37 ಸದಸ್ಯರ ಉಪಸ್ಥಿತಿಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಆದ್ದರಿಂದ ಆಯ್ಕೆಯನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷ ಹರೀಶ್ ಸ್ಪಷ್ಟಪಡಿಸಿದರು.
ಹೀಗೆ ಉಭಯ ಕಡೆಯಿಂದ ವಾಕ್ಸಮರ ಮುಂದುವರಿದಾಗ ಕಾರ್ಯನಿರ್ವಹಣಾಧಿಕಾರಿ ಮಧ್ಯಪ್ರವೇಶಿಸಿ, ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆ ರದ್ದುಪಡಿಸುವಂತೆ ಕೋರಿ ವಿಪಕ್ಷ ಸದಸ್ಯರು ಸಲ್ಲಿಸಿದ ಅರ್ಜಿಗೆ ಜಿಲ್ಲಾ ಪಂಚಾಯ್ತಿಯಿಂದ ವಿವರಣೆ ಪಡೆಯಲಾಗಿದೆ. ಆ ಸ್ಥಾಯೀ ಸಮಿತಿ ಹೊರತುಪಡಿಸಿ ಇತರ ಎರಡು ಸಮಿತಿಗಳ ಸಭೆ ನಡೆಸುವಂತೆ ಜಿ.ಪಂ.ನಿಂದ ಉತ್ತರ ಬಂದಿರುವುದಾಗಿ ಹೇಳಿದರು. ಸಭೆ ಮುಂದುವರಿಯುವ ಸೂಚನೆ ಕಂಡುಬರದ ಹಿನ್ನಲೆಯಲ್ಲಿ ತಹಸೀಲ್ದಾರ್ ರವಿಚಂದ್ರ ನಾಯಕ್ ನಿರ್ಗಮಿಸಿದರು.
ಜಿ.ಪಂ.ಸದಸ್ಯ ಸತೀಶ್ ಕುಂಪಲ ಸಮಾಧಾನಿಸಲು ಯತ್ನಿಸಿದರೂ ವಿಪಕ್ಷ ಸದಸ್ಯರು ಸಮಿತಿ ಅಧ್ಯಕ್ಷೆ ವಜ್ರಾಕ್ಷಿಯನ್ನು ವೇದಿಕೆಯಿಂದ ಕೆಳಗಿಳಿಸಿ ಸಭೆ ಮುಂದುವರಿಸಿ ಎಂದು ಒತ್ತಾಯಿಸಿದರು. ತಾನು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾರೆ, ಸರ್ಕಾರ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹರೀಶ್ ಹೇಳಿದಾಗ, ಅಸಮಾಧಾನಗೊಂಡ ವಿಪಕ್ಷ ಸದಸ್ಯರು ಸಭೆಯಿಂದ ಹೊರನಡೆದರು.
ಉಪಾಧ್ಯಕ್ಷೆ ರಾಜೀವಿ, ಜಿ.ಪಂ. ಸದಸ್ಯ ಎನ್.ಎಸ್.ಕರೀಂ, ಜಾನ್ಸನ್, ಯಶವಂತಿ ಆಳ್ವ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

