12 ಗ್ರಾಮಗಳಲ್ಲಿ ಮತ್ತೆ ಬೋರ್ವೆಲ್ ಬೇಡಿಕೆ
ಆತ್ಮಭೂಷಣ್
ಮಂಗಳೂರು: ವಿವಿಧ ನೀರಾವರಿ ಯೋಜನೆಗಳು ಬಂದರೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಬವಣೆ ತಪ್ಪಿಲ್ಲ. ಮಂಗಳೂರು ತಾಲೂಕು ವ್ಯಾಪ್ತಿಯ 12 ಗ್ರಾಮಗಳಲ್ಲಿ ನೀರಿನ ತೊಂದರೆ ಇದ್ದು, ಹೊಸದಾಗಿ ಕೊಳವೆಬಾವಿ ತೆಗೆಸಿಕೊಡಿ ಎಂದು ತಾಲೂಕು ಪಂಚಾಯ್ತಿಗೆ ದಂಬಾಲು ಬಿದ್ದಿವೆ.
ಕಳೆದ ವರ್ಷ ಬೆಳ್ಮ, ಹರೇಕಳ, ಮಂಜನಾಡಿ, ಅಂಬ್ಲಮೊಗರು, ಕಿನ್ಯಾ, ಕೊಣಾಜೆ, ಕೋಟೆಕಾರು, ಮುನ್ನೂರು, ಪಾವೂರು, ಸೋಮೇಶ್ವರ, ತಲಪಾಡಿ ಹೀಗೆ 12 ಗ್ರಾಮಗಳಲ್ಲಿ ಪ್ರಮುಖವಾಗಿ ಕಾಡಿದ್ದು ನೀರಿನ ಸಮಸ್ಯೆ.
ಕುಡಿಯಲು ನೀರಿಲ್ಲದ ಕಾರಣ ಆಯಾ ಗ್ರಾಮ ಪಂಚಾಯ್ತಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದವು. ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್ ಸಮಿತಿ ರು. 8.57 ಲಕ್ಷ ಕ್ಷೇತ್ರಕ್ಕೆ ಬಿಡುಗಡೆ ಮಾಡಿ ನೀರಿನ ಕೊರತೆ ನೀಗಲು ಕ್ರಮ ಕೈಗೊಂಡಿತ್ತು. ಪ್ರತಿ ಗ್ರಾಮದಲ್ಲಿ 12 ಕೊಳವೆಬಾವಿ ಕೊರೆಸಲಾಗಿತ್ತು.
ಈ ಪ್ರದೇಶಗಳಲ್ಲಿ ಜನವರಿ ಬರುತ್ತಿದ್ದಂತೆ ಎರಡು ದಿನಕ್ಕೊಮ್ಮೆ, ಕೆಲವು ಬಾರಿ ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ನಿತ್ಯವೂ ನೀರು ಪೂರೈಸಿದರೆ ಕುಡಿಯುವ ನೀರಿಗೆ ತತ್ವಾರ.
ಮತ್ತೆ ಬೋರ್ವೆಲ್ಗೆ ಬೇಡಿಕೆ: ಕಳೆದ ವರ್ಷ ಬೋರ್ವೆಲ್ ಪಡೆದ ಗ್ರಾಮಗಳು ಈ ವರ್ಷ ಮತ್ತೆ ಬೋರ್ವೆಲ್ ತೆಗೆಸಲು ಅನುಮತಿ ನೀಡುವಂತೆ ತಾ.ಪಂ.ಗೆ ಬೇಡಿಕೆ ಸಲ್ಲಿಸಿವೆ. ನೀರಿನ ಕೊರತೆ ಇನ್ನೂ ಮುಂದುವರಿದಿರುವುದರಿಂದ ಮತ್ತೆ ಬೋರ್ವೆಲ್ ಕೊರೆಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಟಾಸ್ಫೋರ್ಸ್ ಸಮಿತಿಯಲ್ಲಿ ಮಂಜೂರು ಮಾಡಿಸುವಂತೆ ಒತ್ತಾಯಿಸಿವೆ.
ಗ್ರಾಮ ಪಂಚಾಯ್ತಿಗಳ ಬೇಡಿಕೆಯನ್ನು ಸ್ವೀಕರಿಸಿದ್ದು, ಯಾವೆಲ್ಲ ಪ್ರದೇಶದಲ್ಲಿ ಬೋರ್ವೆಲ್ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಪಂಚಾಯತ್ರಾಜ್ ಎಂಜಿಯರಿಂಗ್ ವಿಭಾಗಕ್ಕೆ ಸೂಚಿಸಲಾಗಿದೆ ಎನ್ನುತ್ತಾರೆ ತಾ.ಪಂ. ಅಧಿಕಾರಿಗಳು.
ಮಂಗಳೂರು ತಾಲೂಕಿನ ಪುತ್ತಿಗೆ, ಪಡುಮರ್ನಾಡು, ದರೆಗುಡ್ಡೆ, ಮಳವೂರು, ಐಕಳ, ಪಡುಪೆರಾರು, ಮುಚ್ಚೂರು, ನೆಲ್ಲಿಕಾರು, ಕಲ್ಲಮುಂಡ್ಕೂರು ಈ 9 ಗ್ರಾಮಗಳಲ್ಲೂ ಕಳೆದ ಅವಧಿಯಲ್ಲಿ 9 ಬೋರ್ವೆಲ್ ಕೊರೆಯಲಾಗಿದೆ. ಇಲ್ಲಿಗೂ ಈ ಬಾರಿ ಮತ್ತೆ ಬೋರ್ವೆಲ್ ಬೇಕಂತೆ.
ಹೆಚ್ಚುವರಿ ಅನುದಾನಕ್ಕೆ ಮನವಿ: ಕಳೆದ ವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆ ಹೋಗಲಾಡಿಸಲು ಪ್ರತಿ ಶಾಸಕರ ಕ್ಷೇತ್ರಕ್ಕೆ ಸಿಕ್ಕಿದ್ದು ತಲಾ ರು. 8.57 ಲಕ್ಷ. ಟಾಸ್ಕ್ಫೋರ್ಸ್ ಸಮಿತಿಯಲ್ಲಿ ಅಗತ್ಯ ಪ್ರದೇಶಗಳಿಗೆ ಆದ್ಯತೆ ನೆಲೆಯಲ್ಲಿ ನೀರಾವರಿ ಕಾಮಗಾರಿಗೆ ಮಂಜೂರಾತಿ ನೀಡಲಾಗಿತ್ತು.
ಕಳೆದ ವರ್ಷ ಜಿಲ್ಲಾಧಿಕಾರಿ ನಿಧಿಯಿಂದ ಹೆಚ್ಚುವರಿಯಾಗಿ ರು. 37 ಲಕ್ಷ ಸಿಕ್ಕಿತ್ತು. ಈ ವರ್ಷ ರು. 57 ಲಕ್ಷಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎನ್ನುತ್ತಾರೆ ತಾ.ಪಂ. ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

