ಕಟೀಲು ಕ್ಷೇತ್ರದಲ್ಲಿಅಷ್ಟಮಂಗಲ ಪ್ರಶ್ನೆ
ಮೂಲ್ಕಿ: ಕಟೀಲು ಕ್ಷೇತ್ರದ ಮೂಲ ಉದ್ಭವ ಲಿಂಗವಿರುವ ಕುದ್ರುವಿನ ಅಭಿವೃದ್ಧಿ ಹಿನ್ನೆಲೆಯಲ್ಲಿ 3 ದಿನಗಳ ಕಾಲ ನಡೆಯಲಿರುವ ಅಷ್ಟಮಂಗಳ ಪ್ರಶ್ನೆಯು ಭಾನುವಾರ ಆರಂಭಗೊಂಡಿದೆ. ಪದ್ಮನಾಭ ಶರ್ಮ, ಹರಿಯೆಟ್ಟನ್, ಕೃಷ್ಣಪ್ರಸಾದ್ ರಂಗ ಭಟ್, ಜಯರಾಮ ಪಣಿಕರ್, ದೇವದಾಸ್ ಪಣಿಕರ್, ವಿದ್ವಾನ್ ಪಂಜ ಭಾಸ್ಕರ ಭಟ್ ಪ್ರಶ್ನೆಯಲ್ಲಿ ಪಾಲ್ಗೊಂಡಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿ ಆಸ್ರಣ್ಣ, ಕುಮಾರ ಆಸ್ರಣ್ಣ ಸೇರಿದಂತೆ ಆಸ್ರಣ್ಣ ಬಂಧುಗಳು ಇದ್ದರು.
ಪೆರುವಾಜೆಯಲ್ಲಿ ಗುಡ್ಡಕ್ಕೆ ಬೆಂಕಿ
ಸುಳ್ಯ: ಬೆಳ್ಳಾರೆ ಸಮೀಪದ ಪೆರುವಾಜೆ ಶಿವರಾಮ ಕಾರಂತ ಪದವಿ ಕಾಲೇಜು ಸಮೀಪದ ಗುಡ್ಡೆಗೆ ಬೆಂಕಿ ತಗುಲಿ ಭಾಗಶಃ ಉರಿದಿರುವ ಘಟನೆ ಸಂಭವಿಸಿದೆ. ಪೆರುವಾಜೆ ಪದವಿ ಕಾಲೇಜು ಸಮೀಪದಲ್ಲಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಭಕ್ತರು ಹೊರಗೆ ಬಂದಾಗ ಎದುರು ಭಾಗದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತೀವ್ರ ಬಿಸಿಲಿನ ಕಾರಣ ಗುಡ್ಡೆಯಲ್ಲಿದ್ದ ಒಣಹುಲ್ಲಿಗೆ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿದೆ. ತಕ್ಷಣ ಅಲ್ಲಿ ಸೇರಿದ ಭಕ್ತರು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
ಬೈಕ್ ಡಿಕ್ಕಿ: ಮಹಿಳೆ ಸಾವು
ಉಪ್ಪಿನಂಗಡಿ: ಕಡಬ ಸಮೀಪದ ಕೋಡಿಂಬಾಳ ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರು ಚಾರ್ವಾಕ ಗ್ರಾಮದ ಸೋಮಪ್ಪ ಕುಂಬಾರರ ಪತ್ನಿ ದೇವಕಿ (39). ಅವರು ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ಎಂಬಲ್ಲಿ ನಡೆದ ಶುಭ ಕಾರ್ಯಕ್ಕೆ ತೆರಳಿ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಕೋಡಿಂಬಾಳ ಅಜ್ಜಿಕಟ್ಟೆ ಸಾರಕೇರೆ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಹಠಾತ್ತನೆ ಬೈಕ್ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡರು. ಬಳಿಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೈಕ್ ಸವಾರರಿಗೆ ಗಾಯವಾಗಿದ್ದು ಮಾಹಿತಿ ಲಭಿಸಿಲ್ಲ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಕ್ಷಗಾನ ಕಲಾರಂಗ ಕೋಶಾಧಿಕಾರಿ ಗೋಪಾಲಕೃಷ್ಣ ನಿಧನ
ಉಡುಪಿ: ಎಲ್ಐಸಿ ನಿವೃತ್ತ ಉದ್ಯೋಗಿ, ಉಡುಪಿಯ ಯಕ್ಷಗಾನ ಕಲಾರಂಗದ ಕೋಶಾಧಿಕಾರಿ ಎಸ್. ಗೋಪಾಲಕೃಷ್ಣ (75) ಹೃದಯಾಘಾತದಿಂದ ಭಾನುವಾರ ತೀರಿಕೊಂಡರು. ಸತ್ಯಸಾಯಿ ಬಾಬಾ ಭಕ್ತರಾಗಿದ್ದ ಅವರು ಉಡುಪಿ ಸತ್ಯಸಾಯಿ ಸೇವಾಮಂದಿರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೆಆರ್ಕೆ ಭಟ್ ಮೆಮೋರಿಯಲ್ ಟ್ರಸ್ಟ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಇವರು ಕಳೆದ 55 ವರ್ಷಗಳಿಂದ ಉಡುಪಿ ನಿವಾಸಿಯಾಗಿದ್ದರು. ನಿವೃತ್ತಿ ನಂತರವೂ ಸಾಯಿಮಂದಿರ ಮತ್ತು ಯಕ್ಷಗಾನ ಕಲಾರಂಗದಲ್ಲಿ ಸಕ್ರಿಯರಾಗಿದ್ದರು. 3 ದಶಕಗಳಿಂದ ಕಲಾರಂಗದ ಕೋಶಾಧಿಕಾರಿಯಾಗಿ ಸಂಸ್ಥೆ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. 2 ವರ್ಷ ಹಿಂದೆ ಸಂಸ್ಥೆ ಅವರಿಗೆ 'ಯಕ್ಷಚೇತನ' ಪ್ರಶಸ್ತಿ ನೀಡಿ ಗೌರವಿಸಿದೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಸತ್ಯಸಾಯಿ ಸಂಸ್ಥೆಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

