ಬಿಜೆಪಿಯಿಂದ ರು. 1 ಲಕ್ಷ ಕೋ. ಲೂಟಿ: ಸಿದ್ದರಾಮಯ್ಯ
ಮೂಲ್ಕಿ: ಶಿಸ್ತಿನ ಪಕ್ಷ ಎಂದು ಹೇಳುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರು. 1 ಲಕ್ಷ ಕೋಟಿ ಲೂಟಿ ಮಾಡಿದ್ದು ಬಹುಮತವಿಲ್ಲದಿದ್ದರೂ ಬಜೆಟ್ ಮಂಡಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ, ಇಂತಹ ಲಜ್ಜೆಗೆಟ್ಟ ಸರ್ಕಾರ ಇವರೆಗೆ ರಾಜ್ಯದಲ್ಲಿ ಬಂದಿಲ್ಲ ಎಂದು ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ವತಿಯಿಂದ ಉಳ್ಳಾಲದಿಂದ ಉಡುಪಿಯವರೆಗೆ ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಪಾದಯಾತ್ರೆಯು ಮೂಲ್ಕಿಗೆ ಆಗಮಿಸಿದ ಸಂದರ್ಭದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬಸ್ ನಿಲ್ದಾಣದ ಬಳಿಯ ಲಲಿತ್ ಮಹಲ್‌ನ ಎದುರುಗಡೆ ನಿರ್ಮಿಸಿದ ಮಾಜಿ ಶಾಸಕ ಸೋಮಪ್ಪ ಸುವರ್ಣ ವೇದಿಕೆಯಲ್ಲಿ ಜರುಗಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಸು ಪುನರ್ ತನಿಖೆ: ಬಿಜೆಪಿ ಸರ್ಕಾರ ಬಂದ ಬಳಿಕ ಕರಾವಳಿ ಜಿಲ್ಲೆಯಲ್ಲಿ ಸಾಮರಸ್ಯ ಹದಗೆಟ್ಟಿದ್ದು ಗಾಂಧೀಜಿಯನ್ನು ಹತ್ಯೆ ಮಾಡಿದ ಗೋಡ್ಸೆ ಸಂತಾನ ಮತ್ತೆ ಹುಟ್ಟಿದೆ. ಕಲ್ಲಡ್ಕ ಪ್ರಭಾಕರ ಭಟ್ ಹಿಂದೂಗಳನ್ನು ಪ್ರಚೋದಿಸಿ, ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅವರ ಮೇಲಿರುವ ಎಲ್ಲ ಕೇಸುಗಳ ಪುನರ್ ತನಿಖೆ ನಡೆಸುವುದಾಗಿ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಆರೋಗ್ಯ ಕೆಟ್ಟಿಲ್ಲ: ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್‌ನಂತೆ ಕಾಂಗ್ರೆಸ್ ಪಕ್ಷದ ನಾಯಕರ ಆರೋಗ್ಯ ಕೆಟ್ಟಿಲ್ಲ ಅಥವಾ ಹುಚ್ಚು ಹಿಡಿದಿಲ್ಲ. ಶಾಂತಿಗೆ ಹೆಸರಾದ ಹಾಗೂ ರಾಜ್ಯಕ್ಕೆ ಮಾದರಿಯಾದ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೋಮು ಗಲಭೆ, ಹೋಂ ಸ್ಟೇ ಘಟನೆಯಿಂದ ಸಾಮರಸ್ಯ ಹದಗೆಟ್ಟಿದೆ. ಬಿಜೆಪಿಯ ಅಂಗಪಕ್ಷಗಳಾದ ಬಜರಂಗ ದಳ, ವಿಎಚ್‌ಪಿ, ಆರ್‌ಎಸ್‌ಎಸ್ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹಾಗೂ ಧರ್ಮಗಳ ನಡುವೆ ಕಂದಕ ನಿರ್ಮಿಸುವ ಕಾರ್ಯ ಮಾಡುತ್ತಿವೆ.
ಕರಾವಳಿ ಜಿಲ್ಲೆಯಲ್ಲಿ ಸಾಮರಸ್ಯ ವಾತಾವರಣವನ್ನು ಉಂಟು ಮಾಡುವ ಉದ್ದೇಶದಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರ ಪಡೆಯಲಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್, ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಬಿ.ಎಲ್. ಶಂಕರ್, ಸಿ.ಎಂ. ಇಬ್ರಾಹಿಂ, ರಮಾನಾಥ ರೈ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿಪಕ್ಷ ಮುಖ್ಯ ಸಚೇತಕ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಶಾಸಕ ಯು.ಟಿ. ಖಾದರ್, ಕೆ. ಶಿವಮೂರ್ತಿ, ಜಿ. ಎ. ಬಾವಾ, ಮಾಜಿ ಸಚಿವ ಬಿ.ಎ. ಮೊಯ್ನುಯ್ದೀನ್, ಮೂಲ್ಕಿ ನಗರ ಪಂಚಾಯ್ತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಸೇರಿದಂತೆ ಪಕ್ಷದ ಹಲವಾರು ನಾಯಕರು ವೇದಿಕೆಯಲ್ಲಿ ಇದ್ದರು. ಪಾದಯಾತ್ರೆಯನ್ನು ಪಾವಂಜೆ ಸೇತುವೆ ಬಳಿ ಶಾಸಕ ಕೆ ಅಭಯಚಂದ್ರ ಜೈನ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

