ಲಂಚ: ಸಂಪಾಜೆ ಗ್ರಾಮಕರಣಿಕ ಲೋಕಾ ಬಲೆಗೆ
ಸುಳ್ಯ: ಪಹಣಿಪತ್ರದ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಕರಣಿಕನೊಬ್ಬ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಂಪಾಜೆ ಗ್ರಾಮ ಕರಣಿಕ ವಿನೋದ್ ಬಂಧಿತ ವ್ಯಕ್ತಿ.
ತೊಡಿಕಾನ ಗ್ರಾಮದ ಮೊಟ್ಟೆಂಗಾರು ನಿವಾಸಿ ಹನೀಫ್ ಎಂಬವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಲಂಚ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಖಾತೆ ಬದಲಾವಣೆಗೆ ಲಂಚ: ಹನೀಫ್ ಅವರ ಸಹೋದರಿ ನಸೀಮಾ ಸಂಪಾಜೆ ಗ್ರಾಮದ ಪೇರಡ್ಕದಲ್ಲಿ ರು. 1.50 ಲಕ್ಷಕ್ಕೆ 10 ಸೆಂಟ್ಸ್ ಭೂಮಿಯನ್ನು ಜನಾರ್ದನ ಎಂಬವರಿಂದ ಖರೀದಿಸಿದ್ದರು. ಇದರ ಖಾತೆ ಬದಲಾವಣೆಗಾಗಿ ಸಂಪಾಜೆ ಗ್ರಾಮ ಕರಣಿಕ ವಿನೋದ್ ಲಂಚದ ಬೇಡಿಕೆಯಿಟ್ಟಿದ್ದ. ಗುರುವಾರ ಸುಳ್ಯ ತಾಲೂಕು ಕಚೇರಿಯಲ್ಲಿ ಹನೀಫ್ರಿಂದ ರು. 3 ಸಾವಿರ ನಗದು ಸ್ವೀಕರಿಸುತ್ತಿದ್ದ ವೇಳೆ ವಿನೋದ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಸುದೀರ್ಘ ವಿಚಾರಣೆ ಬಳಿಕ ವಿನೋದ್ನನ್ನು ಮಂಗಳೂರಿಗೆ ಕರೆದೊಯ್ದು ಸೆಶನ್ಸ್ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿನೋದ್ ಮೂಲತಃ ಕೊಡಗಿನ ಸೋಮವಾರಪೇಟೆಯವನಾಗಿದ್ದು, ಈ ಹಿಂದೆ ಮಿಲಿಟರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ. ಈತನ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ಬಂದಿದ್ದು, ಸಂಪಾಜೆ ಗ್ರಾಮ ಸಭೆಯಲ್ಲೂ ಆರೋಪಗಳು ಕೇಳಿ ಬಂದಿದ್ದವು. ನಾಲ್ಕು ದಿನಗಳಿಂದ ಹನೀಫ್ ಅವರಿಂದ ಹಣಕ್ಕಾಗಿ ಬೇಡಿಕೆ ಇಟ್ಟಾಗ ಬುಧವಾರ ಹನೀಫ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಎಸ್.ಪಿ. ಮೋಹನ್ದಾಸ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಮಂಜಯ್ಯ, ಉಮೇಶ್ ಶೇಟ್, ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿ ಸುದರ್ಶನ, ಹರಿಶ್ಚಂದ್ರ, ಸುಧಾಕರ, ಭಾಸ್ಕರ, ಶಿವಕುಮಾರ್, ಶರತ್ಚಂದ್ರ, ರಾಧೇಶ್, ಲೋಕೇಶ್, ಜಾರ್ಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

