ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ವಿರೋಧ
ಮಂಗಳೂರು: ನಿಡ್ಡೋಡಿಯಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರವು ದ.ಕ. ಜಿಲ್ಲೆಗೆ ಮಾರಕವಾಗಿದ್ದು, ಜನ ವಿರೋಧಿ ಯೋಜನೆಯನ್ನು ಶ್ರೀ ರಾಮ ಸೇನೆ ವಿರೋಧಿಸಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಅಧ್ಯಯನ ನಡೆಸದೇ ಈಗಾಗಲೇ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ, ಎಂಆರ್ಪಿಎಲ್, ಬಿಎಎಸ್ಎಫ್ ಯೋಜನೆಗಳು ಪರಿಸರ ಮಾಲಿನ್ಯ ಉಂಟುಮಾಡಿದ್ದು, ಪರಿಣಾಮವನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದಾರೆ ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ್ ಹೇಳಿದ್ದಾರೆ. ನಿಡ್ಡೋಡಿ ಯೋಜನೆ ಜನರ ಇಚ್ಛೆಗೆ ವಿರುದ್ಧವಾಗಿ ಜಾರಿಯಾಗುವುದು ಖಚಿತಗೊಂಡಿದ್ದು, ಸ್ಥಳೀಯರು ಈಗಾಗಲೇ ಹೋರಾಟದ ದಾರಿ ಹಿಡಿದಿದ್ದು, ಇದನ್ನು ಶ್ರೀ ರಾಮ ಸೇನೆ ಬೆಂಬಲಿಸುತ್ತದೆ ಎಂದರು. ಸ್ಥಾವರ ಪ್ರದೇಶದಿಂದ ಕೇಲವ 50 ಕಿ.ಮೀ. ಅಂತರದಲ್ಲಿ ಜೀವ ವೈವಿಧ್ಯಗಳಿರುವ ಪಶ್ಚಿಮಘಟ್ಟ ಇದ್ದು, ಸ್ಥಾವರದಿಂದ ಹೊರ ಸೂಸಲ್ಪಡುವ ಬೂದಿ ಜೀವ ಸಂಕುಲಗಳ ಮೇಲೆ ಪರಿಣಾಮ ಬೀರಲಿದೆ. ಪರಿಸರ ಮಾಲಿನ್ಯದಿಂದ ಜಿಲ್ಲೆ ಬರಡು ಭೂಮಿಯಾಗಿ ಪರಿವರ್ತನೆಗೊಳ್ಳುವ ಭೀತಿಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಈಗಾಗಲೇ ಕೋಸ್ಟಲ್ ಕರ್ನಾಟಕ ಪವರ್ ಕಾರ್ಪೊರೇಶನ್ ಸಂಸ್ಥೆಗೆ ಸ್ಥಾವರ ಸ್ಥಾಪಿಸುವಂತೆ ಸೂಚಿಸಿದ್ದು, ಯೋಜನೆ ಜಾರಿಯಾಗುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಸ್ಥಳೀಯ ಜನರನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ವಿನಾಶಕಾರಿ ಯೋಜನೆ ವಿರುದ್ಧ ಧ್ವನಿ ಮೊಳಗಿಸಬೇಕಾಗಿದೆ. ಎಲ್ಲ ಹೋರಾಟಗಳಲ್ಲಿ ಶ್ರೀ ರಾಮ ಸೇನೆ ಸಕ್ರಿಯ ಪಾಲ್ಗೊಳ್ಳುತ್ತದೆ ಎಂದರು. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವ ಮೂಲಕ ಜನವಿರೋಧಿ ಯೋಜನೆಯನ್ನು ವಿರೋಧಿಸು ಕುರಿತು ಸಂದೇಶ ರವಾನಿಸಬೇಕು. ಸ್ಥಾವರ ನಿರ್ಮಾಣಕ್ಕೆ ಒಳಗಿಂದೊಳಗೆ ಬೆಂಬಲ ಸೂಚಿಸುವ ಜನಪ್ರತಿನಿಧಿಗಳ ವಿರುದ್ಧವೂ ಸೇನೆ ಹೋರಾಟ ನಡೆಸುತ್ತದೆ ಎಂದು ಹೇಳಿದರು.
ನಾಳೆ ಪೇಜಾವರ ಶ್ರೀ
ಗುರುವಂದನಾ ತುಲಾಭಾರ
ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಜು. 30 ರಂದು ಸಂಜೆ 6ಕ್ಕೆ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ 'ಗುರುವಂದನಾ ತುಲಾಭಾರ' ನಡೆಯಲಿದೆ. ಬಿಜಾಪುರದ ಕೃಷ್ಣಮಂದಿರದಲ್ಲಿ ಚಾತುರ್ಮಾಸ ವೃತದಲ್ಲಿ ನಿರತರಾಗುವ ಮುಂಚಿತವಾಗಿ ಪೇಜಾವರ ಶ್ರೀಗಳಿಗೆ ತುಲಾಭಾರ ಏರ್ಪಡಿಸಲಾಗಿದೆ. ಪೂಜೆ, ಭಜನೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಭರವಸೆ
ಮಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರ ಕಳೆದ ವರ್ಷದ ಬಾಕಿ ವೇತನ ಶೀಘ್ರ ಬಿಡುಗಡೆಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಂಗಳೂರು ವಲಯ ಅತಿಥಿ ಉಪನ್ಯಾಸಕರ ಸಂಘ ಭಾನುವಾರ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಮನವಿ ಸಲ್ಲಿಸಿದೆ. ಸರ್ಕಾರಿ ಪ್ರಥಮ ದರ್ಜೆ ಉಪನ್ಯಾಸಕರಿಗೆ ಕೇವಲ ಒಂದು ಕಾಲೇಜಿನಲ್ಲಿ ಅವಕಾಶವಿದ್ದು ಮಾಸಿಕ ವೇತನವನ್ನು ರು. 20 ಸಾವಿರಕ್ಕೆ ಏರಿಸಬೇಕೆಂಬ ಮನವಿಗೆ ಚಿಂತನೆ ನಡೆಸುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ನಾಗರಾಜ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

