ದಕ್ಷಿಣ ಕನ್ನಡ

6ರಂದು ಕುಮಾರಧಾರ ಅರಣ್ಯ ವರದಿ ಬಿಡುಗಡೆ

Published On :

ಪುತ್ತೂರು: ಪರಿಸರ ಅಧ್ಯಯನ ಕೇಂದ್ರ ಭಾರತೀಯ ವಿಜ್ಞಾನ ಸಂಸ್ಥೆ, ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ 2013ರ ಆರಂಭದಲ್ಲಿ ನಡೆಸಿದ 'ಕುಮಾರಧಾರಾ ಅರಣ್ಯ ಜೀವವೈವಿಧ್ಯ ಪರಿಸ್ಥಿತಿಯ ಅಧ್ಯಯನ ವರದಿ' 6ರಂದು ಬಿಡುಗಡೆಯಾಗಲಿದೆ.
 ಅಂದು, ಪುತ್ತೂರಿನ ಜಿ.ಎಲ್. ಸಭಾಭವನದಲ್ಲಿ ನಡೆಯುವ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
 ದ.ಕ. ಜಿಲ್ಲೆಯ ನದಿ ಕಣಿವೆಗಳ ಅಧ್ಯಯನಕ್ಕೆ ಕುಮಾರಾಧಾರ ಅಧ್ಯಯನ ಒಂದು ಮಾದರಿಯಾಗಿದ್ದು ಈ ವರದಿಯನ್ನು 6ರಂದು ನಡೆಯಲಿರುವ 'ಕುಮಾರಧಾರಾ ನದಿ ಕಣಿವೆಯ ಪರಿಸರ ಪರಿಸ್ಥಿತಿ ಕುರಿತು ರಾಜ್ಯಮಟ್ಟದ ವಿಶೇಷ ವಿಚಾರ ಸಂಕಿರಣ'ದಲ್ಲಿ ವಿಜ್ಞಾನಿಗಳು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಮಾಲೋಚನೆ: ವಿಚಾರಸಂಕಿರಣದಲ್ಲಿ ವಿಶೇಷವಾಗಿ ಕುಮಾರಧಾರಾ ನದಿ ಕಣಿವೆಯ ಪ್ರಚಲಿತ ಸ್ಥಿತಿಗತಿಯ ಅವಲೋಕನ, ಕೈಗೊಳ್ಳಬೇಕಾದ ಪರಿಸರ ಅರಣ್ಯ ಕಾರ್ಯಚಟುವಟಿಕೆಗಳು, ಸರ್ಕಾರದ ಮಟ್ಟದಲ್ಲಿ ಪರಿಸರ ಒತ್ತಡ ನಿರ್ಮಾಣ, ಕಣಿವೆಯ ರೈತರು ಹಮ್ಮಿಕೊಳ್ಳಬೇಕಾದ ವೃಕ್ಷಾರೋಹಣ ಜಾಗೃತಿಯ ಚಟುವಟಿಕೆ, ಆಗಬೇಕಾದ ಇನ್ನಷ್ಟು ಅಧ್ಯಯನ ಈ ಎಲ್ಲ ವಿಷಯಗಳ ಬಗ್ಗೆ ಸಮಾಲೋಚನೆ ಮತ್ತು
ತಜ್ಞರ ಮಾರ್ಗದರ್ಶನ ಹಾಗೂ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದ ಅವರು, ಪಶ್ಚಿಮ ಘಟ್ಟ ಇಂದು ದೇಶ ಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಸಹ್ಯಾದ್ರಿಯ ನದಿ ಕಣಿವೆಗಳಲ್ಲಿ ಕುಮಾರಧಾರ ಮತ್ತು ನೇತ್ರಾವತಿ ದ.ಕ. ಜಿಲ್ಲೆಯ ಜೀವಸೆಲೆಗಳಾಗಿವೆ. ಲಕ್ಷಾಂತರ ಜನರ ಬದುಕಿಗೆ ಪೂರಕವಾದ ಅಪಾರ ನಿಸರ್ಗ ಭಂಡಾರ ಈ ನದಿ ಪ್ರದೇಶದಲ್ಲಿದ್ದು, ಇದೀಗ ಮಾನವ ಹಸ್ತಕ್ಷೇಪದಿಂದಾಗಿ ಹಲವು ಆಪತ್ತುಗಳಿಗೆ ಸಿಲುಕಿವೆ. ಸಂಪರ್ಕ ರಸ್ತೆ, ರೈಲು ಮಾರ್ಗ, ತಂತಿ ಮಾರ್ಗ, ಅಣೆಕಟ್ಟು, ಅರಣ್ಯನಾಶ, ಅತಿಕ್ರಮಣ ಸೇರಿದಂತೆ ಕಿರು ಜಲವಿದ್ಯುತ್ ಯೋಜನೆಗಳ ಸರಪಣಿಗಳು ನದಿ ಮತ್ತು ಪರಿಸರವನ್ನು ನುಂಗಿ ಹಾಕಲು ಸಿದ್ಧವಾಗುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಗೋಗಟೆ ತಿಳಿಸಿದರು.
 ವಿಚಾರಸಂಕಿರಣವನ್ನು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಡಾ.ಟಿ.ವಿ.ರಾಮಚಂದ್ರ, ಡಾ.ಸುಭಾಶ್ಚಂದ್ರ, ಜಿ.ಆರ್.ರಾವ್, ಮಂಗಳೂರು ವಿಶ್ವವಿದ್ಯಾಲಯದ ಡಾ.ಕೃಷ್ಣಕುಮಾರ್ ಮತ್ತು ಡಾ.ಸೂರ್ಯಪ್ರಕಾಶ್ ಶೆಣೈ, ಪಶ್ಚಿಮ ಘಟ್ಟದ ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ, ಕಿಶೋರ್ ಕುಮಾರ್ ಹಾಸನ, ಪ್ರೊ.ಎನ್.ಎ. ಮಧ್ಯಸ್ಥ, ಡಾ.ಕೇಶವ, ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ದೇವಿಪ್ರಸಾದ್ ಮತ್ತು ಎಚ್.ಎಲ್. ವೆಂಕಟೇಶ್, ಹೈಕೋರ್ಟ್ ವಕೀಲ ಶ್ರೀನಿವಾಸ ರಾವ್, ಸುಳ್ಯದ ಪರಿಸರ ಹೋರಾಟಗಾರ ಎ.ಕೆ. ಹಿಮಕರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
 ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ರಾಜೇಶ್ ಬೀರಂತಡ್ಕ, ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಕಿರಣ್ ಗೋಗಟೆ ಹೊಸ್ಮಠ, ಖಜಾಂಚಿ ರಘುನಾಥ ಹೆಬ್ಬಾರ್ ಹೊಸ್ಮಠ, ಕುಟ್ರುಪಾಡಿ ಗ್ರಾ.ಪಂ. ಸದಸ್ಯೆ ಹಾಗೂ ಸಮಿತಿ ಸದಸ್ಯೆ ಎಲ್ಸಿ ಥೋಮಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.