ದಕ್ಷಿಣ ಕನ್ನಡ

ಅಲೇಕಳದಲ್ಲಿ ಇನ್ನೂ ಬಗೆಹರಿದಿಲ್ಲ ಚರಂಡಿ ಸಮಸ್ಯೆ

Published On :

ಮಂಗಳೂರು: ಹೊಸ ಸರ್ಕಾರ ಅಧಿಕಾರಕ್ಕೆ ಬಂದರೂ, ಹಳೆಯ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ಮಳೆಗಾಲ ಪ್ರಾರಂಭಗೊಂಡಿದ್ದು ಪಾಲಿಕೆ, ಪುರಸಭೆಯಾಗಲಿ ಇನ್ನೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿಲ್ಲ. ಇದಕ್ಕೆ ಅಲೇಕಳ ಪ್ರದೇಶ ನಿದರ್ಶನ.
 ಉಳ್ಳಾಲ ಪುರಸಭೆ ವ್ಯಾಪ್ತಿಯ ಅಲೇಕಳ ಪ್ರದೇಶದ ಸಾದು ಹಿತ್ತಲು, ಒಳಕೆರೆ, ಪೊಲಕರೆ, ಮಾರ್ಗತಲೆ, ಪೂಜಾರಿ ಬೈಲ್, ಕಕ್ಕೆತೋಟಗಳ ಬಳಿಯ ಚರಂಡಿಯ ನೀರು ಮಳೆಗಾಲದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ  ನುಗ್ಗುತ್ತಿದೆ.
 ತೊಕ್ಕೊಟ್ಟು ಒಳಗಿನ ಪೇಟೆಯಲ್ಲಿರುವ ಅಲೇಕಳ ಪ್ರದೇಶದಲ್ಲಿ ಸಮುದ್ರಕ್ಕೆ ಮಳೆ ನೀರು ಸೇರುವ ದೊಡ್ಡ ತೋಡಿದೆ. ಇದಕ್ಕೆ ತೊಕ್ಕೊಟ್ಟು ನಗರದ ಚರಂಡಿ ನೀರನ್ನು ಬಿಡುತ್ತಿದ್ದು, ಮಳೆ ನೀರಿನೊಂದಿಗೆ ಚರಂಡಿ ನೀರು ಹರಿದು ಬರುತ್ತಿದೆ.
ಮನೆಗಳಿಗೆ ನುಗ್ಗುವ ನೀರು: ಸುಮಾರು 5ಸಾವಿರ ಜನಸಂಖ್ಯೆಯಿರುವ ಅಲೇಕಳ ಪ್ರದೇಶದಲ್ಲಿ ಸುಮಾರು 200 ಮನೆಗಳಿದೆ. ಬೇಸಿಗೆಯಲ್ಲಿ ಚರಂಡಿಯ ದುರ್ವಾಸನೆ ಜತೆಗೆ, ಸೊಳ್ಳೆಗಳ ಕಾಟವನ್ನು ಈ ಪ್ರದೇಶದ ಜನ ಎದುರಿಸುತ್ತಿದ್ದರೆ, ಮಳೆಗಾಲದಲ್ಲಿ ಮನೆಯೊಳಗೆ ನೀರು ನುಗ್ಗುವ ಸಮಸ್ಯೆ. ಇದು ಕಳೆದ 10 ವರ್ಷಗಳಿಂದ ಜನರು ಅನುಭವಿಸುತ್ತಿರುವ ಪಾಡಾಗಿದೆ.
 ಪೂಜಾರಿಬೈಲ್ ವ್ಯಾಪ್ತಿಯ ಚರಂಡಿಗೆ ಮಳೆಯ ರಭಸಕ್ಕೆ ಪಕ್ಕದ ಕಂಪೌಂಡ್ ಕುಸಿದು ಬಿದ್ದ ಪರಿಣಾಮ ಚರಂಡಿ ಕಟ್ಟಿದ್ದ ಸಿಮೆಂಟ್ ಬದಿಗಳು ಬಿರುಕುಬಿಟ್ಟಿದೆ. ಕೆಲವೊಂದು ಕಡೆಯಲ್ಲಿ ತೋಡುಗಳು ಕಿರಿದಾಗಿರುವುದು
ಚರಂಡಿಯ ನೀರು ಹರಿವಿನ ತಡೆಗೆ ಕಾರಣವೆನಿಸುತ್ತದೆ. ಮಾರ್ಗಬೈಲ್ ನಿವಾಸಿ ರಿಚರ್ಡ್ ಅವರು ಕಳೆದ 50 ವರ್ಷದಿಂದ  ವಾಸಿಸುತ್ತಿದ್ದು, ಇವರ ಮನೆಯ ಹಿಂಭಾಗದಲ್ಲಿ ದೊಡ್ಡ ಮೋರಿಯಿದೆ. ಅವರ ಪ್ರಕಾರ ಸಮುದ್ರಕ್ಕೆ ಸೇರುವ ಪ್ರದೇಶದಲ್ಲಿ ತೋಡು ಎತ್ತರವಾಗಿದ್ದು, ಮಳೆಗಾಲದಲ್ಲಿ ನೀರಿನ ರಭಸಕ್ಕೆ ನೀರೆಲ್ಲಾ ಹಿಂದಕ್ಕೆ ಬರುತ್ತಿದೆ. ಸಮುದ್ರ ಸೇರುವ ಕಡೆಯಲ್ಲಿನ ತೋಡಿನ ಹೂಳು ತೆಗೆದರೆ ಸಮಸ್ಯೆ ಬಾರದು ಎಂದು ಕನ್ನಡಪ್ರಭಕ್ಕೆ ತಿಳಿಸಿದರು.
ಸಂಬಂಧಿಕರ ಮನೆಗೆ ಗುಳೆ: ಉಳ್ಳಾಲ ಹೈಗಿ, ಪಾಂಡೇಲ ಪ್ರದೇಶದಲ್ಲಿ ಮಳೆಗಾಲದಲ್ಲಿ ನೇತ್ರಾವದಿ ನದಿ ನೀರು ಹರಿದು ಕೃತಕ ನೆರೆ ಸಂಭವಿಸುತ್ತದೆ. ಆ ಸಂದರ್ಭ ಅಲ್ಲಿನ ಜನರು ತಮ್ಮ ಮನೆ ತೊರೆದು ಸಂಬಂಧಿಕರ ಮನೆಯಲ್ಲಿ ಬೀಡು ಬಿಡುತ್ತಾರೆ.
ಪುರಸಭೆಯಿಂದ ಅಲ್ಪಸ್ವಲ್ಪ ಮೊತ್ತದಲ್ಲಿ ಚರಂಡಿಗೆ ಬದಿ ಕಟ್ಟಿದ್ದರೂ, ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತದೆ. ಚರಂಡಿ ಸಮಸ್ಯೆಯಿಂದ ಜನ ಏನಾದರೂ ಒಂದು ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಸದಸ್ಯ ಇಸ್ಮಾಯಿಲ್ ಹೇಳಿದರು.
ಉಳ್ಳಾಲ ಪುರಸಭೆ ಸದಸ್ಯ ಇಸ್ಮಾಯಿಲ್, 'ಸಣ್ಣ ನೀರಾವರಿ ಇಲಾಖೆ ಚರಂಡಿ ನೀರಿನ ಬಗ್ಗೆ ಇನ್ನೂ ಸ್ಪಂದಿಸಿಲ್ಲ. ಬದಿ ಕಟ್ಟಿ, ಚರಂಡಿ ಮುಚ್ಚಿದರೆ ಸಮಸ್ಯೆ ಬಗೆಹರಿಯುತ್ತದೆ. ಪುರಸಭೆಯಿಂದ ಅಲ್ಪಸ್ವಲ್ಪ ಮೊತ್ತದಲ್ಲಿ ಬದಿ ಕಟ್ಟಿದ್ದರೂ, ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತದೆ. ಇದಕ್ಕೆ ಸುಮಾರು ರು. 30 ಲಕ್ಷ ವೆಚ್ಚ ಬೇಕಾಗಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಸರ್ಕಾರದ ವತಿಯಿಂದ ಪೂರೈಸುವುದಾಗಿ ಭರವಸೆ ನೀಡಿದ್ದಾರೆ' ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.