ಡೆಂಘೀ ನಿಯಂತ್ರಣಕ್ಕೆ 24್ಗ7 ಸನ್ನದ್ಧರಾಗಿ
ಸುಬ್ರಹ್ಮಣ್ಯ: ಕಳೆದ 10 ದಿನಗಳಿಂದ ಗುತ್ತಿಗಾರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲೇರಿಯಾ ಹಾಗೂ ಡೆಂಘೀ ಜ್ವರಗಳಿಂದ ಈ ಭಾಗದ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮಸ್ಥರು ಭಯ ಬೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಜ್ವರ ನಿಯಂತ್ರಣಕ್ಕೆ ಬರುವ ತನಕ 24್ಗ7 ಮಾದರಿಯ ಸೇವೆಗೆ ಸನ್ನದ್ಧರಾಗಬೇಕು ಎಂದು ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ್ ಸೂಚಿಸಿದ್ದಾರೆ.
ಗುತ್ತಿಗಾರಿನ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಗುರುವಾರ ಮಾತನಾಡಿದರು.
ಪರವಾನಗಿ ರದ್ದು: ಮಲೇರಿಯಾ ಮತ್ತು ಡೆಂಘೀ ಜ್ವರ ನಿಯಂತ್ರಣಕ್ಕೆ ಬರುವ ತನಕ ಅಂಗಡಿ, ಹೊಟೇಲ್, ಕೋಳಿ ಮತ್ತು ಹಂದಿ ಕಸಾಯಿಖಾನೆಗಳು ಸ್ವಚ್ಛತೆ ಪಾಲಿಸದಿದ್ದಲ್ಲಿ ತಕ್ಷಣದಿಂದ ಪರವಾನಗಿ ರದ್ದುಪಡಿಸಿ, ತಾತ್ಕಾಲಿಕ ಮುಚ್ಚುವಂತೆ ಸ್ಥಳೀಯ ಗ್ರಾ.ಪಂ.ಗೆ ಸೂಚನೆ ನೀಡಿದರು.
ವಿಶೇಷ ಘಟಕ, ಆ್ಯಂಬುಲೆನ್ಸ್: ಗುತ್ತಿಗಾರು ಪರಿಸರದಲ್ಲಿ ಡೆಂಘೀ ಜ್ವರ ಮಿತಿ ಮೀರಿದ್ದು, ಗ್ರಾಮೀಣ ಪ್ರದೇಶದ ಜನತೆಗೆ 24 ಗಂಟೆಗಳ ಸೇವೆ ಒದಗಿಸಲು ವೈದ್ಯ ಸಿಬ್ಬಂದಿ ಒಳಗೊಂಡ ವಿಶೇಷ ಘಟಕ ಹಾಗೂ ತುರ್ತು ಸೇವೆಗೆ ಆಂಬುಲೆನ್ಸ್ ಒದಗಿಸುವಂತೆ ಜಿ.ಪಂ.ಸದಸ್ಯ ಕೆ.ಎಸ್.ದೇವರಾಜ್ ಅವರು ಜಿ.ಪಂ. ಅಧ್ಯಕ್ಷ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀರಂಗಪ್ಪ ಅವರನ್ನು ಒತ್ತಾಯಿಸಿದರು. 2 ದಿನಗಲೊಳಗೆ ಒದಗಿಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಭರವಸೆ ನೀಡಿದರು.
ಮಾರಣಾಂತಿಕವಲ್ಲ: 2003ರಲ್ಲಿ ಸುಳ್ಯ ತಾಲೂಕಿನಲ್ಲಿ ಡೆಂಘೀ ಜ್ವರದಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಕಳೆದ 10 ವರ್ಷಗಳಿಂದ ಈ ರೋಗ ತಾಲೂಕಿನಲ್ಲಿ ಸ್ಥಾನೀಯವಾಗಿದೆ. ತೊಟ್ಟಿ, ಮಡಿಕೆ, ಬ್ಯಾರಲ್, ಮಣ್ಣಿನ ಮಡಿಕೆ, ಮುಂತಾದ ಕಡೆ ಶೇಖರವಾಗಿರುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಎಚ್ಚರವಹಿಸಬೇಕೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ವಿ.ರಾಜೇಶ್ ವಿವರಿಸಿದರು.
ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಆರೋಗ್ಯ ಜಾಗೃತಿ ಅಭಿಯಾನ ನಡೆಯಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ಎಂ.ಆರ್. ತಿಳಿಸಿದ್ದಾರೆ.
ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು, ಹರಿಹರ, ಮಲೆಯಾಳ, ಬಳ್ಳಕ, ಕಲ್ಲಾಜೆ, ಮೊಗ್ರ, ಕಮಿಲ, ನಡುಗಲ್ಲು, ಕಂದ್ರಪ್ಪಾಡಿ, ತಳೂರು, ಎಲಿಮಲೆ, ದೇವಚಳ್ಳ, ಮರ್ಕಂಜ, ಮಡಪ್ಪಾಡಿ ಈ ಗ್ರಾಮೀಣ ಭಾಗದ ರೋಗಿಗಳು ಚಿಕಿತ್ಸೆಗಾಗಿ ಗುತ್ತಿಗಾರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಅವರ ರಕ್ತ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ಕಾಯಲಾಗಿದೆ.
ನಾಲ್ಕೂರು ಗ್ರಾಮದಲ್ಲಿ ಬಾಧೆ: ನಾಲ್ಕೂರು ಗ್ರಾಮವು ಸಾಂಕ್ರಾಮಿಕ ರೋಗಗಳ ಪ್ರದೇಶವಾಗಿತ್ತು. ಇಲ್ಲಿಗೆ ಕೇರಳ ಮೂಲದ ಕಾರ್ಮಿಕರು ಬಂದು ಹೋಗುವುದರಿಂದ ಕೇರಳದಿಂದ ಡೆಂಘೀ ಜ್ವರ ಬಂದಿರಬಹುದೆಂದು ಶಂಕಿಸಲಾಗಿದೆ ಎಂದು ಗುತ್ತಿಗಾರಿನ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ.ನಂದಕುಮಾರ್ ತಿಳಿಸಿದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್, ತಾ.ಪಂ. ಇಒ ಮಲ್ಲೇಸ್ವಾಮಿ, ತಾ.ಪಂ. ಸದಸ್ಯ ಮುಳಿಯ ಕೇಶವ ಭಟ್, ಗ್ರಾ.ಪಂ.ಅಧ್ಯಕ್ಷೆ ಪ್ರಮೀಳಾ ಶಶಿಧರ್, ಉಪಾಧ್ಯಕ್ಷ ಸನತ್ ಮುಳುಗಾಡು ಇದ್ದರು.
50ಕ್ಕೂ ಅಧಿಕ ಮಂದಿಗೆ ಜ್ವರ
ಹಾಲೆಮಜಲು ಪರಿಸರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 50ಕ್ಕೂ ಅಧಿಕ ಮಂದಿ ಜ್ವರ ಪೀಡಿತರಾಗಿ ಅಲ್ಲಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಾಲೆಮಜಲಿನ ದುಗ್ಗಪ್ಪ ತಿಳಿಸಿದ್ದಾರೆ.
ಆ ಪ್ರದೇಶದಿಂದ ಸುಬ್ರಹ್ಮಣ್ಯದ ಶಾಲಾ ಕಾಲೇಜುಗಳಿಗೆ ಬರುವ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿಗಳು ಜ್ವರ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

