ದಕ್ಷಿಣ ಕನ್ನಡ

ಎರಡುಕಡಪು ಸೇತುವೆ: ಇನ್ನೂ ಈಡೇರದ ಬೇಡಿಕೆ

Published On :

ಬೆಳ್ತಂಗಡಿ: ಇದುವರೆಗೆ ಆಡಳಿತಕ್ಕೆ ಬೇಸಿಗೆಯಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸುವ ಚಿಂತೆ ಇತ್ತು. ಆದರೆ, ಇದೀಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ಕಾಲದಲ್ಲಿ ಬರುವ ತೊಂದರೆಗಳನ್ನು ನಿವಾರಿಸುವ ಆಲೋಚನೆ. ಮಳೆಗಾಲ ಈಗಷ್ಟೇ ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬಂದರೂ ನಿವಾರಿಸಿಕೊಳ್ಳುವ ವಿಶ್ವಾಸ ಆಡಳಿತಕ್ಕಿದೆ.  
ಮಿತ್ತಬಾಗಿಲು ಗ್ರಾಮ ಕಡಿರುದ್ಯಾವರದ ಎರಡುಕಡಪು ಎಂಬಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಗೆ ಸೇತುವೆ ಇಲ್ಲದೆ ಅಲ್ಲಿನ ನಿವಾಸಿಗಳು ಪಡುವ ಕಷ್ಟಕ್ಕೆ ಪರಿಹಾರವೇ ಇಲ್ಲದಂತಾಗಿದೆ. ಶಾಲಾ ಮಕ್ಕಳು ಸುತ್ತಿಬಳಸಿ ಹೋಗಬೇಕಾದ ಪರಿಸ್ಥಿತಿ ಇಲ್ಲಿಯದು. ಅದೇ ರೀತಿ ಕೊಲ್ಲಿ- ಕಾಜೂರು ಬಳಿ ಸೇತುವೆಯ ಬೇಡಿಕೆ ಹಲವು ವರ್ಷಗಳದ್ದು.
ತಾಲೂಕಿನಲ್ಲಿ ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮಾವತಿ ಮುಖ್ಯ ನದಿಗಳಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಈ ನದಿಗಳು ತಮ್ಮ ಪಾತ್ರಬಿಟ್ಟು ಹರಿದಿರುವುದು ಕಂಡು ಬಂದಿಲ್ಲ.
ಉಕ್ಕಿ ಹರಿದು ತೊಂದರೆ ಮಾಡುತ್ತಿರುವುದು ಹಳ್ಳಿಗಳಲ್ಲಿನ ಹಳ್ಳ ಕೊಳ್ಳಗಳು. ಈಗ ಗುಡ್ಡ ಕಡಿದು ರಬ್ಬರ್ ತೋಟಗಳು ಹೆಚ್ಚಾಗಿದ್ದು, ಮಳೆ ನೀರು ಗುಡ್ಡದಲ್ಲಿ ಇಂಗಿಹೋಗುವ ಬದಲು ನೀರೆಲ್ಲ ಹಳ್ಳಗಳಿಗೆ ಹರಿಯುತ್ತವೆ. ಇದರಿಂದ ಹಳ್ಳ, ತೋಡುಗಳ ತುಂಬಿ ಹರಿದು ಬದಿಗಳಲ್ಲಿನ ಗದ್ದೆಗಳು ಜಲಾವೃತವಾಗುತ್ತದೆ. ಬತ್ತದ ಫಸಲು ನೀರು ಪಾಲಾಗುತ್ತದೆ ಇಂತಹ ಸ್ಥಿತಿ ತಾಲೂಕಿನ ಅನೇಕ ಕಡೆ ಇದೆ.
ಚರಂಡಿ ಸಮಸ್ಯೆ: ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದಿದುದರಿಂದ ಕಳೆದ ವರ್ಷ ಉಜಿರೆ ಜನಾರ್ದನ ಶಾಲೆಯ ಎದುರಿನ ರಸ್ತೆ, ಕಾಲೇಜು ರಸ್ತೆಯಲ್ಲಿ ಮಳೆಯ ನೀರು ರಸ್ತೆಯಲ್ಲೇ ಹರಿದು ಹೊಳೆಯಾಗಿತ್ತು. ಈ ಬಾರಿ ಜನಾರ್ದನ ಶಾಲೆಯ ಬಳಿ ಚರಂಡಿ ಮಾಡಲಾಗಿದೆ. ಅಲ್ಲಿ ಸಮಸ್ಯೆ ಬರಲಾರದು. ಆದರೆ, ಉಜಿರೆ ವೃತ್ತದಿಂದ ಮುಂದೆ ಹೋಗುವ ಕಾಲೇಜು ರಸ್ತೆಗೆ ಚರಂಡಿಯೇ ಇಲ್ಲದಿರುವುದರಿಂದ ಈ ಬಾರಿ ಹಿಂದಿಗಿಂತಲೂ ಹೆಚ್ಚು ಸಮಸ್ಯೆಯಾಗಲಿದೆ.
ಮಳೆಗಾಲ ಪ್ರಾರಂಭವಾಗಿ ನೆರೆ ಬಂದಾಗ ಅದಕ್ಕಾಗಿ ತುರ್ತು ದೋಣಿಗಳ ವ್ಯವಸ್ಥೆಯನ್ನು ಆಡಳಿತ ಮಾಡುತ್ತದೆ. ಸಮರ್ಥ ಈಜುಗಾರರನ್ನು ಗುರುತಿಸುವ ಕೆಲಸವೂ ಆಡಳಿತದಿಂದ ನಡೆಯುತ್ತದೆ.
ತಾಲೂಕಿನಲ್ಲಿ ನೆರೆಯ ಪ್ರಕೋಪ ಕಂಡುಬರದಿದ್ದರೂ ಮಳೆಯಿಂದಾಗಿ ರಸ್ತೆ ಹದೆಗೆಡುವುದು, ರಸ್ತೆಗಳ ಬದಿ ಕುಸಿಯುವುದು (ಚಾರ್ಮಾಡಿ ಘಾಟಿ ರಸ್ತೆಯಲ್ಲಿ), ಗ್ರಾಮೀಣ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವುದು. ಕಿರು ನದಿಗಳಿಗೆ ಹಾಕಿದ ಒಡ್ಡು ಒಡೆದು ನೀರೆಲ್ಲ ಗದ್ದೆಗಳಿಗೆ ನುಗ್ಗುವುದು, ಭಾರಿ ಗಾಳಿಗೆ ಅಡಕೆ ತೋಟಗಳು ಧಾರಾಶಾಯಿಯಾಗುವುದು ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಆಡಳಿತ ತುರ್ತು ಸಹಾಯವನ್ನು ಕೈಗೊಳ್ಳುತ್ತದೆ.
ಗುರುವಾಯನಕೆರೆ ಸನಿಹದ ಜೈನ ಪೇಟೆ ಎಂಬಲ್ಲಿ ಮುಖ್ಯರಸ್ತೆಯಲ್ಲಿ ಮೋರಿಯೊಂದು ಕಳೆದ ವರ್ಷ ಕುಸಿತ ಕಂಡಿತ್ತು. ಇದರ ಅಪಾಯವನ್ನರಿತ ಆಡಳಿತ ಈ ತಿಂಗಳು ಅದನ್ನು ಸಮಗ್ರ ದುರುಸ್ತಿ ಮಾಡಿ ಮೋರಿ ನವೀಕರಣಗೊಳಿಸಿ ಈ ಮಳೆಗಾಲದಲ್ಲಿ ಸಂಭವನೀಯ ಅಪಾಯವನ್ನು ತಪ್ಪಿಸಿದೆ.

ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.