ನೆರೆ ಹಾವಳಿ, ಪ್ರತಿವರ್ಷದ 'ನೇತ್ರ'ಧಾರೆ
ಬಂಟ್ವಾಳ: ನೇತ್ರಾವತಿ ನದಿ ಬಂಟ್ವಾಳ ತಾಲೂಕಿನಲ್ಲಿ ಪ್ರತಿವರ್ಷ ಉಂಟು ಮಾಡುವ ನೆರೆಹಾವಳಿ ಬಗ್ಗೆ ಸ್ಥಳೀಯರ ಆತಂಕ ಇನ್ನೂ ಮರೆಯಾಗಿಲ್ಲ. ಮಳೆಗಾಲ ಆರಂಭಗೊಂಡಿರುವುದು ಒಂದೆಡೆ ಸಂತಸವಾದರೆ ಮತ್ತೊಂದೆಡೆ ಮಳೆ ಅನಾಹುತದ ಭೀತಿಯೂ ಆವರಿಸುತ್ತಿದೆ.
ತಾಲೂಕಿನ ಅನೇಕ ಗ್ರಾಮಗಳು ಮುಳುಗಡೆ, ಪ್ರಾಕೃತಿಕ ಹಾನಿಗೊಳಗಾಗುವ ಪಟ್ಟಿಯಲ್ಲಿ ಸೇರಿದೆ. ತಾಲೂಕಿನ ವಿಟ್ಲ ಹೋಬಳಿ ಹೊರತುಪಡಿಸಿದರೆ ಪಾಣೆಮಂಗಳೂರು ಮತ್ತು ಬಂಟ್ವಾಳ ಹೋಬಳಿಯ ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಅತಿವೃಷ್ಟಿ ಅನಾಹುತದ ಸಾಧ್ಯತೆಗಳನ್ನು ಗುರುತಿಸಲಾಗಿದೆ.
ಈ ಪೈಕಿ ಪಾಣೆಮಂಗಳೂರು ಗ್ರಾಮದ ಆಲಡ್ಕ, ಸಜಿಪಮೂನ್ನೂರಿನ ಗುಡ್ಡೆಯಂಗಡಿ, ಬಂಟ್ವಾಳ ಕಸಬಾ ಗ್ರಾಮದ ಜಕ್ರಿಬೆಟ್ಟು, ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಪ್ರತಿವರ್ಷ ನೆರೆ ನೀರಿನಿಂದ ತತ್ತರಿಸಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ತೀರಾ ತಗ್ಗು ಪ್ರದೇಶಗಳಾದ ಇಲ್ಲಿ ಭಾರಿ ಮಳೆ ಬಂದರೆ ಸುದೀರ್ಘ ಕಾಲ ನೀರು ನಿಂತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ತೊಡಕಾದ ನಿದರ್ಶನವಿದೆ.
2009ರಲ್ಲಿ ಬಂದ ಭಾರಿ ನೆರೆಗೆ ಪಾಣೆಮಂಗಳೂರು ಆಲಡ್ಕದ ಮನೆಗಳು ಜಲಾವೃತಗೊಂಡು ತೀರಾ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿರುವುದು ಇಂದಿಗೂ ಜನರ ಕಣ್ಣಮುಂದೆ ಹಸಿರಾಗಿಯೇ ಇದೆ. ಇಲ್ಲಿ 60ಕ್ಕೂ ಹೆಚ್ಚು ಮನೆಗಳಿದ್ದು ನೆರೆ ಸಂದರ್ಭ ಸ್ಥಳಾಂತರಗೊಂಡು ಮತ್ತೆ ಮಳೆ ನಿಂತ ಮೇಲೆ ಇಲ್ಲಿ ಬಂದು ಕುಳಿತುಕೊಳ್ಳುವುದು ವಾಡಿಕೆಯಾಗಿದೆ. ಪೇಟೆ ಪ್ರದೇಶಗಳಾದ ಪಾಣೆಮಂಗಳೂರು, ಬಂಟ್ವಾಳ, ಕೊಟ್ರಮ್ಮನ ಗುಂಡಿ, ಬಸ್ತಿಪಡ್ಪು, ನಂದಾವರ, ತಲಪಾಡಿ ಮೊದಲಾದ ತಗ್ಗು ಪ್ರದೇಶಗಳು ಭಾರಿ ಮಳೆಗೆ ಪತಿವರ್ಷವೂ ಜಲಾವೃತಗೊಳ್ಳುತ್ತಿದೆ.
ಮರೆಯಲಾಗದ 72ರ ಬೃಹತ್ ನೆರೆ: ನದಿ ತೀರ ಆವರಿಸಿಕೊಂಡಿರುವ ಬಂಟ್ವಾಳ ಪ್ರದೇಶದ ಜನತೆಗೆ 1972-73ರ ಸುಮಾರಿಗೆ ಬಂದ ಬೃಹತ್ ನೆರೆ (ಬಂಟ್ವಾಳದ ಬೊಲ್ಲ) ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಮಳೆಗಾಲ ಬಂದಾಗೆಲ್ಲಾ ಆ ಕಹಿ ನೆನಪು ಮತ್ತೆ ಮತ್ತೆ ಕಾಡುತ್ತಿದೆ.
ತೀರ ಪ್ರದೇಶಗಳಲ್ಲಿ ಅವಾಂತರ: ಗುರುಪುರ ಮತ್ತು ಫಲ್ಗುಣಿ ನದಿಯ ಹರಿವು ಬಂಟ್ವಾಳ ತಾಲೂಕಿನ ಅಲ್ಲಲ್ಲಿ ನೆರೆ ಉಂಟಾಗಲು, ತೋಟ ಕೃಷಿ, ಮನೆಗಳು ಜಲಾವೃತಗೊಳ್ಳಲು ಕಾರಣವಾಗುತ್ತಿದೆ. ಸರಪಾಡಿ, ಶಂಭೂರು, ತುಂಬೆ ಅಣೆಕಟ್ಟುಗಳಲ್ಲಿ ಗೇಟು ತೆರೆಯುವುದು, ಹಾಕುವುದು ಎಂಬ ಗೊಂದಲದ ಮಧ್ಯೆ ಕೃಷಿ ಸಹಿತ ಜೀವ ಹಾನಿ ಸಂಭವಿಸಿರುವ ಉದಾಹರಣೆಗಳು ಸಾಕಷ್ಟಿದೆ.
ಬಂಟ್ವಾಳ ಕಸಬಾ, ಅಮ್ಟಾಡಿ, ನಾವೂರು, ಮಣಿನಾಲ್ಕೂರು, ಸರಪಾಡಿ, ಪಾಣೆಮಂಗಳೂರು ಹೋಬಳಿಯ ಬಂಟ್ವಾಳ ಮೂಡ, ಪಾಣೆಮಂಗಳೂರು, ಬಾಳ್ತಿಲ, ಶಂಬೂರು, ನರಿಕೊಂಬು, ಬರಿಮಾರು, ಕಡೇಶ್ವಾಲ್ಯ, ಕರಿಯಂಗಳ, ಮೇರಮಜಲು, ಪುದು, ತುಂಬೆ, ಕೊಡ್ಮಾಣ್, ಕಳ್ಳಿಗೆ, ಬಡಗಬೆಳ್ಳೂರು, ಸಜಿಪಮೂನ್ನೂರು, ಸಜಿಪನಡು ಗ್ರಾಮಗಳನ್ನು ಮಳೆ ಅನಾಹುತಕ್ಕೆ ತುತ್ತಾಗುವ ಗ್ರಾಮಗಳೆಂದು ಕಂದಾಯ ಇಲಾಖೆ ಗುರುತಿಸಿದೆ.
ಮುಂಜಾಗ್ರತಾ ಕ್ರಮ..: ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ಸೂಚನೆ ನೀಡುವುದು, ತೀರಾ ಮುಳುಗಡೆಯಾಗುವ ಸ್ಥಳದಲ್ಲಿರುವವರನ್ನು ಮುಂಚೆಯೆ ಸ್ಥಳಾಂತರಿಸುವುದು, ಮನೆ ಸಮೀಪ ಇರುವ ಗುಡ್ಡ, ಮರಗಳು, ವಿದ್ಯುತ್ ಕಂಬಗಳಿಂದ ರಕ್ಷಣೆಯ ವ್ಯವಸ್ಥೆ ಮಾಡುವುದು, ರಸ್ತೆಯಂಚಿನಲ್ಲಿ ಬೀಳಲು ಸಿದ್ಧವಾಗಿರುವ ಮರಗಳ ತೆರವು ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದುದು ತಕ್ಷಣಕ್ಕೆ ಆಗಬೇಕಾಗಿದೆ.
ತಾಲೂಕು ಆಡಳಿತ ಸಜ್ಜು...
ತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಜರಗಿಸಲು ತಾಲೂಕು ಮಟ್ಟದ ಅಧಿಕಾರಿಗಳ ಸಮಾಲೋಚನಾ ಸಭೆ ನಡೆದಿದೆ. ಎಲ್ಲಾ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಆರು ವಿಶೇಷ ಕಾರ್ಯಪಡೆ ತಂಡ ರಚಿಸಲಾಗಿದ್ದು ತಾಲೂಕು ಮಟ್ಟದ ಅಧಿಕಾರಿಗಳನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ನೆರೆ ಸಾಧ್ಯತಾ ಸಂದರ್ಭದಲ್ಲಿ ತುರ್ತು ರಕ್ಷಣೆಗಾಗಿ ಪಾಣೆಮಂಗಳೂರು ಶಾರದಾ ಪ್ರೌಢಶಾಲೆ, ಪಾಣೆಮಂಗಳೂರು ಹಿರಿಯ ಪ್ರಾಥಮಿಕ ಶಾಲೆ, ಬಂಟ್ವಾಳ ಪ್ರವಾಸಿ ಮಂದಿರ, ಬಂಟ್ವಾಳ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೊಳಲಿ ವಿದ್ಯಾವಿಲಾಸ ಶಾಲೆ, ಬ್ರಹ್ಮರಕೂಟ್ಲು ಹಿರಿಯ ಪ್ರಾಥಮಿಕ ಶಾಲೆ, ಪುದು- ಸಜಿಪಮುನ್ನುರು ಗ್ರಾಮ ಪಂಚಾಯತುಗಳ ಸಹಿತ ಆಯ್ದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ. ಎರಡು ಯಾಂತ್ರಿಕೃತ ದೋಣಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

