ದಕ್ಷಿಣ ಕನ್ನಡ

ಡೆಂಘೀ ಬಾಧೆಗೆ ಸುಳ್ಯ ತತ್ತರ

Published On :

ಸುಳ್ಯ: ಸುಳ್ಯ ತಾಲೂಕು ಡೆಂಘೀ ಬಾಧೆಯಿಂದ ಅಕ್ಷರಶಃ ತತ್ತರಿಸಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಡೆಂಘೀ ಜ್ವರ ಬಾಧೆ ವ್ಯಾಪಕವಾಗಿದ್ದು ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರ ಸಾಹಸ ಪಡುತ್ತಿದೆ.
 ಜ್ವರಕ್ಕೆ ಗುತ್ತಿಗಾರು ಸಮೀಪ ನಿವಾಸಿಗಳಾದ ನಿರ್ಮಲ ಕಾಡುಕೊಲ್ಯ, ಜಯರಾಮ ಗೌಡ ಮತ್ತು ಕೇನ್ಯ ನಿವಾಸಿ ಕೃಷ್ಣಪ್ಪ ನಾಯ್ಕ್ ಎಂಬವರು ಬಲಿಯಾಗಿದ್ದಾರೆ. ಆದರೆ ಆರೋಗ್ಯ ಇಲಾಖೆ ಪ್ರಕಾರ ಇದು ಡೆಂಘೀನಿಂದಾದ ಮರಣವಲ್ಲ. ಇಲಾಖೆ ಪ್ರತಿ ಬಾರಿಯೂ ಅಂಕಿ ಅಂಶ ಮುಚ್ಚಿಡುವ ಕಾರಣ ಇಲ್ಲಿನ ಗಂಭೀರತೆ ಅಷ್ಟಾಗಿ ಬಹಿರಂಗಗೊಂಡಿಲ್ಲ.
 ಸುಳ್ಯ ತಾಲೂಕಿಗೆ ಡೆಂಘೀ ಹೊಸತೇನಲ್ಲ. ಕಳೆದ ವರ್ಷ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಂಡುಬಂದಿದ್ದ ಡೆಂಘೀ ತಿಂಗಳ ಹಿಂದೆ ಗುತ್ತಿಗಾರು ಪರಿಸರದ ಮೆಟ್ಟಿನಡ್ಕ, ಕಾಡುಕೊಲ್ಯ, ಹಾಲೆಮಜಲು, ಚತ್ರಪ್ಪಾಡಿ, ಉತ್ರಂಬೆ, ಸಾಲ್ತಾಡಿ ಪ್ರದೇಶಗಳಲ್ಲಿ ಕಂಡುಬಂದು ನಂತರ ಪಕ್ಕದ ಗ್ರಾಮಗಳಾದ ನೆಲ್ಲೂರು ಕೆಮ್ರಾಜೆ, ಉಬರಡ್ಕ ಮಿತ್ತೂರು, ಅಮರಮುಡ್ನೂರು, ದೇವಚಳ್ಳ, ಸುಬ್ರಹ್ಮಣ್ಯ, ಬಳ್ಪ, ಏನೆಕಲ್ಲು ಗ್ರಾಮಗಳಿಗೂ ವ್ಯಾಪಿಸಿತು. ಸುಳ್ಯ ನಗರದಲ್ಲೂ ತನ್ನ ಪ್ರತಾಪ ತೋರಿಸಿದೆ.
ಸುಳ್ಯ ಸರ್ಕಾರಿ ಆಸ್ಪತ್ರೆ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಾಖಲಾದ ಜ್ವರ ಪೀಡಿತರು ಪುತ್ತೂರು, ಮಂಗಳೂರುಗಳ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳ ಭೇಟಿ: ಡೆಂಘೀ ಪೀಡಿತ ಪ್ರದೇಶಗಳಾದ ಗುತ್ತಿಗಾರು, ನಾಲ್ಕೂರು ಗ್ರಾಮಗಳಿಗೆ ಜಿಲ್ಲಾ ಮಟ್ಟದ ಸರ್ವೇಕ್ಷಣಾಧಿಕಾರಿ, ಮೈಕೊ ಬಯಾಲಾಜಿಸ್ಟ್, ಎಂಟಮಲಾಜಿಸ್ಟ್, ದ.ಕ. ಜಿಲ್ಲಾ ಮಲೇರಿಯಾ ಅಧಿಕಾರಿ, ದ.ಕ. ಜಿಲ್ಲಾ ಉಸ್ತುವಾರಿ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಈಡಿಸ್ ಇಜಿಪ್ಟೈ ಸೊಳ್ಳೆಗಳ ನಿರ್ಮೂಲನೆ ಮಾಡುವ ಕುರಿತು ಸ್ಥಳೀಯರಿಗೆ ಮಾರ್ಗದರ್ಶನ ನೀಡಿದ್ದಾರೆ.
ಸಿಬ್ಬಂದಿ, ಸೌಕರ್ಯ ಕೊರತೆ: ಇತ್ತೀಚೆಗೆಷ್ಟೆ ಕೋಟಿ ರು. ವೆಚ್ಚದಲ್ಲಿ ಗುತ್ತಿಗಾರು ಮುಖ್ಯ ಪೇಟೆಯಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿದ್ದು,  ಆದರೆ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಪ್ರಸ್ತುತ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬ ವೈದ್ಯ ಹಾಗೂ ಇಬ್ಬರು ದಾದಿಯರು ಸೇವೆ ಸಲ್ಲಿಸುತ್ತಿದ್ದಾರೆ.
 ಈ ಕೇಂದ್ರದಲ್ಲಿ ರಕ್ತ ತಪಾಸಣೆಯ ಫಲಿತಾಂಶ ದೊರೆಯಬೇಕಾದರೆ ಕನಿಷ್ಟ ಮೂರು ದಿನವಾದರೂ ಕಾಯ ಬೇಕಾದ ಪರಿಸ್ಥಿತಿ ಇದೆ. ಇನ್ನೊಂದೆಡೆ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಅವರಿಗೆ ಚಿಕಿತ್ಸೆ ನೀಡಲು ಯಾವುದೇ ಹೆಚ್ಚುವರಿ ವೈದ್ಯರ ನೇಮಕ ಇನ್ನೂ ಆಗಿಲ್ಲ. ಒಬ್ಬರೇ ವೈದ್ಯರಿರುವುದರಿಂದ ರೋಗಿಗಳಿಗೆ ಕಾಯುವ ಬವಣೆ ತಪ್ಪಿದ್ದಲ್ಲ.
ಆ್ಯಂಬುಲೆನ್ಸ್ ಇಲ್ಲ: ವೈದ್ಯಕೀಯ ಸಿಬ್ಬಂದಿ ಕೊರತೆ ಒಂದೆಡೆಯಾದರೆ ಇನ್ನೊಂದೆಡೆ ಈ ಕೇಂದ್ರದಲ್ಲಿ ರೋಗಿಯನ್ನು ತುರ್ತಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ವರ್ಗಾಯಿಸಬೇಕಾದ ಸ್ಥಿತಿ ನಿರ್ಮಾಣವಾದರೆ ಆ್ಯಂಬುಲೆನ್ಸ್ ಸೇವೆ ಇಲ್ಲಿಲ್ಲ, ಆಂಬುಲೆನ್ಸ್ ಸೇವೆ ಗುತ್ತಿಗಾರಿನಲ್ಲಿ ಪ್ರಾರಂಭಿಸಬೇಕು ಎಂಬ ಬಹು ದಿನಗಳ ಗ್ರಾಮಸ್ಥರ ಕೂಗು ಅಧಿಕೃತರಿಗೆ ಇನ್ನೂ ಕೇಳಿದಂತಿಲ್ಲ.
ಕ್ರಮಕ್ಕೆ ಮುಂದಾದ ಪಂಚಾಯಿತಿ: ಡೆಂಘೀ ಜ್ವರದಿಂದಾಗಿ ಇಬ್ಬರು ಮೃತಪಟ್ಟ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ ಗುತ್ತಿಗಾರು ಗ್ರಾ.ಪಂ. ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದಿಂದ ಮನೆ ಮನೆ ಭೆಟಿ ನೀಡಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಯತ್ನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಮುಖ್ಯವಾಗಿ ಕೋಳಿ ಹಾಗೂ ಹಂದಿ ಸಾಕಣೆಯ ಫಾರಂಗಳಿಂದ ಈ ಪ್ರದೇಶದಲ್ಲಿ ಡೆಂಘೀ ಕಾಣಿಸಿಕೊಂಡಿದೆ ಎಂಬುದನ್ನು ಹಿರಿಯ ತಜ್ಞರು ದೃಢಪಡಿಸಿದ್ದಾರೆ. ಆದುದರಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಪಂಚಾಯತ್ ತನ್ನ ವ್ಯಾಪ್ತಿಯ ಕೋಳಿ ಹಾಗೂ ಹಂದಿ ಫಾರಂ -ಅಂಗಡಿಗಳನ್ನು ಸೋಮವಾರದಿಂದ ಮುಚ್ಚುವಂತೆ ಮಾಲಿಕರಿಗೆ ಈಗಾಗಲೇ ನೋಟಿಸ್ ನೀಡಿದೆ. ಇದಲ್ಲದೆ ಶುಚಿತ್ವವನ್ನು ನಿರ್ಲಕ್ಷಿಸಿದ ಹೊಟೇಲ್‌ಗಳಿಗೆ ಬಂದ್ ಮಾಡುವಂತೆ ಮೌಖಿಕ ಆದೇಶ ನೀಡಲಾಗಿದೆ. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ತರಕಾರಿ ಅಂಗಡಿಗಳಗೂ ಎಚ್ಚರಿಕೆ ನೀಡಲಾಗಿದೆ.
ಸಚಿವರ ಭೇಟಿ: ಈಗಾಗಲೇ ಆರೋಗ್ಯ ಸಚಿವ ಯು.ಟಿ. ಖಾದರ್, ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್. ಅಂಗಾರ, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ ಸೇರಿದಂತೆ ಜನಪ್ರತಿನಿಧಿಗಳೂ ಭೇಟಿ ನೀಡಿ ಜನರಲ್ಲಿ ಧೈರ್ಯ ತುಂಬಿದ್ದು, ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸುಳ್ಯ ಆಸ್ಪತ್ರೆಗೆ ಜನಪ್ರತಿನಿಧಿಗಳ ಭೇಟಿ
 ಸುಳ್ಯ:
ತಾಲೂಕಿನಾದ್ಯಂತ ಡೆಂಘೀ ಜ್ವರ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಜನಪ್ರತಿನಿಧಿಗಳು ಸೋಮವಾರ ಸುಳ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ, ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯ ಪ್ರಸನ್ನ, ನಗರ ಪಂಚಾಯಿತಿ ಸದಸ್ಯರಾದ ಮೋಹಿನಿ, ಶೀಲಾವತಿ, ಜಾನಕಿ ಮತ್ತಿತರರು ಭೇಟಿ ನೀಡಿ ರೋಗಿಗಳ ಯೋಗಕ್ಷೇವು ವಿಚಾರಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಣಾಕರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ, ಸುಳ್ಯದ ಸಮುದಾಯ ಭವನದಲ್ಲಿ ಈವರೆಗೆ 26 ಮಂದಿ ಶಂಕಿತ ಡೆಂಘೀ ಜ್ವರಕ್ಕೆ ಚಿಕಿತ್ಸೆ ಪಡೆದು ಮರಳಿದ್ದು ಅವರಲ್ಲಿ ಹೆಚ್ಚಿನವರು ಆರೋಗ್ಯದಿಂದಿದ್ದಾರೆ. ಇನ್ನೂ 7 ಮಂದಿಗೆ ಡೆಂಘೀ ತಗಲಿರುವುದಾಗಿ ಶಂಕಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಇಬ್ಬರು ಶಂಕಿತ ಡೆಂಘೀ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬೆಳ್ತಂಗಡಿಯಲ್ಲೂ ವ್ಯಾಪಕ
ಬೆಳ್ತಂಗಡಿ:
ತಾಲೂಕಿನಾದ್ಯಂತ ಡೆಂಘೀ ಜ್ವರ ವ್ಯಾಪಕವಾಗಿ ಪಸರಿಸಿದೆ. ಸರ್ಕಾರಿ ಆಸ್ಪತ್ರೆಯ ಲೆಕ್ಕಾಚಾರದ ಪ್ರಕಾರ ಸುಮಾರು 46 ಪ್ರಕರಣಗಳು ದಾಖಲಾಗಿವೆ. ವಿವಿಧೆಡೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 50ಕ್ಕೂ ಹೆಚ್ಚಿನ ರೋಗಿಗಳು ದಾಖಲಾಗಿದ್ದಾರೆ. ಬದ್ಯಾರು ಆಸ್ಪತ್ರೆಯಲ್ಲಿ ಅತಿ ಹೆಚ್ಚಿನ ಡೆಂಘೀ ಪೀಡಿತರಿದ್ದು, ಆಸ್ಪತ್ರೆ ಸಿಬ್ಬಂದಿ, ಸರ್ಕಾರಿ ವೈದ್ಯರಿಗೆ ರೋಗಿಗಳ ಅಂಕಿ ಅಂಶಗಳನ್ನು ತಿಳಿಸದಿರುವುದೂ ನಡೆದಿದೆ. ಅಳದಂಗಡಿಯ ಒಂದೇ ಮನೆಯ ಕೊರಗಪ್ಪ, ಬೇಬಿ ಮತ್ತು ಸೌಮ್ಯ ಡೆಂಘೀ ಪೀಡಿತರಾಗಿದ್ದಾರೆ ಎನ್ನಲಾಗಿದೆ.

ಪುತ್ತೂರು ತಾಲೂಕಲ್ಲಿ 7 ಪ್ರಕರಣ ದೃಢ
ಪುತ್ತೂರು:
ತಾಲೂಕಿನಲ್ಲಿ ಜನವರಿಯಿಂದ ಈ ತನಕ ಒಟ್ಟು 50 ಶಂಕಿತ ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರದಿಯಾದ 7 ಪ್ರಕರಣಗಳು ಡೆಂಘೀ ಎಂದು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಬದ್ರುದ್ದೀನ್ ತಿಳಿಸಿದ್ದಾರೆ.
 ತಾಲೂಕಿನಲ್ಲಿ ಈ ತನಕ ಡೆಂಘೀ ಜ್ವರದಿಂದಾಗಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ.
ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಲೋಕೇಶ್, ದಾಮೋದರ್, ದೇವಣ್ಣ ಗೌಡ, ರಾಮಚಂದ್ರ ಮತ್ತು ಶರತ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವೆಂಕಟೇಶ್ ಹಾಗೂ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅಮ್ಮಣ್ಣಿ ಎಂಬವರಿಗೆ ಡೆಂಘೀ ಬಾಧಿಸಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರೆಲ್ಲರೂ ಗುಣಮುಖರಾಗಿರುವುದಾಗಿ ಆರೋಗ್ಯ ಇಲಾಖೆಯಿಂದ ತಿಳಿದು ಬಂದಿದೆ.
 ಪುತ್ತೂರಿನ ವಿವಿಧ ಖಾಸಗಿ ಆಸ್ಪತ್ರೆಗೆಗಳಲ್ಲಿ ಒಟ್ಟು 43 ಮಂದಿ ಶಂಕಿತ ಜ್ವರ ಪೀಡಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪುತ್ತೂರು ತಾಲೂಕಿನ 19 ಮಂದಿ, ಸುಳ್ಯ ತಾಲೂಕಿನ 13 ಮಂದಿ, ಬೆಳ್ತಂಗಡಿಯ 4 ಮಂದಿ, ಬಂಟ್ವಾಳದ 3 ಮಂದಿ, ಮಡಿಕೇರಿ ಮತ್ತು ಕೇರಳದ ತಲಾ ಇಬ್ಬರು ಶಂಕಿತ ಜ್ವರ ರೋಗಿಗಳು ಪುತ್ತೂರಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದಾರೆ.
ಡೆಂಘೀ ಪ್ರಕರಣಗಳಿಗೆ ಸಂಬಂಧಿಸಿದ ಎಲಿಸಾ ಪರೀಕ್ಷೆ ಮಂಗಳೂರಿನ ಜಿಲ್ಲಾ ಪ್ರಯೋಗಾಲಯ, ಕೆಎಂಸಿ ಮತ್ತು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಲಭ್ಯವಿದೆ. ಇಲ್ಲಿ ಒಂದೇ ದಿನದಲ್ಲಿ ಶಂಕಿತ ಡೆಂಘೀ ರೋಗಿಗಳ ರಕ್ತ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.