ತರಗತಿಗೆ ಗುತ್ತಿಗೆ ಶಿಕ್ಷಕರು ಬಂದಿಲ್ಲ!
ಮಂಗಳೂರು: ದ.ಕ. ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಪಾಠ ಮಾಡುತ್ತಿದ್ದ ಗುತ್ತಿಗೆ ಶಿಕ್ಷಕರು ಈ ಬಾರಿ ಮತ್ತೆ ತರಗತಿ ಪ್ರವೇಶಿಸಿಲ್ಲ. ಹಾಗಾಗಿ ಶಾಲಾರಂಭವಾದರೂ ಗುತ್ತಿಗೆ ಶಿಕ್ಷಕರ ಮರು ನೇಮಕಾತಿ ಸಾಧ್ಯವಾಗಿಲ್ಲ. ಬೆಳ್ತಂಗಡಿ ತಾಲೂಕಿನ ನಕ್ಸಲ್ ಬಾಧಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಹಾಲಿ ಶಿಕ್ಷಕರೇ ಹೊಂದಾಣಿಕೆಯಲ್ಲಿ ಪಾಠ ಮಾಡಬೇಕಾಗಿದೆ.
ಕಳೆದ ವರ್ಷ ಸರ್ವ ಶಿಕ್ಷಣ ಅಭಿಯಾನದಲ್ಲಿ ನಕ್ಸಲ್ ಪ್ಯಾಕೇಜ್ನಲ್ಲಿ ನಕ್ಸಲ್ ಬಾಧಿತ ಪ್ರದೇಶದ 24 ಶಾಲೆ ಪೈಕಿ 11 ಶಾಲೆಗೆ ಗುತ್ತಿಗೆ ಆಧಾರದಲ್ಲಿ 13 ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ಶಿಕ್ಷಕರಿಗೆ ತಲಾ ರು. 5 ಸಾವಿರ ಮಾಸಿಕ ಗೌರವಧನ ನೀಡಲಾಗುತ್ತಿತ್ತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ(ಎಸ್ಡಿಎಂಸಿ)ಖಾತೆಯಿಂದ ಸ್ವಸಹಾಯ ಸಂಘಗಳ ಮುಖೇನ ಶಿಕ್ಷಕರಿಗೆ ಗೌರವಧನ ಪಾವತಿಯಾಗುತ್ತಿತ್ತು.
ನಕ್ಸಲ್ ಪ್ಯಾಕೇಜ್ಗೆ ಮಂಜೂರಾಗುವಾಗ ವಿಳಂಬವಾಗಿ ಸಪ್ಟೆಂಬರ್ನಿಂದ ಶಿಕ್ಷಕರನ್ನು ಗುತ್ತಿಗೆಯಲ್ಲಿ ನೇಮಿಸಲಾಗಿತ್ತು. ಏಪ್ರೀಲ್ವರೆಗೆ 8 ತಿಂಗಳು ಕಾರ್ಯನಿರ್ವಹಿಸಿದ್ದು, ಒಟ್ಟು ರು. 5 ಲಕ್ಷ ವ್ಯಯಿಸಲಾಗಿದೆ. ಇದಲ್ಲದೆ 24 ಶಾಲೆಗಳ 21,500 ಮಂದಿ ವಿದ್ಯಾರ್ಥಿಗಳಿಗೆ ಕೊಡೆ, ಬ್ಯಾಗ್, ಚಪ್ಪಲ್, ಅಕ್ವಾಗಾರ್ಡ್ ಹಾಗೂ ನ್ಯಾಪ್ಕಿನ್ ವಿತರಿಸಲಾಗಿತ್ತು. ಒಟ್ಟು ನಕ್ಸಲ್ ಪ್ಯಾಕೇಜ್ನಲ್ಲಿ ರು. 25 ಲಕ್ಷ ಖರ್ಚು ಮಾಡಲಾಗಿತ್ತು.
ಈ ಬಾರಿ ಅನುದಾನ ಬಂದಿಲ್ಲ: ಈಗ ಶಾಲಾರಂಭವಾಗಿದೆ, ಕಳೆದ ವರ್ಷ ಕಾರ್ಯನಿರ್ವಹಿಸಿದ ಗುತ್ತಿಗೆ ಶಿಕ್ಷಕರು ಈ ಸಲ ಶಾಲೆಗೆ ಹೋಗಿಲ್ಲ. ಅವರ ಗುತ್ತಿಗೆ ನವೀಕರಣ ಆಗಿಲ್ಲ. ಸರ್ವ ಶಿಕ್ಷಣ ಅಭಿಯಾನದ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಈ ವರ್ಷವೂ ರು. 25 ಲಕ್ಷ ನಕ್ಸಲ್ ಪ್ಯಾಕೇಜ್ಗೆ ಪ್ರಸ್ತಾಪಿಸಲಾಗಿದೆ. ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ಅಲ್ಲಿಂದ ಇನ್ನೂ ಮಂಜೂರಾಗಿಲ್ಲ. ಹಾಗಾಗಿ ಅನುದಾನ ಬಂದ ಬಳಿಕ ಗುತ್ತಿಗೆ ಶಿಕ್ಷಕರನ್ನು ಮುಂದುವರಿಸಲು ತೊಂದರೆ ಇಲ್ಲ. ಅಲ್ಲಿವರೆಗೆ ಜಿಲ್ಲಾಡಳಿತಕ್ಕೆ ಜವಾಬ್ದಾರಿ ನಿರ್ವಹಿಸುವಂತೆ ಕೋರಲಾಗಿದೆ ಎನ್ನುತ್ತಾರೆ ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಸಹ ಸಂಯೋಜಕ ಶಿವಪ್ರಕಾಶ್.
ಶಾಲಾರಂಭವಾಗಿದ್ದು, ಗುತ್ತಿಗೆ ಶಿಕ್ಷಕರ ಮುಂದುವರಿಕೆ ಕುರಿತಂತೆ ಶಿಕ್ಷಣ ಇಲಾಖೆ ಅಥವಾ ಜಿಲ್ಲಾಡಳಿತದಿಂದ ಯಾವುದೇ ಮಾಹಿತಿ ಬಂದಿಲ್ಲ. ಅಧಿಕೃತವಾಗಿ ಸೂಚನೆ ಬಂದ ಬಳಿಕವೇ ಶಿಕ್ಷಕರನ್ನು ಮುಂದುವರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬೆಳ್ತಂಗಡಿ ತಾಲೂಕಿನಲ್ಲಿ 184 ಶಿಕ್ಷಕರ ಹುದ್ದೆ ಖಾಲಿ ಇದ್ದು, ನಕ್ಸಲ್ ಬಾಧಿತ ಪ್ರದೇಶದ 24 ಶಾಲೆಗಳ ಪೈಕಿ 18 ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಖಾಲಿ ಇದೆ. ಸದ್ಯಕ್ಕೆ ಗುತ್ತಿಗೆ ಶಿಕ್ಷಕರ ನೇಮಕ ವರೆಗೆ ಹಾಲಿ ಶಿಕ್ಷಕರು ಹೊಂದಾಣಿಕೆಯಲ್ಲಿ ಪಾಠ ಮಾಡುತ್ತಿದ್ದಾರೆ ಎನ್ನುತ್ತಾರೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

