ಕಡಲು ಕೊರೆತಕ್ಕೆ ಪೈಪ್ಲೈನ್ ಕಾರಣ
ಕಾಪು: ಪಡುಬಿದ್ರಿಯ ಪರಿಸರದ ಸಾವಿರಾರು ಎಕ್ರೆ ಕೃಷಿ- ಅರಣ್ಯ ಭೂಮಿ ಕಬಳಿಸಿದ ಆರೋಪ ಹೊತ್ತ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಉಷ್ಣ ವಿದ್ಯುತ್ ಸ್ಥಾವರ (ಯುಪಿಸಿಎಲ್) ಇದೀಗ ಸಮುದ್ರ ತೀರದಲ್ಲಿಯೂ ತೊಂದರೆಗೆ ಕಾರಣವಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಎರ್ಮಾಳು ತೆಂಕ ಗ್ರಾಮದಲ್ಲಿ ಕಡಲು ಕೊರೆತ ತೀವ್ರವಾಗಿದ್ದು, ಮೀನುಗಾರಿಕಾ ರಸ್ತೆಯು ಅಪಾಯಕ್ಕೆ ಸಿಲುಕಿದೆ. ಮಾತ್ರವಲ್ಲ ರಸ್ತೆಯ ಪಕ್ಕದಲ್ಲಿರುವ ತೆಂಗಿನ ತೋಟ ಕೂಡ ಸಮುದ್ರ ಪಾಲಾಗುವ ಭೀತಿ ಇದ್ದು, ತೋಟದಲ್ಲಿರುವ ನಾಲ್ಕೈದು ಮನೆಗಳ ನಿವಾಸಿಗಳು ಕೂಡ ಆತಂಕದಲ್ಲಿದ್ದಾರೆ.
ಇಲ್ಲಿಯೇ ಸಮೀಪದಲ್ಲಿ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ಸಮುದ್ರದ ನೀರು ಸಾಗಿಸುವ ಪೈಪ್ಲೈನ್ನದ್ದು, ಈ ಪೈಪ್ಗಳು ಸಮುದ್ರದಲ್ಲಿ ಸಾಕಷ್ಟು ದೂರದವರೆಗೆ ಚಾಚಿಕೊಂಡಿವೆ.
ಇದು ಅಲೆಗಳ ಸರಾಗ ಸಂಚಲನಕ್ಕೆ ಅಡ್ಡಿಯಾಗಿ ಈ ಪ್ರದೇಶದಲ್ಲಿ ಕೊರೆತ ತೀವ್ರವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಪೈಪ್ಲೈನ್ನ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೊರೆತ ಜಾಸ್ತಿ ಇದೆ.
ಪರಿಶೀಲನೆ: ಕೊರೆತ ಪ್ರದೇಶಕ್ಕೆ ಗುರುವಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹಾಗೂ ಜೆಡಿಎಸ್ ಸಮನ್ವಯ ಸಮಿತಿಯ ಅಧ್ಯಕ್ಷ ವಸಂತ ವಿ. ಸಾಲ್ಯಾನ್ ಭೇಟಿ ನೀಡಿ, ಪರಿಶೀಲಿಸಿದರು.
ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಈ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ, ಅವರು ವಿಧಾನಸಭೆಯಲ್ಲಿ ಅದನ್ನು ಪ್ರಸ್ತಾಪಿಸಿ ಸೂಕ್ತ ಪರಿಹಾರ ಕ್ರಮಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಪ್ರಯತ್ನಿಸುವುದಾಗಿ ಬಂದರು-ಮೀನುಗಾರಿಕಾ ಮಾಜಿ ಸಚಿವ ವಸಂತ ಸಾಲ್ಯಾನ್ ಅವರು ಸ್ಥಳೀಯ ಜನರಿಗೆ ಭರವಸೆ ನೀಡಿದರು.
ಜೆಡಿಎಸ್ ನಾಯಕರಾದ ಯೋಗೀಶ್ ಶೆಟ್ಟಿ, ವಾಸುದೇವ ರಾವ್ ಇದ್ದರು.
ಸರ್ಕಾರದ ನಿರ್ಲಕ್ಷ್ಯವೇ ಕಾರಣ...
ಹಿಂದಿನ ರಾಜ್ಯ ಸರ್ಕಾರ ಕಡಲು ಕೊರೆತಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿಲ್ಲ. ತಾವು ಸಚಿವರಾಗಿದ್ದಾಗ ಉಡುಪಿ, ದ.ಕ. ಮತ್ತು ಉ.ಕ. ಜಿಲ್ಲೆಗಳಲ್ಲಿ ಕಡಲು ಕೊರೆತ ತಪ್ಪಿಸಲು ರು. 300 ಕೋಟಿ ವೆಚ್ಚದ ಯೋಜನೆ ತಯಾರಿಸಿದ್ದು, ನಂತರದ ಸರ್ಕಾರಗಳು ಅದನ್ನು ಮೂಲೆಗುಂಪು ಮಾಡಿದೆ. ಇನ್ನಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇಲ್ಲಿನ ಜನರು ಬದುಕನ್ನು ಉಳಿಸಬೇಕು.
ಯುಪಿಸಿಎಲ್ನಿಂದ ಕೊರೆತ...
ಯುಪಿಸಿಎಲ್ ಕಂಪನಿಯು 2 ವರ್ಷಗಳ ಹಿಂದೆ ಇಲ್ಲಿ ಪೈಪ್ಲೈನ್ನನ್ನು ಸಮುದ್ರಕ್ಕೆ ಹಾಕುವಾಗ ಭಾರಿ ಗಾತ್ರದ ಬಂಡೆಗಳನ್ನು ಹಾಕಿ ಸಮುದ್ರದ ಅಲೆಗಳಿಗೆ ತಡೆ ಒಡ್ಡಿದ್ದಾರೆ. ಅವರ ಪೈಪ್ಲೈನ್ನ ಕೆಲಸ ಪೂರ್ಣ ಆಗಿದ್ದರೂ, ಈ ಬಂಡೆ ಕಲ್ಲುಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿಯೇ ಈ ಪರಿಸರದಲ್ಲಿ ಕಡಲ್ ಕೊರೆತ ಆರಂಭವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಗಮನ ಹರಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

