ದಕ್ಷಿಣ ಕನ್ನಡ

ಡೆಂಘೀ ಜ್ವರ ವ್ಯಾಪಕ, ಆರೋಗ್ಯ ಇಲಾಖೆಗೆ ತರಾಟೆ

Published On :

ಮಂಗಳೂರು: ಜಿಲ್ಲೆಯನ್ನು ವ್ಯಾಪಿಸುತ್ತಿರುವ ಡೆಂಘೀ ಜ್ವರ, ಅದನ್ನು ದೃಢಪಡಿಸಲು ಎಲಿಸಾ ಪರೀಕ್ಷೆ ಮಾಡುವ ಕೇಂದ್ರದ ಕೊರತೆ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ಇತ್ಯಾದಿ ವಿಚಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೀಡಾಗಿದ್ದು, ಆರೋಗ್ಯ ಇಲಾಖೆಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು.
ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಅಧ್ಯಕ್ಷ ಕೊರಗಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ಜರುಗಿತು.
ಜಿಲ್ಲೆಯಲ್ಲಿ ಡೆಂಘೀ ಜ್ವರ ಹಬ್ಬದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಕಿನ್ಯದ ಕೃಷ್ಣಪ್ಪ ನಾಯ್ಕ ಡೆಂಘೀಗೆ ಮೃತಪಟ್ಟಿದ್ದು, ಇತರೆ ಮೂರು ಮಂದಿ ಕೂಡ ಬೇರೆ ಕಾರಣದಿಂದ ಮೃತಪಟ್ಟಿದ್ದಾರೆ. ಡೆಂಘೀ ದೃಢಪಡಿಸಲು ಎಲಿಜಾ ಪರೀಕ್ಷೆಯಿಂದ ಸಾಧ್ಯವಿದ್ದು, ಈ ಉಪಕರಣ ಮಂಗಳೂರಿನ ವೆನ್ಲಾಕ್, ಫಾದರ್ ಮುಲ್ಲರ್ಸ್ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ. ಇತರೆ ಯಾವುದೇ ಪರೀಕ್ಷೆಯಿಂದ ಅದನ್ನು ಡೆಂಘೀ ಎಂದು ದೃಢಪಡಿಸಲು ಸಾಧ್ಯವಿಲ್ಲ. ಇದುವರೆಗೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಬಂದ ವರದಿ ಪ್ರಕಾರ 35 ಪ್ರಕರಣ ಹಾಗೂ ಖಾಸಗಿ ಆಸ್ಪತ್ರೆಗಳಿಂದ 57 ಡೆಂಘೀ ಪ್ರಕರಣ ದಾಖಲಾಗಿದೆ. ಮಾರ್ಚ್ ಕೊನೆಯಿಂದಲೇ ಡೆಂಘೀ ಕುರಿತು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀರಂಗಪ್ಪ ಹೇಳಿದರು.
ವಿಪಕ್ಷ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ಪ್ರತಿ ವರ್ಷ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ವಿಚಾರ ಗೊತ್ತಿದ್ದೂ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಚರಂಡಿ ನಿರ್ವಹಣೆ ಮಾಡಿಲ್ಲ. ಬ್ಲೀಚಿಂಗ್ ಪೌಡರ್ ಒದಗಿಸಿಲ್ಲ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ(ಎನ್‌ಆರ್‌ಎಚ್‌ಎಂ)ಯಲ್ಲಿ ವ್ಯಾಪಕ ಅನುದಾನ ಬಂದರೂ ಪರಿಣಾಮಕಾರಿಯಾಗಿ ಬಳಸುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಆರೋಗ್ಯಾಧಿಕಾರಿ ಸಮಜಾಯಿಸಿ ನೀಡಲು ಮುಂದಾದರೂ ಅದಕ್ಕೆ ಆಸ್ಪದ ಕೊಡದ ಮಮತಾ ಗಟ್ಟಿ, ಎನ್‌ಆರ್‌ಎಚ್‌ಎಂನಲ್ಲಿ ಜಿಲ್ಲೆಗೆ ಲಭ್ಯವಾದ ಅನುದಾನದ ವಿವರ ಬಯಸಿದರು.
ಅದನ್ನು ತರಿಸಿಕೊಡುವುದಾಗಿ ಅಧಿಕಾರಿ ಹೇಳಿದಾಗ ಸಿಟ್ಟಾದ ಮಮತಾ ಗಟ್ಟಿ, ಅಧಿಕಾರಿಗಳು ಮಾಹಿತಿಯೊಂದಿಗೆ ಸಭೆಗೆ ಹಾಜರಾಗುತ್ತಿಲ್ಲ ಎಂದು ಆಕ್ಷೇಪಿಸಿದರು. ಆ ವೇಳೆಗೆ ಆರೋಗ್ಯ ಸಚಿವರ ವಿಡಿಯೋ ಕಾನ್ಫರೆನ್ಸಿಗೆ ಆರೋಗ್ಯಾಧಿಕಾರಿ ತೆರಳಿದರು.
ಬಳಿಕವೂ ವಿಷಯ ಪ್ರಸ್ತಾಪಿಸಿದ ಮಮತಾ ಗಟ್ಟಿ ಅಧಿಕಾರಿಗಳು ಸದಸ್ಯರನ್ನು ನಿರ್ಲಕ್ಷಿಸುತ್ತಾರೆ ಎಂದು ಭಾವೋದ್ವೇಗಕ್ಕೆ ಒಳಗಾದರು.
ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಸದಸ್ಯರಾದ ದೇವರಾಜ್, ಎಂ.ಎಸ್.ಮಹಮ್ಮದ್, ಸಂತೋಷ್ ಕುಮಾರ್ ಬೋಳ್ಯಾರು, ಚಂದ್ರಕಲಾ, ಕುಮಾರಿ ವಾಸುದೇವನ್ ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧ ಸಮಸ್ಯೆಗಳ ಕುರಿತು ಆರೋಗ್ಯ ಅಧಿಕಾರಿಯ ಗಮನ ಸೆಳೆದರು.
ಶಿಕ್ಷಣ ಆರೋಗ್ಯ ಸಮಿತಿ ಭೇಟಿ: ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ಶಿಕ್ಷಣ ಆರೋಗ್ಯ ಸ್ಥಾಯೀ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಎಲಿಸಾ ಪರೀಕ್ಷೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂಬ ಎಂ.ಎಸ್. ಮಹಮ್ಮದ್ ಸಲಹೆಗೆ ಸಭೆಯಲ್ಲಿ ಸಮ್ಮತಿ ವ್ಯಕ್ತಗೊಂಡಿತು.
ಡೆಂಘೀ ವ್ಯಾಪಕವಾಗಿರುವ ಸುಬ್ರಹ್ಮಣ್ಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಒದಗಿಸಲಾಗಿದೆ. ವೈದ್ಯರಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಜ್ವರ ಹೆಚ್ಚಾಗಿ ಕಾಣಿಸಿಕೊಂಡ ಕಡೆಗಳಲ್ಲಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿದೆ. ಎನ್‌ಆರ್‌ಎಚ್‌ಎಂನಲ್ಲಿ ಈ ವರ್ಷ ಅನುದಾನ ಬಿಡುಗಡೆಯಾಗಿಲ್ಲ. ಕಳೆದ ವರ್ಷ ರು. 7 ಕೋಟಿ ಬಂದಿದ್ದು, ವಿವಿಧ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ ಎಂದು ಆರೋಗ್ಯಾಧಿಕಾರಿ ಶ್ರೀರಂಗಪ್ಪ ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಮಾತನಾಡಿ, ತಾಲೂಕು ಮಟ್ಟದಲ್ಲಿ ಚರಂಡಿ ನಿರ್ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಕಾರ್ಮಿಕರ ಕೊರತೆ ಇರುವಲ್ಲಿ ಚರಂಡಿ ಸ್ವಚ್ಛತೆಗೆ ಯಂತ್ರ ನೀಡಲಾಗುವುದು. ನೀರು ನಿಲ್ಲುವಲ್ಲಿ ಕ್ರಿಮಿನಾಶಕ ಸಿಂಪಡಣೆಗೆ ಸೂಚಿಸಲಾಗಿದೆ ಎಂದರು.
ಬಿಸಿಯೂಟ ಅಕ್ಕಿ ಕಳವು ತನಿಖೆ: ಪುತ್ತೂರಿನ ಕೃಷ್ಣನಗರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಅಕ್ಕಿ ಚೀಲದಲ್ಲಿ ತೂಕ ಕಡಿಮೆ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ತನಿಖೆಗೆ ಸೂಚಿಸಲಾಗಿದೆ ಎಂದು ಸಿಇಒ ಡಾ.ವಿಜಯ ಪ್ರಕಾಶ್ ಸ್ಪಷ್ಟಪಡಿಸಿದರು.
ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಹೇಳಲಾಗಿದೆ.  ಬಿಸಿಯೂಟ ಅಕ್ಕಿ ಖರೀದಿಸುವಾಗ ಅದನ್ನು ತೂಕ ಮಾಡಿಯೇ ನಮೂದಿಸಬೇಕು. ಪ್ರಸ್ತುತ ಮಾಸಿಕ ಟೆಂಡರ್ ಮುಖೇನ ಖರೀದಿ ಇರುವುದನ್ನು 6 ತಿಂಗಳಿಗೊಮ್ಮೆ ಅಥವಾ ಒಂದು ವರ್ಷಕ್ಕೊಮ್ಮೆ ಟೆಂಡರ್ ನಡೆಸುವಂತೆ ಮಾರ್ಪಾಡುಗೊಳಿಸಲು ಸರ್ಕಾರವನ್ನುಕೋರಲಾಗುವುದು ಎಂದು ಡಾ.ವಿಜಯ ಪ್ರಕಾಶ್ ತಿಳಿಸಿದರು.
 ಸದಸ್ಯೆ ಸರಸ್ವತಿ ಕಾಮತ್, ಎಂ.ಎಸ್.ಮಹಮ್ಮದ್, ಕೇಶವ ಗೌಡ ಪ್ರಸ್ತಾಪಿಸಿದರು. ಘಟನೆ ಬಳಿಕ ತೆಗೆದುಕೊಂಡ ಕ್ರಮದ ಬಗ್ಗೆ ಅಕ್ಷರ ದಾಸೋಹ ಅಧಿಕಾರಿ ಮಂಜುಳಾ ವಿವರ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಶಿಕ್ಷಣ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಕೃಷಿ, ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಹಾಜರಿದ್ದರು.

ತುಳುವಲ್ಲೇ ಮಾತನಾಡಿದ ಸದಸ್ಯರು...!
ವಿಧಾನಸಭಾ ಸದಸ್ಯರಿಗೆ ತುಳು ಭಾಷೆಯಲ್ಲಿ ಪ್ರತಿಜ್ಞೆ ಸ್ವೀಕರಿಸಲು ವಿಧಾನಸಭೆಯಲ್ಲಿ ಅವಕಾಶ ನೀಡದಿರುವುದನ್ನು ವಿರೋಧಿಸಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ತುಳುವಿನಲ್ಲೇ ಮಾತನಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಸದಸ್ಯ ಸಂತೋಷ್ ಬೋಳ್ಯಾರ್ ತುಳುವಿನಲ್ಲೇ ವಿಷಯ ಪ್ರಸ್ತಾಪಿಸಿ, ಜಿಲ್ಲಾ ಪಂಚಾಯ್ತಿ ಸಭೆಯೂ ಪೂರ್ತಿ ತುಳುವಿನಲ್ಲೇ ನಡೆಯಬೇಕು ಎಂದು ಪಟ್ಟುಹಿಡಿದರು. ಅಷ್ಟರಲ್ಲಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಇಲ್ಲಿ ಅಧಿಕಾರಿಗಳಿಗೆ ತುಳು ಭಾಷೆ ಗೊತ್ತಿಲ್ಲದಿರುವುದರಿಂದ ಕನ್ನಡದಲ್ಲೇ ಮಾತನಾಡುವುದು ಸೂಕ್ತ ಎಂದರೂ ಸಂತೋಷ್ ಮನ್ನಣೆ ನೀಡದೆ ಕೊನೆವರೆಗೂ ತುಳುವಿನಲ್ಲೇ ಮಾತನಾಡಿದರು. ಇವರನ್ನು ಬೆಂಬಲಿಸಿ ಸದಸ್ಯೆ ತುಳಸಿ ಕೂಡ ತುಳುವಿನಲ್ಲಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.