ದಕ್ಷಿಣ ಕನ್ನಡ

ಎಲ್ಲ ಇಲಾಖೆ ಪೇಪರ್‌ಲೆಸ್ ಉದ್ದೇಶ: ಸಚಿವ ಪಾಟೀಲ್

Published On :

ಮಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳನ್ನು 'ಪೇಪರ್‌ಲೆಸ್ ಇಲಾಖೆ'ಯಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಇಲ್ಲಿನ ಲೊಯಲಾ ಸಭಾಂಗಣದಲ್ಲಿ ಆಯೋಜಿಸಲಾದ ಅವಿಭಜಿತ ದ.ಕ.ಜಿಲ್ಲೆಯ ಸಹಕಾರಿಗಳಿಂದ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರ ವತಿಯಿಂದ ನೂತನವಾಗಿ ಆಯ್ಕೆಗೊಂಡ ಶಾಸಕರು ಹಾಗೂ ಸಚಿವರ 'ಅಭಿನಂದನಾ ಹಾಗೂ ಚಿಂತನಾ ಸಮಾವೇಶ'ದಲ್ಲಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನ ಬಳಸಿ ಪೇಪರ್‌ಲೆಸ್ ಇಲಾಖೆಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದರಿಂದ ಭ್ರಷ್ಟಾಚಾರ ಕಡಿವಾಣ ಹಾಕಲು ಸಾಧ್ಯ ಎಂದರು.
ಕರಾವಳಿಯಲ್ಲಿ ಐಟಿ ಪಾರ್ಕ್: ಬೆಂಗಳೂರು ನಂತರ ಎರಡನೇ ಶ್ರೇಣಿ ಮಹಾನಗರಗಳಿಗೆ ಐ.ಟಿ., ಬಿ.ಟಿ. ಕ್ಷೇತ್ರ ವಿಸ್ತರಿಸಲಾಗುವುದು. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಐ.ಟಿ., ಬಿ.ಟಿ. ಉದ್ಯಮ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಲಿದೆ. ಇದರಿಂದ ಐ.ಟಿ. ಬಿ.ಟಿ. ರಾಜ್ಯವ್ಯಾಪಿ ಹಂಚಿಕೆಯಾಗಲಿದೆ. ಈ ನಿಟ್ಟಿನಲ್ಲಿ ಜೂ.20ರಂದು ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು ಎಂದರು.
ಮುಖ್ಯವಾಗಿ ಮಂಗಳೂರು ಮತ್ತು ಉಡುಪಿಯಲ್ಲಿ ಐಟಿ ಪಾರ್ಕ್ ಸ್ಥಾಪಿಸಲಾಗುವುದು. ಉಡುಪಿಯಲ್ಲಿ 145 ಎಕರೆ ಜಾಗ ಕಾದಿರಿಸಲು ಸಿದ್ಧ ಎಂದು ಅಲ್ಲಿನ ಉಸ್ತುವಾರಿ ಸಚಿವರು ಹೇಳಿದ್ದು, ಮಂಗಳೂರಿನಲ್ಲೂ ಜಾಗ ಒದಗಿಸಿದರೆ ಐಟಿ ಪಾರ್ಕ್ ನಿರ್ಮಿಸಲಾಗುವುದು. ಐಟಿ ಉದ್ಯಮಿಗಳಿಗೆ ಸಾಧ್ಯವಾದಷ್ಟು ಕರಾವಳಿಯನ್ನು ಕೇಂದ್ರೀಕರಿಸುವಂತೆ ಕೋರಲಾಗುವುದು ಎಂದರು.
ಐ.ಟಿ.ಕಾರಿಡಾರ್ ಸ್ಥಾಪನೆ: ಬೆಂಗಳೂರಿನಲ್ಲಿ 10.50 ಸಾವಿರ ಎಕರೆಯಲ್ಲಿ ಕೇಂದ್ರ ಸರ್ಕಾರ ಐಟಿ ಕಾರಿಡಾರ್ ಸ್ಥಾಪಿಸುತ್ತಿದೆ. ಇದರಿಂದ 400 ಮಂದಿ ಯುವಕರಿಗೆ ಉದ್ಯೋಗ ಸಿಗಲಿದೆ. ಈ ಯೋಜನೆಯ ಲಾಭ ಇಲ್ಲಿನವರಿಗೆ ದೊರಕಲಿದೆ. ಮಂಗಳೂರಿನ ಪಿಲಿಕುಳದಲ್ಲಿ ರು. 25 ಕೋಟಿ ವೆಚ್ಚದಲ್ಲಿ ಪ್ಲಾನಿಟೋರಿಯಂ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ರಾಜ್ಯ ಸಭಾಸದಸ್ಯ ಆಸ್ಕರ್ ಫೆರ್ನಾಂಡಿಸ್ ಸಮಾವೇಶ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಗೋಪಾಲ ಪೂಜಾರಿ, ಜೆ.ಆರ್.ಲೋಬೋ, ಪ್ರಮೋದ್ ಮಧ್ವರಾಜ್, ಬಿ.ಎ.ಮೊಯ್ದಿನ್ ಬಾವಾ ಅವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್, ಮಹಾನಗರ ಪಾಲಿಕೆ ಸದಸ್ಯ ವಿನಯರಾಜ್, ಉದ್ಯಮಿ ರೋಹನ್ ಮೊಂತೆರೊ, ನಿರ್ದೇಶಕರಾದ ಸದಾಶಿವ ಉಳ್ಳಾಲ್, ರಾಜಾರಾಮ ಭಟ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.