ವಿಕಲಚೇತನರ ನಡಿಗೆ ಶಾಲೆ ಕಡೆಗೆ!
ಮಂಗಳೂರು: ಆಕೆಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಹಾಗಾಗಿ ಮನೆಯಲ್ಲೇ ಪಾಠ. ಇದೀಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಯಾರ ನೆರವೂ ಇಲ್ಲದೆ ಇತರರಂತೆ ಶಾಲೆಗೆ ಹೋಗುತ್ತಾಳೆ, ಆಟ ಆಡುತ್ತಾಳೆ.
ಇದು ಸುಳ್ಯ ಶಾಂತಿನಗರ ವಿದ್ಯಾರ್ಥಿನಿ ಫರ್ಹಿನ್ತಾಜ್ ಒಬ್ಬಳ ಉದಾಹರಣೆ ಅಲ್ಲ, ಇಂಥ ಅನೇಕ ಅಂಗವಿಕಲರು ಸಬಲರಾಗಿ ಶಾಲೆ ಮೆಟ್ಟಿಲು ಹತ್ತಿದ ಉದಾಹರಣೆಗಳಿವೆ. ಅಂಗವಿಕಲರನ್ನು ಪ್ರತ್ಯೇಕ ಕಲಿಕಾ ವ್ಯವಸ್ಥೆಗೆ ಸೇರಿಸುವುದೇ ಜಾಸ್ತಿ. ಇಲ್ಲದಿದ್ದರೆ ಮನೆ ಪಾಠಕ್ಕೆ ಮೊರೆ ಹೋಗುತ್ತಾರೆ. ಅಂಥ ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡುವ ಪ್ರಯತ್ನ ನಡೆಯುವುದು ಅಪರೂಪ. ದ.ಕ. ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಇಂಥದ್ದೊಂದು ಪ್ರಯತ್ನ ಕಳೆದ ವರ್ಷ ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದೆ.
ಈ ವರ್ಷ ಎಲ್ಲ ವಿಶೇಷ ಮಕ್ಕಳಿಗೆ ಚಿಕಿತ್ಸಾ ನೆರವು ನೀಡಲು ವೈದ್ಯಕೀಯ ಕಾಲೇಜುಗಳು ಕೈಜೋಡಿಸಿವೆ. ಜಿಲ್ಲೆಯ 7 ಶೈಕ್ಷಣಿಕ ಬ್ಲಾಕ್ಗಳಲ್ಲಿ ವಿಶೇಷ ಮಕ್ಕಳ ವೈದ್ಯಕೀಯ ಶಿಬಿರ ನಡೆದಿದ್ದು 6-14 ವರ್ಷವರೆಗಿನ 5,286 ವಿಶೇಷ ಮಕ್ಕಳು ಹಾಜರಾಗಿದ್ದಾರೆ. 608 ಮಂದಿ ಮಕ್ಕಳು ಭಾರಿ ಅಂಗ ನ್ಯೂನತೆ ಹೊಂದಿದ್ದರೆ, ಉಳಿದವರು ಸಾಮಾನ್ಯ ಅಂಗವೈಕಲ್ಯಕ್ಕೆ ಒಳಗಾದವರು.
ಮನೆ ಪಾಠದಿಂದ ಶಾಲೆಗೆ: ಶಾಲೆಗೆ ಬರಲಾರದ ವಿಶೇಷ ಮಕ್ಕಳಿಗೆ ಮನೆಯಲ್ಲೇ ಪಾಠ ವ್ಯವಸ್ಥೆ ಇದೆ. ಇನ್ನು ಕೆಲವು ಮಕ್ಕಳು ಕಷ್ಟಪಟ್ಟು ಶಾಲೆಗೆ ಬರುತ್ತಿದ್ದಾರೆ. ಸಣ್ಣ ಶಸ್ತ್ರಚಿಕಿತ್ಸೆಯಲ್ಲಿ ಸರಿಹೋಗುವ ಮಕ್ಕಳಿಗೂ ಚಿಕಿತ್ಸೆ ನೀಡಲಾಗಿದ್ದು, ಇದರ ವೆಚ್ಚವನ್ನು ಸರ್ವ ಶಿಕ್ಷಣ ಅಭಿಯಾನದಿಂದ ನೀಡಲಾಗುತ್ತಿದೆ. ಈಗಾಗಲೇ ಉಪ್ಪಿನಂಗಡಿ ಮೊಗ್ರು ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಪ್ರಿಯಾ ಶಸ್ತ್ರಚಿಕಿತ್ಸೆಯಿಂದ ಚೇತರಿಸುತ್ತಿದ್ದಾಳೆ. ಈಕೆಯ ಎಡಗಾಲು ತಿರುಚಿದ್ದು, ಶಸ್ತ್ರಚಿಕಿತ್ಸೆಯಲ್ಲಿ ಗುಣಪಡಿಸಲಾಗಿದೆ ಎನ್ನುತ್ತಾರೆ ಬೆಳ್ತಂಗಡಿ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಅಧಿಕಾರಿ ಶಾಂತಿರಾಜ್. ಗೃಹ ಶಿಕ್ಷಣ ಪಡೆಯುತ್ತಿದ್ದ ಫರ್ಹಿನ್ ತಾಜ್ ಈಗ ಸುಳ್ಯ ಸರ್ಕಾರಿ ಪಿಯು ಕಾಲೇಜಿನಲ್ಲಿ 9ನೇ ತರಗತಿ. ಈಕೆ ಮೊಣಕಾಲಿನಲ್ಲಿ ನಡೆಯುತ್ತಿದ್ದಳು, ಕೈಯಲ್ಲಿ ಬರೆಯಲು ಆಗುತ್ತಿರಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಈಗ ಇತರೆ ವಿದ್ಯಾರ್ಥಿಗಳಂತೆ ಶಾಲೆಗೆ ಹೋಗುತ್ತಿದ್ದಾಳೆ ಎನ್ನುತ್ತಾರೆ ಸುಳ್ಯ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಅಧಿಕಾರಿ ಗಿರಿಜ.
ಮೆಡಿಕಲ್ ಕಾಲೇಜುಗಳ ಕಳಕಳಿ: ಮಂಗಳೂರಿನ ಫಾದರ್ ಮುಲ್ಲರ್ಸ್, ಮೂಡುಬಿದಿರೆಯ ಆಳ್ವಾಸ್ ಮೆಡಿಕಲ್ ಕಾಲೇಜು, ಪುತ್ತೂರಿನ ಆದರ್ಶ ಆಸ್ಪತ್ರೆ ಮತ್ತು ಬೆಂಗಳೂರಿ ಸ್ಕಂದ ಎಜುಕೇಷನ್ ಟ್ರಸ್ಟ್ ನಡೆಸಿದ ವೈದ್ಯಕೀಯ ಶಿಬಿರದಲ್ಲಿ ವಿಶೇಷ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಕ್ಯಾಂಪ್ಗೆ ವಿಶೇಷ ಮಕ್ಕಳನ್ನು ಕರೆತರಲು ಪ್ರಯಾಣ ಭತ್ಯೆ, ಊಟೋಪಚಾರ, ತಜ್ಞರ ತಪಾಸಣೆ, ಔಷಧ ನೀಡಿಕೆ ಎಲ್ಲವೂ ಉಚಿತ. ಇಲ್ಲಿ ವಿಶೇಷ ಮಕ್ಕಳ ಆರೋಗ್ಯಕ್ಕಲ್ಲ, ಊನಕ್ಕೆ ಚಿಕಿತ್ಸೆ ನೀಡುವುದು ಗಮನಾರ್ಹ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

