ದಕ್ಷಿಣ ಕನ್ನಡ

ಸ್ವಸಹಾಯ ಗುಂಪಿಗೆ ಕಡಿಮೆ ಬಡ್ಡಿದರ ಸಾಲ: ಆಸ್ಕರ್

Published On :

ಮಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಸ್ವಸಹಾಯ ಗುಂಪಿನ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಇಲ್ಲಿನ ಲೊಯಲಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ ಅವಿಭಜಿತ ಜಿಲ್ಲೆಯ ಸಹಕಾರಿಗಳಿಂದ ಹಾಗೂ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ವತಿಯಿಂದ, ನೂತನವಾಗಿ ಆಯ್ಕೆಗೊಂಡ ಶಾಸಕರು ಹಾಗೂ ಸಚಿವರನ್ನು ಅಭಿನಂದಿಸುವ 'ಅಭಿನಂದನಾ ಹಾಗೂ ಚಿಂತನಾ ಸಮಾವೇಶ' ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ರಾಜ್ಯ ಸರ್ಕಾರ ರು. 4,200 ಕೋಟಿ ಬಡವರ ಸಾಲ ಮನ್ನಾ ಮಾಡಿದೆ. ಬಡವರಿಗೆ ಕೆ.ಜಿ.ಗೆ ರು. 1 ರಂತೆ ಅಕ್ಕಿ ನೀಡುವ ಮೂಲಕ ರು. 4 ಸಾವಿರ ಕೋಟಿ ಹೊರೆ ಭರಿಸುತ್ತಿದೆ ಎಂದು ಹೇಳಿದರು.
ಹಿಂದೆ ಗುಟ್ಕಾ ಕಂಪನಿ ಲಾಬಿ: ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಗುಟ್ಕಾ ನಿಷೇಧಿಸುವಂತೆ 3 ವರ್ಷ ಹಿಂದೆಯೇ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ 23 ರಾಜ್ಯಗಳು ಗುಟ್ಕಾ ನಿಷೇಧಿಸಿವೆ. ಆದರೆ ಕರ್ನಾಟಕದಲ್ಲಿ ಹಿಂದಿನ ಸರ್ಕಾರ ಗುಟ್ಕಾ ಕಂಪನಿ ಲಾಬಿಗೆ ಮಣಿದು ಗುಟ್ಕಾ ನಿಷೇಧಕ್ಕೆ ಮುಂದಾಗಿಲ್ಲ. ಈಗಿನ ಸರ್ಕಾರ ಗುಟ್ಕಾ ನಿಷೇಧದ ದಿಟ್ಟತನ ತೋರಿದ್ದು, ಗುಟ್ಕಾ ನಿಷೇಧದಿಂದ ಅಡಕೆ ಧಾರಣೆಯಲ್ಲಿ ಏರುಪೇರಾಗಿಲ್ಲ. ಅಡಕೆ ಬೆಳೆಗಾರರಿಗೆ ತೊಂದರೆಯಾದರೆ ಸರ್ಕಾರ ಕೂಡಲೇ ಸ್ಪಂದಿಸುವುದು ಎಂದರು.
ರಾಜ್ಯ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್.ಪಾಟೀಲ್ ಮಾತನಾಡಿ, ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಜನ್ಮನೀಡಿದ ಜಿಲ್ಲೆ ಇದು. ಶಿಕ್ಷಣ, ಹೊಟೇಲ್ ಹಾಗೂ ಸಹಕಾರಿ ರಂಗದಲ್ಲಿ ಈ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಸಹಕಾರಿ ಕ್ಷೇತ್ರಕ್ಕೆ ರಾಜೇಂದ್ರ ಕುಮಾರ್ ಕೊಡುಗೆ ಅನನ್ಯ ಎಂದರು.
ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಅಭಿವೃದ್ಧಿಯಲ್ಲಿ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಅವಿಭಜಿತ ಜಿಲ್ಲೆಯೂ ಮುಂಚೂಣಿಯಲ್ಲಿದೆ . ಮೊಳಹಳ್ಳಿ ಸದಾಶಿವ ರಾಯರ ಸಹಕಾರಿ ತತ್ವದ ಕನಸು ಉತ್ತಮ ರೀತಿಯಲ್ಲಿ ನನಸಾಗುತ್ತಿದೆ ಎಂದರು.
ಮಹಿಳಾಭ್ಯುದಯ: ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ಸಹಕಾರಿ ತತ್ವ ಪರಿಣಾಮಕಾರಿ ಕೆಲಸ ಮಾಡುತ್ತಿದೆ. ತಾನು ಎರಡನೇ ಬಾರಿ ಸಚಿವನಾಗಿದ್ದು ಸಮಾಜಕ್ಕೆ ಅಗೌರವ ಉಂಟುಮಾಡುವ ಕೆಲಸ ಮಾಡಿಲ್ಲ. ರಾಜೇಂದ್ರ ಕುಮಾರ್ ಸ್ವಸಹಾಯ ಸಂಘ ಸ್ಥಾಪಿಸಿ ಮಹಿಳೆಯರ ಅಭ್ಯುದಯಕ್ಕೆ ಮುಂದಾಗಿದ್ದಾರೆ ಎಂದರು.
ಖಾತೆಗೆ ನೇರ ವರ್ಗಾಯಿಸಿ: ಪ್ರಾಸ್ತಾವಿಕ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸ್ವಸಹಾಯ ಸಂಘಗಳಿಗೆ ಶೇ.2 ಬಡ್ಡಿ ದರದಲ್ಲಿ ಸಾಲ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ಕೃಷಿ ಯಂತ್ರ ಖರೀದಿಗೆ ಕೃಷಿ ಮಾರುಕಟ್ಟೆ ಸಮಿತಿ ನೈಜ ದರಕ್ಕಿಂತ ಹೆಚ್ಚುವರಿ ದರ ನಮೂದಿಸಿ ಅದರಲ್ಲಿ ಶೇ.50 ಮೊತ್ತ ಸಬ್ಸಿಡಿ ನೀಡುತ್ತಿದೆ. ಇದರ ಬದಲು ಕಡಿಮೆ ದರದಲ್ಲಿ ಯಂತ್ರ ಖರೀದಿಸಿ ಸಬ್ಸಿಡಿ ಮೊತ್ತವನ್ನು ನೇರ ಗ್ರಾಹಕರ ಖಾತೆಗೆ ಜಮೆ ಮಾಡಬೇಕು. ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿಲ್ಲ. ಒಂದು ವೇಳೆ ತೊಂದರೆಯಾದರೆ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು. ತೆಂಗಿನಕಾಯಿ ಬೆಲೆ ರು. 4ಕ್ಕೆ ಕುಸಿದಿದ್ದು, ಸರ್ಕಾರ ಮಾರುಕಟ್ಟೆ ದರ ನಿಗದಿಪಡಿಸಿ ಮಾಸ್ ಅಥವಾ ಕ್ಯಾಂಪ್ಕೋ ಖರೀದಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ನವೋದಯ ಸ್ವಸಹಾಯ ಸಂಘ ಸದಸ್ಯ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ರು. 24 ಲಕ್ಷ ನಿಗದಿಪಡಿಸಲಾಗಿದೆ ಎಂದರು.
ಸಚಿವರಿಗೆ, ಶಾಸಕರಿಗೆ ಸನ್ಮಾನ: ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ.ಖಾದರ್, ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಗೋಪಾಲ ಭಂಡಾರಿ, ಜೆ.ಆರ್.ಲೋಬೋ, ಪ್ರಮೋದ್ ಮಧ್ವರಾಜ್, ಬಿ.ಎ.ಮೊಯ್ದಿನ್ ಬಾವಾರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಸದಾಶಿವ ಉಳ್ಳಾಲ್, ರಾಜಾರಾಮ ಭಟ್, ಉದ್ಯಮಿ ರೋಹನ್ ಮೊಂತೆರೊ, ಮಹಾನಗರ ಪಾಲಿಕೆ ಸದಸ್ಯ ವಿನಯರಾಜ್, ಕಾಂಗ್ರೆಸ್ ಮುಖಂಡ ಗಫೂರ್ ಇದ್ದರು.

ರಾಜೇಂದ್ರ ಕುಮಾರ್‌ಗೆ ಗೌರವ ಡಾಕ್ಟರೇಟ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್‌ಗೆ ಸಹಕಾರಿ ರಂಗದ ಗಣನೀಯ ಸಾಧನೆಗಾಗಿ ಕೊಲಂಬೋ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಿದೆ. ಜುಲೈನಲ್ಲಿ ಮಲೇಷ್ಯಾದಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಸಮಾವೇಶದಲ್ಲಿ ಪ್ರಕಟಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.