ದಕ್ಷಿಣ ಕನ್ನಡ

ಮೀನು ತ್ಯಾಜ್ಯದಿಂದ ಮೌಲ್ಯವರ್ಧಿತ ಪ್ರೊಟೀನ್

Published On :

ಮಂಗಳೂರು: ಮೀನು ತಾಜ್ಯದಿಂದಲೂ ಮೌಲ್ಯವರ್ಧಿತ ಉತ್ಪನ್ನ ತಯಾರಿಸಲು ಸಾಧ್ಯವಿದೆ ಎಂಬುದನ್ನು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಸಂಸ್ಕರಣಾ ತಾಂತ್ರಿಕ ವಿಭಾಗ ಸಂಶೋಧಿಸಿದೆ.
 'ಬಯೋ ಆ್ಯಕ್ಟೀವ್ ಪೆಪ್ಟೈಡ್‌' ಹೆಸರಿನ ಈ ಜೈವಿಕ ಕಿಣ್ವ ರಕ್ತ ದೊತ್ತಡ ನಿವಾರಣೆಗೆ ಉಪಯೋಗಿ ಎಂಬುದು ಶ್ರುತಪಟ್ಟಿದೆ. ಈ ಪ್ರೊಟೀನ್ ಪುಡಿಯನ್ನು ಹಾಕಿದರೆ ಎಣ್ಣೆ ಪದಾರ್ಥ ಕೆಡದಂತೆ ಕಾಪಾಡಬಹುದು. ಇದಲ್ಲದೆ ಡಯಾಬಿಟಿಕ್, ಕ್ಯಾನ್ಸರ್ ನಿವಾರಣೆಗೆ ಪರಿಣಾಮಕಾರಿಯಾಗಿ ಉಪಯೋಗಿಸಲು ಸಾಧ್ಯವೇ ಎಂಬ ಬಗ್ಗೆ ಸಂಶೋಧನೆ ಮುಂದುವರಿಯುತ್ತಿದೆ.
 ಮೀನುಗಾರಿಕಾ ಕಾಲೇಜಿನ ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ನೆರವಿನಲ್ಲಿ ಈ ಸಂಶೋಧನೆಯನ್ನು ಕೈಗೊಂಡಿದ್ದು, ಇಂಗ್ಲೆಂಡ್ ವಿಶ್ವವಿದ್ಯಾಲಯದ ಪ್ರೊ.ನಝಲ್ ಹೊನ್‌ವೆಲ್ ಕೂಡ ಸಂಶೋಧನೆಯಲ್ಲಿ ಕೈಜೋಡಿಸಿದ್ದಾರೆ. ತಾಂತ್ರಿಕ ವಿಭಾಗ ಮುಖ್ಯಸ್ಥ ಪ್ರೊ.ಶ್ಯಾಮಸುಂದರ್ ಮಾರ್ಗದರ್ಶನದಲ್ಲಿ ಈ ಪ್ರೊಟೀನ್ ಅಭಿವೃದ್ಧಿಪಡಿಸಲಾಗಿದೆ.
3 ಮಿ.ಮೆ.ಟನ್ ಮೀನು ತ್ಯಾಜ್ಯ: ದೇಶದಲ್ಲಿ ವಾರ್ಷಿಕ ಒಟ್ಟು 9 ಮಿಲಿಯನ್ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3 ಮಿಲಿಯನ್ ಮೆಟ್ರಿಕ್ ಟನ್ ಸಮುದ್ರ ಮೀನು ಹಾಗೂ 6 ಮಿಲಿಯನ್ ಮೆಟ್ರಿಕ್ ಟನ್ ಜಲ ಕೃಷಿ ಮೀನು ಸಿಗುತ್ತಿದೆ. ಈ ಮೀನಿನ ಸಂಸ್ಕರಣೆ ವೇಳೆ ಸುಮಾರು 2 ರಿಂದ 3 ಮಿಲಿಯನ್ ಮೆಟ್ರಿಕ್ ಟನ್ ಮೀನು ತ್ಯಾಜ್ಯ ಸಿಗುತ್ತದೆ. ಈಗ ಈ ತ್ಯಾಜ್ಯವನ್ನು ಮೀನಿನ ಎಣ್ಣೆ ತಯಾರಿ ಕಾರ್ಖಾನೆಗಳಿಗೆ, ಪಶು ಆಹಾರಗಳಿಗೆ ಬೆರೆಸುತ್ತಾರೆ.
ಪ್ರೊಟೀನ್ ಅಭಿವೃದ್ಧಿ ಹೇಗೆ?: ಸಂಸ್ಕರಿತ ಮೀನಿನ ಎಲುಬು ಇತರೆ ವಸ್ತುಗಳು ನಿರುಪಯುಕ್ತ ಎಂದು ಎಸೆಯುತ್ತಾರೆ. ಇದರ ಬದಲು ಮೌಲ್ಯವರ್ಧಿತ ಉತ್ಪನ್ನವಾಗಿ ಉಪಯೋಗಿಸಲು ತಾಂತ್ರಿಕ ವಿಭಾಗ 2012 ಮಾರ್ಚ್‌ನಲ್ಲಿ ಸಂಶೋಧನೆ ಕೈಗೊಂಡಿತ್ತು.
100 ಕಿಲೋ ಮೀನಿನಲ್ಲಿ ಶೇ.30ರಿಂದ 50ರ ವರೆಗೆ ತ್ಯಾಜ್ಯ ಸಿಗುತ್ತದೆ. ಅದನ್ನು ಪುಡಿ ಮಾಡಿ, ಅದಕ್ಕೆ ಪಪ್ಪಾಯಿ, ಅಂಜೂರ ಹಾಗೂ ಪೈನಾಪಲ್ ಅಂಶವನ್ನು ಬೆರೆಸುತ್ತಾರೆ. ನಂತರ ಒಣಗಿಸಿ ಪೌಡರ್ ಆಗಿ ಪರಿವರ್ತಿಸಲಾಗುತ್ತದೆ. ಸದ್ಯಕ್ಕೆ ತಲಾ 10 ಗ್ರಾಂ ಪ್ಯಾಕೆಟ್ ತಯಾರಿಸಲಾಗಿದ್ದು, ಒಟ್ಟು 20 ಕೇಜಿ ಪ್ರೊಟೀನ್ ಉತ್ಪಾದಿಸಲಾಗಿದೆ. ಇದು ರಕ್ತದೊತ್ತಡಕ್ಕೆ ಬಹಳ ಉಪಯುಕ್ತ ಎಂದು ಸಾಬೀತಾಗಿದೆ ಎನ್ನುತ್ತಾರೆ ವಿಭಾಗ ಮುಖ್ಯಸ್ಥ ಪ್ರೊ.ಶ್ಯಾಮಸುಂದರ್.  ಈ ಪ್ರೊಟೀನ್‌ನ ವಿವಿಧ ಬಳಕೆ ದೃಢಪಟ್ಟ ಬಳಿಕ ಇದನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವ ದಿಶೆಯಲ್ಲಿ ಕೆಎಫ್‌ಡಿಸಿ ಜತೆ ಮಾತುಕತೆ ನಡೆಸುತ್ತೇವೆ. ಇದರ ಉತ್ಪಾದನೆ ಮತ್ತು ಮಾರುಕಟ್ಟೆ ಜವಾಬ್ದಾರಿ ಕೆಎಫ್‌ಡಿಸಿಗೆ. ನಾವು ಏನಿದ್ದರೂ ಸಂಶೋಧನೆ ಮಾತ್ರ ಮಾಡುತ್ತೇವೆ ಎನ್ನುತ್ತಾರೆ ಪ್ರೊ.ಶ್ಯಾಮಸುಂದರ್.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.