ಕನಕದಾಸರ ಕುರಿತ ಲೇಖನ ಕಳುಹಿಸಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕನಕದಾಸ ಸಂಶೋಧನ ಕೇಂದ್ರ ಕನಕದಾಸರ ಬದುಕು, ಬರಹಗಳಿಗೆ ಸಂಬಂಧಿಸಿದ ಲೇಖನಗಳನ್ನು ಸಂಪಾದನೆ ಸಮಗ್ರಗೊಳಿಸುವ ನಿಟ್ಟಿನಲ್ಲಿ 'ಕನಕದಾಸ ಅಧ್ಯಯನ: ಸಮಗ್ರ ಸಂಪುಟ' ಎಂಬ ಯೋಜನೆ ಹಮ್ಮಿಕೊಂಡಿದೆ. ಇದಕ್ಕಾಗಿ ಕೇಂದ್ರ ಈಗಾಗಲೇ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಲಭ್ಯವಿರುವ ಸಂಶೋಧನ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಕೆಲಸ ಆರಂಭಿಸಿದೆ. ಕನಕದಾಸರ ಬದುಕಿಗೆ ಸಂಬಂಧಪಟ್ಟ ಲೇಖನ ಹಾಗೂ ವಾಗ್ವಾದವನ್ನು ಒಳಗೊಂಡ 1108 ಪುಟಗಳ 'ನೀ ಮಾಯೆಯೊಳಗೆ ನಿನ್ನೊಳು ಮಾಯೆಯೊ'ವುಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ. ಕನಕದಾಸರ ಬದುಕು, ಬರಹಗಳಿಗೆ ಮತ್ತು ಅವರ ಸಮಕಾಲೀನ ಸಂಗತಿಗಳಿಗೆ ಸಂಬಂಧಿಸಿದಂತೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಈವರೆಗೆ ಪ್ರಕಟಗೊಂಡಿರುವ ತಮ್ಮ ಲೇಖನಗಳನ್ನು ಮತ್ತು ಮಾಹಿತಿಗಳನ್ನು: ಸಂಯೋಜಕರು ಕನಕದಾಸ ಸಂಶೋಧನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ - ಈ ವಿಳಾಸಕ್ಕೆ ಕಳಿಸುವಂತೆ ಪ್ರಕಟಣೆ ತಿಳಿಸಿದೆ.
'ಆಧಾರ್ ಕಡ್ಡಾಯ' ವಿರೋಧಿಸಿ ಧರಣಿ
ಉಪ್ಪಿನಂಗಡಿ: ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವುದನ್ನು ವಿರೋಧಿಸಿ ಕಡಬ ನಾಡ ಕಚೇರಿ ಎದುರು ಪುತ್ತೂರು ತಾಲೂಕು ಬೀಡಿ ಮತ್ತು ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಡಬ ಸಂತೆಕಟ್ಟೆ ಬಳಿಯಿರುವ ಸಂಘದ ಕಚೇರಿಯಿಂದ ಮೆರವಣಿಗೆ ಪ್ರಾರಂಭವಾಗಿ ಪೇಟೆಯ ಮೂಲಕ ನಾಡ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಪಿ. ಸಂಜೀವ ಮಾತನಾಡಿ, ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ಆರಂಭದಲ್ಲಿ ಮಂಗಳೂರಿನ ಕೇಂದ್ರದಲ್ಲಿದ್ದು, ಬಳಿಕ ತಾಲೂಕು ಕೇಂದ್ರಕ್ಕೆ ವಿಸ್ತರಿಸಿ ಇತ್ತೀಚೆಗೆ ಕೆಲವು ಕಡೆ ಹೋಬಳಿ ಕೇಂದ್ರಕ್ಕೆ ವಿಸ್ತರಿಸಿರುವುದು ಸ್ವಾಗತಾರ್ಹ. ಆದರೆ ಇದುವರೆಗೆ ಬೆರೆಳೆಣಿಕೆ ಮಂದಿಯಷ್ಟೇ ಇದರ ಸದುಪಯೋಗ ಪಡೆದಿದ್ದು, ಹೆಚ್ಚಿನವರಿಗೆ ಆಧಾರ್ ಕಾರ್ಡ್ ಇನ್ನೂ ಸಿಕ್ಕಿಲ್ಲ. ಆದರೆ ಬೀಡಿ ಕಾರ್ಮಿಕರ ಕ್ಷೇಮನಿಧಿ ಇಲಾಖೆ ಫೆ.18ರಂದು ಸುತ್ತೋಲೆ ಹೊರಡಿಸಿ, ಬೀಡಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ನೋಂದಣಿಯಾಗಿರಬೇಕು. ಇಲ್ಲದಿದ್ದರೆ ಅರ್ಜಿ ಸಲ್ಲಿಸುವಂತಿಲ್ಲ ಎಂದಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದರು. ಬಳಿಕ ಕಡಬ ವಿಶೇಷ ತಹಸೀಲ್ದಾರ್ ಬಿ.ಸಿ. ಶಿವಪ್ಪ ಮೂಲಕ ಮನವಿಯನ್ನು ಸರ್ಕಾರಕ್ಕೆ ನೀಡಲಾಯಿತು.
ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಗೆ ವಿರೋಧ
ಬೆಂಗಳೂರು: ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಸುಗ್ರಾಮ ವಿರೋಧಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ರೇಣುಕಾ, ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎರಡು ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳನ್ನು ನಿರಂತರವಾಗಿ ನಡೆಸಲು ವಿಫಲರಾದ ಅಧ್ಯಕ್ಷರು ಹಾಗೂ ಸದಸ್ಯರನ್ನು ಅನರ್ಹಗೊಳಿಸಲಾಗುತ್ತದೆ. ಇದು ಪ್ರಜಾಪ್ರಭುತ್ವದ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಕಾಯ್ದೆ ತಿದ್ದುಪಡಿ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದಂತಾಗುತ್ತದೆ. ಇದು ಪಂಚಾಯತಿಯ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತಿದ್ದುಪಡಿ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿದ್ದ ತೋಳ ಬಲಿ
ಕೊಪ್ಪಳ: ತಾಲೂಕಿನ ಹಿರೇಸಿಂದೋಗಿ ಹೊರವಲಯದಲ್ಲಿ ತೋಳವೊಂದು 5 ಜನ, 8 ಆಕಳು ಹಾಗೂ ಐದು ಎಮ್ಮೆಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗುರುವಾರ ತೋಳವನ್ನು ಬೆನ್ನಟ್ಟಿ, ಹೊಡೆದು ಸಾಯಿಸಿದ್ದಾರೆ. ಗಾಯಗೊಂಡವರನ್ನು ಹಿರೇಸಿಂದೋಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಮಂಜುನಾಥ, ದೇವರಾಜ ಮೂಲಿಮನಿ, ಮಂಜುನಾಥ ಬಿಸರಳ್ಳಿ ಎಂಬುವವರಿಗೆ ಮಾತ್ರ ತೀವ್ರ ಗಾಯವಾಗಿದೆ.
ಏಕಾಏಕಿ ದಾಳಿ: ಗ್ರಾಮದ ಹೊರವಲಯದಲ್ಲಿ ಹೊಲಕ್ಕೆ ಹೋಗುತ್ತಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿದ ತೋಳ ಊರೊಳಗೆ ನುಗ್ಗಿದೆ. ಅಲ್ಲಿ ದನಕರುಗಳಿಗೂ ಮನಬಂದಂತೆ ಕಡಿದಿದ್ದು, ಇದರಿಂದ 8 ಆಕಳು ಹಾಗೂ 5 ಎಮ್ಮೆಗಳು ಗಾಯಗೊಂಡಿವೆ. ಇಷ್ಟಾದರೂ ತೋಳ ಊರ ಆಚೆ ಹೋಗುವ ಬದಲು ಗ್ರಾಮದಲ್ಲಿಯೇ ಓಡಾಡುತ್ತಾ ಅವರಿವರ ಮನೆ ಮೇಲೆ ದಾಳಿ ಮಾಡಲು ಮುಂದಾಯಿತು. ತಕ್ಷಣ ಎಚ್ಚೆತ್ತ ಗ್ರಾಮಸ್ಥರು ತೋಳವನ್ನು ಬೆನ್ನಟ್ಟಿ ಹೊಡೆದು ಸಾಯಿಸಿದರು. ಬಳಿಕ ತೋಳವನ್ನು ಊರಾಚೆ ಸಾಗಿಸಲಾಯಿತು. ಈಗಾಗಲೇ ನಾಲ್ಕಾರು ದಿನಗಳಲ್ಲಿ ಅಲ್ಲಲ್ಲಿ ತೋಳ ದಾಳಿ ಮಾಡುವ ಯತ್ನ ನಡೆಸಿದೆ. ಕೆಲ ಕಡೆ ಹೊಲಕ್ಕೆ ಹೋದವರಿಗೆ ಹೆದರಿಸಿ ತೋಳ ಅವರನ್ನು ಬೆನ್ನಟ್ಟಿತ್ತು. ಇದರಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದರು.
ಪ್ರವಾಹ ನಿಧಿಗೆ ರಾಮಾ ಜೋಯಿಸ್ ಕೊಡುಗೆ
ಬೆಂಗಳೂರು: ಉತ್ತರಾಖಂಡ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ನಿವೃತ್ತ ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ ಎಂ.ರಾಮಾ ಜೋಯಿಸ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರು. 50 ಲಕ್ಷ ಬಿಡುಗಡೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

