ದಕ್ಷಿಣ ಕನ್ನಡ

ರೈಲು- ಮಿನಿಬಸ್ ಡಿಕ್ಕಿ: ಮಹಿಳೆ ಸಾವು

Published On :

ಮಂಗಳೂರು: ಮಂಗಳೂರು-ಹಾಸನ ರೇಲ್ವೆ ಮಾರ್ಗದ ಅಡ್ಯಾರಿನ ಮಾನವರಹಿತ ರೇಲ್ವೆ ಕ್ರಾಸಿಂಗ್‌ನಲ್ಲಿ ಗೂಡ್ಸ್ ರೈಲು-ಮಿನಿ ಬಸ್ ಡಿಕ್ಕಿ ಸಂಭವಿಸಿ, ಮಿನಿ ಬಸ್‌ನಲ್ಲಿದ್ದ ಮಹಿಳೆ ಮೃತಪಟ್ಟು 7 ಮಂದಿ ಗಾಯಗೊಂಡ ಘಟನೆ ಭಾನುವಾರ ಅಪರಾಹ್ನ ಸಂಭವಿಸಿದೆ.
ತೊಕ್ಕೊಟ್ಟಿನ ಜುಲೇಖ (55) ಮೃತರು. ಉಳ್ಳಾಲಬೈಲು ನಿವಾಸಿಗಳಾದ ತಾಹಿರಾಬಾನು(40), ವಾಸೀಂ(25), ಮಮ್ತಾಜ್(30), ನಸೀಮಾಭಾನು(25), ಮೆಹಬೂಬ್(5) ಹಾಗೂ ಒಂದೂವರೆ ವರ್ಷದ ನೂರ್‌ಸಿದಾ ಸಾಧಾರಣ ಗಾಯಗೊಂಡವರು. ಚಾಲಕ ಕೂಡ ಗಾಯಗೊಂಡಿದ್ದು, ಇವರನ್ನೆಲ್ಲ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಭಾನುವಾರ ಮಧ್ಯಾಹ್ನ ಸಂಬಂಧಿಕರ ಸೀಮಂತಕ್ಕೆ ತೊಕ್ಕೊಟ್ಟಿನ ಬಂಧುಗಳನ್ನು ಅಡ್ಯಾರುಪದವಿಗೆ ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ರೇಲ್ವೆ ಹಳಿ ದಾಟುತ್ತಿತ್ತು. ಅಷ್ಟರಲ್ಲಿ ಬಂದ ಗೂಡ್ಸ್ ರೈಲು ಮಿನಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸದಲ್ಲಿ ಮಿನಿ ಬಸ್ ಪಲ್ಟಿಯಾಗಿತ್ತು. ಘಟನೆಯಲ್ಲಿ ಜುಲೇಖ ತಲೆಗೆ ಏಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವಿಗೀಡಾದರು. ತೊಕ್ಕೊಟ್ಟಿನ ರಂಜಾನ್ ಮನೆಯಿಂದ ಸಂಬಂಧಿ ಅಡ್ಯಾರುಪದವಿನ ಸಲೀಂ ಮನೆಗೆ ಭಾನುವಾರ ಮಿನಿ ಬಸ್‌ನಲ್ಲಿ 7ಮಂದಿ ಸೀಮಂತಕ್ಕೆ ಹೊರಟಿದ್ದರು.
ಎಚ್ಚರಿಕೆ ನಿರ್ಲಕ್ಷಿಸಿದ ಚಾಲಕ: ಅಡ್ಯಾರಿನ ಕೆಮ್ಮಂಜೂರು ರೇಲ್ವೆ ಕ್ರಾಸಿಂಗ್ ಬರುತ್ತಿದ್ದಂತೆ ಅಲ್ಲಿ ಶ್ರಮದಾನ ಮಾಡುತ್ತಿದ್ದ ಸ್ಥಳೀಯರು ಗೂಡ್ಸ್ ರೈಲು ಬರುತ್ತಿರುವ ಸದ್ದು ಕೇಳುತ್ತಿದೆ. ದಾಟುವಾಗ ಜಾಗ್ರತೆ, ಸರಿಯಾಗಿ ಗಮನಿಸಿ ದಾಟಿ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಇದನ್ನು ನಿರ್ಲಕ್ಷಿಸಿದ ಮಿನಿ ಬಸ್ ಚಾಲಕ, ರೈಲು ಬರುವುದರೊಳಗೆ ಹಳಿ ದಾಟುವ ವಿಶ್ವಾಸದಲ್ಲಿ ಬಸ್ ಚಲಾಯಿಸಿದ್ದ. ಆದರೆ ಅರ್ಧದಲ್ಲೇ ರೈಲು ಬಂದು ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿ ರೈಲು ತುಸು ದೂರ ನಿಂತಿತ್ತು. ಘಟನಾ ಸ್ಥಳ ನೈಋತ್ಯ ರೇಲ್ವೆ ವಲಯಕ್ಕೆ ಸೇರಿದ್ದು, ರೇಲ್ವೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಂಗಳೂರು ತಹಸೀಲ್ದಾರ್ ಶಿವಪ್ಪ ಲಮಾಣಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.