ಪಾದಚಾರಿ ಮೇಲ್ಸೇತುವೆ ಆಗಿಲ್ಲ, ಪಾರ್ಕಿಂಗೂ ಇಲ್ಲ
ಮಂಗಳೂರು: ಪಾದಚಾರಿಗಳಿಗೆ ಅನುಕೂಲವಾಗಲು ಪಾದಚಾರಿ ಮೇಲ್ಸೇತುವೆ ರಚನೆ.... ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್, ಬಸ್ಬೇ, ಸುಸಜ್ಜಿತ ಹೂವಿನ ಮಾರುಕಟ್ಟೆ, ಮೀನು ಮಾರುಕಟ್ಟೆ, ಖಾಸಗಿ ಬಸ್ ನಿಲುಗದಡೆಗೆ ವ್ಯವಸ್ಥಿತ ಬಸ್ ನಿಲ್ದಾಣ....
ಇದು 2007ರಲ್ಲಿ ಬಿಜೆಪಿ ಘೋಷಿಸಿದ ಮಹಾನಗರ ಪಾಲಿಕೆ ಚುನಾವಣೆಯ ಪ್ರಣಾಳಿಕೆಯ ಮುಖ್ಯಾಂಶ. ಇದರಲ್ಲಿ ಈಡೇರಿದ್ದು ಎಷ್ಟು ಎಂದರೆ, ಉತ್ತರ- ಕೇವಲ ಒಂದು. ಅದು ಕೂಡ ನೀರು ಪೂರೈಕೆ ಯೋಜನೆ. ಸಮರ್ಪಕ ಅನುಷ್ಠಾನವಾಗದಿದ್ದರೂ, ಜಾರಿಯಂತೂ ಆಗಿದೆ.
ಇದನ್ನು ಹೊರತುಪಡಿಸಿದರೆ, ಕೋಟಿಗಟ್ಟಲೆ ಮೊತ್ತ ಸುರಿದು ಪಾಲಿಕೆ ವ್ಯಾಪ್ತಿಯನ್ನು ವಸ್ತುಶಃ ಕಾಂಕ್ರಿಟ್ ಕಾಡು ಆಗಿ ಪರಿವರ್ತಿಸಿದ್ದು ಬಿಟ್ಟರೆ, ತನ್ನದೇ ಪ್ರಣಾಳಿಕೆಯನ್ನು ಸ್ವಲ್ಪ ಓದಿ ನೋಡುವ ಗೋಜಿಗೂ ಪಾಲಿಕೆಯ ಬಿಜೆಪಿ ಜನಪ್ರತಿನಿಧಿಗಳು ಹೋಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳನ್ನು, ಮುಖಂಡರನ್ನು ಪ್ರಶ್ನಿಸಿದರೆ, ಎಲ್ಲವೂ ಪ್ರಗತಿಯಲ್ಲಿದೆ ಎಂದಷ್ಟೇ ಹೇಳುತ್ತಾರೆ.
ಪ್ರಣಾಳಿಕೆ ತೋರಿಸುವ ಸ್ವರ್ಗ-ನರಕ!: ಪ್ರಣಾಳಿಕೆಯ ಸ್ವರ್ಗ ತೋರಿಸಿ 20 ವರ್ಷ ಬಳಿಕ ಪಾಲಿಕೆಯ ಆಡಳಿತ ಹಿಡಿದ ಬಿಜೆಪಿ ನಂತರ ಅವುಗಳ ಅನುಷ್ಠಾನದತ್ತ ತಿರುಗಿಯೂ ನೋಡಿಲ್ಲ. ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಪ್ರಕಾರ, 'ಎಲ್ಲ ರಾಜಕೀಯ ಪಕ್ಷಗಳೂ ಹೀಗೆಯೇ. ಅಧಿಕಾರಕ್ಕೆ ಬರಲು ರಂಗು ರಂಗಿನ ಆಶ್ವಾಸನೆ ಕೊಡುತ್ತಾರೆ. ಅಧಿಕಾರಕ್ಕೆ ಬರುತ್ತಲೇ ಮರೆತು ಬಿಡುತ್ತಾರೆ. ಹಣ ಮಾಡುತ್ತಾ ಸ್ವರ್ಗ ಕಾಣುತ್ತಾರೆ, ಪ್ರಣಾಳಿಕೆ ಕನಸಲ್ಲಿ ಬಡವ ನರಕ ಅನುಭವಿಸುತ್ತಾನೆ' ಎನ್ನುತ್ತಾರೆ.
ಬಿಜೆಪಿ ಹೇಳಿದ್ದೇನು?: ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಪ್ರಮುಖ ಬೇಕಾದ್ದು ಪಾದಚಾರಿ ಮೇಲ್ಸೇತುವೆ. ನಗರದ ಹಂಪನಕಟ್ಟೆ ಸಿಗ್ನಲ್, ಅಂಬೇಡ್ಕರ್ ವೃತ್ತ, ಕ್ಲಾಕ್ ಟವರ್, ಸುರತ್ಕಲ್ಗಳಲ್ಲಿ ಪಾದಚಾರಿ ಮೇಲ್ಸೇತುವೆಯ ಪ್ರಸ್ತಾಪ ಮಾಡಿತ್ತು ಬಿಜೆಪಿ. ಇನ್ನು 12 ಕಡೆಗಳಲ್ಲಿ ಪಾರ್ಕಿಂಗ್, ಕಾಂಕ್ರಿಟ್ ಬಸ್ಬೇ, ಬಸ್ ನಿಲ್ದಾಣ, ಕಾರ್ಸ್ಟ್ರೀಟ್ನಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ, ತಳಭಾಗದಲ್ಲಿ ವಾಹನ ಪಾರ್ಕಿಂಗ್, ಸುಸಜ್ಜಿತ ಮೀನು ಮಾರುಕಟ್ಟೆ, ಪ್ರಯಾಣಿಕರಿಗೆ ಹೊಸ ಬಸ್ ನಿಲ್ದಾಣ, ರಂಗಮಂದಿರ, ಸ್ವಿಮ್ಮಿಂಗ್ ಪೂಲ್, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ, ನೀರು ಪೂರೈಕೆ, ಸಾರ್ವಜನಿಕ ಶೌಚಾಲಯ, ವಾರ್ಡ್ ಕಮಿಟಿ ರಚನೆ ಹೀಗೆ 25 ವಿಧದ ಭರವಸೆ ನೀಡಿತ್ತು.
ಇದರಲ್ಲಿ ನೀರು ಪೂರೈಕೆ, ನೆಹರೂ ಮೈದಾನ ಬಳಿ ಸಾರ್ವಜನಿಕ ಶೌಚಾಲಯ ಮಾಡಿದ್ದು ಬಿಟ್ಟರೆ ಪ್ರಣಾಳಿಕೆಯಲ್ಲಿದ್ದ ಯಾವುದೇ ಭರವಸೆಯನ್ನು ಪೂರ್ಣ ಈಡೇರಿಸಲು ಸಾಧ್ಯವಾಗಿಲ್ಲ. ಆ ಬಗ್ಗೆ ಕನಿಷ್ಠ ಪ್ರಯತ್ನ ಕೂಡ ಪಾಲಿಕೆ ಪ್ರತಿನಿಧಿಗಳಿಂದ ಆಗಿಲ್ಲ. ಶಿವಭಾಗ್ನಲ್ಲಿ ವಾರ್ಡ್ ಕಮಿಟಿಯನ್ನು ಸಾರ್ವಜನಿಕರೇ ಮಾಡಿಕೊಂಡಿದ್ದಾರೆ. ಪಾಲಿಕೆ ಆಡಳಿತ ಎಲ್ಲಿಯೂ ಮಾಡಿಲ್ಲ. ಈಗ ರಾಜ್ಯದಲ್ಲಿ ಸರ್ಕಾರ ಇರುವುದು ಬಿಜೆಪಿಯದ್ದು, ಹಾಗಾಗಿ ಕೋಟಿಗಟ್ಟಲೆ ಮೊತ್ತ ಪಾಲಿಕೆಗೆ ಬಂದಿದೆ. ಆದರೆ ಜನರ ಅವಶ್ಯಕತೆಗಳನ್ನು ನೀಗಿಸುವಲ್ಲಿ ಮೊತ್ತ ಸದ್ಭಳಕೆಯಾಗಿಲ್ಲ ಎನ್ನುವುದು ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ನೋವಿನ ನುಡಿ.
ಹಿರಿಯ ಸದಸ್ಯರ ಮೌನ: ಹಿಂದಿನ ಪ್ರಣಾಳಿಕೆ ಯಾಕೆ ಈಡೇರಿಸಿಲ್ಲ ಎಂದರೆ, ಪಾಲಿಕೆ ಹಿರಿಯ ಸದಸ್ಯರೇ ಉತ್ತರಿಸಲು ತಡವರಿಸುತ್ತಾರೆ. ನೀರು ಪೂರೈಕೆ, ಕಾಂಕ್ರಿಟ್ ರಸ್ತೆಯತ್ತ ಬೊಟ್ಟು ಮಾಡುತ್ತಾರೆ.
ಪ್ರಣಾಳಿಕೆಯ ಪ್ರಮುಖ ಅಂಶಗಳನ್ನೇ ಮುಟ್ಟಿಲ್ಲ ಯಾಕೆ ಎಂದರೆ, ಗೊತ್ತಿಲ್ಲ, ಪಕ್ಷ ಮುಖಂಡರಲ್ಲಿ ಕೇಳಬೇಕು ಎನ್ನುತ್ತಾರೆ. ಈ ಬಾರಿಯ ಪ್ರಾಣಾಳಿಕೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದು ಬಿಟ್ಟರೆ ಬೇರಾವುದೇ ಹೊಸ ವಿಷಯ ಇಲ್ಲ.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

