ದಕ್ಷಿಣ ಕನ್ನಡ

ಅಂತೂ ಬಂತು ಅಂಗವಿಕಲರ ಪಿಂಚಣಿ ಕಂತು

Published On :

ಕ.ಪ್ರ. ವಾರ್ತೆ ಮಂಗಳೂರು ಮಾ. 3
ಅಂಗವಿಕಲರ ಆಯುಕ್ತರ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವಿನ ಜಟಾಪಟಿ ತಾರ್ಕಿಕ ಅಂತ್ಯ ಕಂಡಿದೆ. ಇದರಿಂದ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಪಿಂಚಣಿಗೆ ಕಾಯುತ್ತಿದ್ದ ಅರ್ಹ 1,48,568 ಬಿಪಿಎಲ್ ಕುಟುಂಬದ ಅಂಗವಿಕಲರು ಮಾರ್ಚ್ ಪ್ರಥಮ ವಾರದಿಂದ ಮಾಸಿಕ ಪಿಂಚಣಿಪಡೆಯಲಿದ್ದಾರೆ.
 2012 ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಆದೇಶಿಸಿ, ಅಂಗವಿಕಲರ ಮಾಸಿಕ ಪಿಂಚಣಿ ಪಡೆಯುವ ಬೋಗಸ್ ಫಲಾನುಭವಿಗಳನ್ನು ಪತ್ತೆಮಾಡಿ, ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ಕಂದಾಯ ಅಧಿಕಾರಿಗಳಿಗೆ ತಿಳಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಕಂದಾಯ ಅಧಿಕಾರಿಗಳು, ಬೋಗಸ್ ಮಾತ್ರವಲ್ಲ, ಅರ್ಹ ಪಿಂಚಣಿದಾರರ ಹೆಸರನ್ನೂ ಕಿತ್ತುಹಾಕಿ ರಾಜ್ಯದಲ್ಲಿ 1.40 ಲಕ್ಷ ಬೋಗಸ್ ಅಂಗವಿಕಲರ ಪಿಂಚಣಿದಾರರಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನಂತರ ಅರ್ಹರೂ ಒಂದು ವರ್ಷದಿಂದ ಪಿಂಚಣಿ ಇಲ್ಲದೆ ಜೀವನ ಸಾಗಿಸುವಂತಾಗಿತ್ತು.
ಅಂಗವಿಕಲರ ಇಲಾಖೆ ಜಟಾಪಟಿ: ಕಂದಾಯ ಅಧಿಕಾರಿಗಳ ಈ ಬೇಜವಾಬ್ದಾರಿ ಕ್ರಮದಿಂದ ಸಿಟ್ಟಿಗೆದ್ದ ಅಂಗವಿಕಲ ಆಯುಕ್ತರ ಇಲಾಖೆ, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪಟ್ಟಿ ಪುನರ್ ಪರಿಶೀಲನೆ ನಡೆಸುವಂತೆ ಕೋರಿತ್ತು. ಇದಕ್ಕೆ ಮುಖ್ಯಕಾರ್ಯದರ್ಶಿಯಿಂದ ಉತ್ತರ ಬಾರದಾಗ, ಅರ್ಹ ಅಂಗವಿಕಲ ಫಲಾನುಭವಿಗಳಿಗೆ ಮಾಸಾಶನ ರದ್ದುಗೊಳಿಸಿದ ಕ್ರಮದ ವಿರುದ್ಧ ಇಲಾಖೆ ಅಂಗವಿಕಲರ ಕಾಯ್ದೆ 1995 ಕಲಂ(62)ರನ್ವಯ ಎಲ್ಲ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. 2012 ಡಿಸೆಂಬರ್ ಒಳಗೆ ಅರ್ಹ ಅಂಗವಿಕಲರಿಗೆ ಪಿಂಚಣಿ ನೀಡುವಂತೆ ಆದೇಶಿಸಿತ್ತು. ಇದಕ್ಕೂ ಸ್ಪಂದಿಸದೆ ಇದ್ದಾಗ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿತ್ತು. ಅಷ್ಟರಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಅರ್ಹ ಅಂಗವಿಕಲರಿಗೆ ಮಾಸಾಶನ ಮರು ಮಂಜೂರು ಮಾಡುವ ಕುರಿತಂತೆ ಪಟ್ಟಿಯನ್ನು ಆಯುಕ್ತರಿಗೆ ರವಾನಿಸಿತ್ತು.
6 ತಾಲೂಕಿನಿಂದ ಬಾಕಿ: ರಾಜ್ಯದ 30 ಜಿಲ್ಲೆಗಳ ಪೈಕಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸೇರಿದಂತೆ 6 ತಾಲೂಕುಗಳಿಂದ ವಿವರ ಬರಲು ಬಾಕಿ ಇದೆ. ಉಳಿದೆಲ್ಲ ತಾಲೂಕುಗಳಿಂದ ಅಂಗವಿಕಲರ ಪಟ್ಟಿ ಸಿದ್ಧಗೊಂಡಿದ್ದು, ಮಾರ್ಚ್‌ನಿಂದಲೇ ಪಿಂಚಣಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಾನುಭವಿಗಳು?
ಬಾಗಲಕೋಟೆ-1564,  ಬೆಂಗಳೂರು-17200, ಬೆಂಗಳೂರು ಗ್ರಾಮಾಂತರ-2352, ಬೆಳಗಾವಿ-3406, ಬಳ್ಳಾರಿ-2377, ಬೀದರ್-5426, ಬಿಜಾಪುರ-8524, ಚಾಮರಾಜನಗರ-2501, ಚಿಕ್ಕಮಗಳೂರು-1100, ಚಿಕ್ಕಬಳ್ಳಾಪುರ-2722, ಚಿತ್ರದುರ್ಗ-4962, ದಕ್ಷಿಣ ಕನ್ನಡ-601, ದಾವಣಗೆರೆ-5885, ಧಾರವಾಡ-5357, ಗದಗ-12751, ಗುಲ್ಬರ್ಗ-20070, ಹಾಸನ-7765, ಹಾವೇರಿ-3343, ಕೊಡಗು-677, ಕೋಲಾರ-2652, ಕೊಪ್ಪಳ-2457, ಮಂಡ್ಯ-4393, ಮೈಸೂರು-2705, ರಾಯಚೂರು-3524, ರಾಮನಗರ-5309, ಶಿವಮೊಗ್ಗ-2132, ತುಮಕೂರು-9232, ಉಡುಪಿ-774, ಉತ್ತರ ಕನ್ನಡ-1881, ಯಾದಗಿರಿ-4926. 
- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.