ದಕ್ಷಿಣ ಕನ್ನಡ

ಗ್ರಾಮಸಭೆಯಲ್ಲಿ ಚಪ್ಪಲಿ ಸಮರ ಸನ್ನಾಹ!

Published On :

ಸುಳ್ಯ: ಜಿ.ಪಂ. ಅನುದಾನದಲ್ಲಿ ಮಂಜೂರಾದ ಬೋರ್‌ವೆಲ್ ಅಳವಡಿಕೆ ಕುರಿತಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷ ನಡುವೆ ಮಾತಿನ ಚಕಮಕಿ ನಡೆದು, ಚಪ್ಪಲಿ ಸಮರಕ್ಕೆ ಮುಂದಾದ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮ ಸಭೆಯಲ್ಲಿ ನಡೆದಿದೆ.
 ಜಿ.ಪಂ.ಅನುದಾನದಲ್ಲಿ ದೇವಚಳ್ಳ ಗ್ರಾಮಕ್ಕೆ ಸಂಬಂಧಿಸಿದ ಕೊಳವೆ ಬಾವಿಯನ್ನು ಎಲಿಮಲೆಯ ಹಲಸಿನಡ್ಕ ಎಂಬಲ್ಲಿ ರಸ್ತೆ ಬದಿ ಹಾಕಲಾಗಿದೆ. ನಿಮ್ಮ ಅನುಭವದ ಕೊರತೆಯಿಂದ ಈ ರೀತಿ ಆಗುತ್ತಿದೆ ಎಂದು ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ ಹೇಳಿದಾಗ, ಕೊಳವೆ ಬಾವಿ ಸ್ಥಳ ನಿರ್ಧರಿಸುವುದು ನಾನಲ್ಲ.  ನೀರು ನೋಡುವ ಜಿಯೋಲಾಜಿಸ್ಟ್ ಮತ್ತು ಎಂಜಿನಿಯರ್ ಎಂದು ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಹೇಳಿದರು.
 'ನೀವು ಜಿ.ಪಂ. ಸದಸ್ಯರಾಗಿದ್ದು ಈ ವಿಚಾರ ಗೊತ್ತಿಲ್ಲವೆಂದರೆ ಸದಸ್ಯರಾಗಿದ್ದು ಏನು ಪ್ರಯೋಜನ?' ಎಂದು ಈಶ್ವರಪ್ಪ ಹೇಳಿದಾಗ, ನಿಮಗೆ ಪ್ರಾಯದಲ್ಲಿ ಅನುಭವಗಳಿದ್ದರೂ, ನನಗೆ ಈ ವಿಚಾರದಲ್ಲಿ ನಿಮಗಿಂತ ಜಾಸ್ತಿ ಅನುಭವ ಇದೆ' ಎಂದು ಉತ್ತರಿಸಿದರು.
ಚಪ್ಪಲಿ ಇದೆ!: ಈ ವೇಳೆ ಈಶ್ವರಪ್ಪ ಗೌಡ, ಸರಸ್ವತಿ ಕಾಮತ್‌ರನ್ನು ತೀವ್ರ ತರಾಟೆಗೆತ್ತಿಕೊಂಡು 'ನನ್ನ ಪ್ರಾಯಕ್ಕೆ ನಿಮ್ಮನ್ನು ಕರೆದಿಲ್ಲ, ನನಗೆ ಪ್ರಾಯವಾದರೂ ನನ್ನ ಮನೆಯಲ್ಲಿ ಹೆಂಡತಿ ಇದ್ದಾಳೆ' ಎಂದು ಹೇಳಿದಾಗ, ಸರಸ್ವತಿ ಕಾಮತ್ ವ್ಯಗ್ರರಾದರು.
 'ನನ್ನಲ್ಲಿ ಚಪ್ಪಲಿ ಇದೆ. ಈ ರೀತಿ ಮಾತನಾಡುವುದು ಸರಿಯಲ್ಲ' ಎಂದು  ಹೇಳಿ ತಮ್ಮ ಕಾಲಿನ ಚಪ್ಪಲಿಯನ್ನು ನಿಂತಲ್ಲಿ ಎದುರು ದೂಡಿದರು.
ಆ ವೇಳೆ ಈಶ್ವರಪ್ಪ ಗೌಡರು, ನನ್ನಲ್ಲೂ ಚಪ್ಪಲಿ ಇದೆ ಎಂದು ಹೇಳಿ ಶಾಲೆಯ ಜಗಲಿಯಲ್ಲಿಟ್ಟ ಚಪ್ಪಲಿ ಹಾಕಿಕೊಂಡು ಸಭೆಗೆ ಬಂದರು. ನಂತರವೂ ಮಾತಿನ ಚಕಮಕಿ ನಡೆದಾಗ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು ಸರಸ್ವತಿ ಕಾಮತ್‌ರನ್ನು ಸಮಾಧಾನಿಸಿದರೆ, ಈಶ್ವರಪ್ಪ ಗೌಡರನ್ನು ಹರೀಶ್ ಕಂಜಿಪಿಲಿ ಮತ್ತಿತರರು ಸಮಾಧಾನಿಸಿದರು.
 ನಂತರವೂ ಬೋರ್‌ವೆಲ್ ಬಗ್ಗೆ ಚರ್ಚೆ ನಡೆಯಿತು. ರಸ್ತೆ ಬದಿಯಲ್ಲಿ ಹಾಕಿರುವುದು ಸರಿಯಲ್ಲ. ಮುಂದೆ ಅಗಲೀಕರಣ, ರಸ್ತೆ ಅಭಿವೃದ್ಧಿ ಸಂದರ್ಭ ಸಮಸ್ಯೆ ಉಂಟಾಗುತ್ತದೆ ಎಂದು ಹರೀಶ್ ಕಂಜಿಪಿಲಿ ಹೇಳಿದಾಗ, ಈ ಬಗ್ಗೆ ನಾನು ಏನೂ ಮಾಡುವಂತಿಲ್ಲ. ಸಮಸ್ಯೆಯನ್ನು ಚರ್ಚಿಸೋಣ ಎಂದು ಸರಸ್ವತಿ ಕಾಮತ್ ಹೇಳಿದರು.
 ಗ್ರಾ.ಪಂ. ಅಧ್ಯಕ್ಷೆ ರಾಧಾ ಕಿಲಾರುಕಜೆ ಅಧ್ಯಕ್ಷತೆ ವಹಿಸಿದರು. ನೋಡಲ್ ಅಧಿಕಾರಿಯಾಗಿ ಡಾ. ರಾಜಣ್ಣ ಮತ್ತಿತರರು ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.