ಖಾತರಿ ಖಾತ್ರಿಗೆ ತಾಂತ್ರಿಕ ಅಧಿಕಾರಿಗಳೇ ಇಲ್ಲ!
ಮಂಗಳೂರು: 'ಖಾಲಿ ಕೈಗಳಿಗೆ ಉದ್ಯೋಗ' ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತರಿ ಯೋಜನೆಗೆ ರಾಜ್ಯದಿಂದಲೇ ಸರಿಯಾದ ಸಹಕಾರ ಸಿಗುತ್ತಿಲ್ಲ. ಈ ಯೋಜನೆಯಲ್ಲಿ ಉದ್ಯೋಗ ಮಾಡಿರುವುದನ್ನು ಖಾತರಿ ಪಡಿಸಬೇಕಾದ ತಾಂತ್ರಿಕ ಅಧಿಕಾರಿಗಳ ನೇಮಕಾತಿಯೇ ಪೂರ್ತಿಯಾಗಿಲ್ಲ. ಬೇರೆ ಇಲಾಖೆಗಳಲ್ಲಿರುವ ತಾಂತ್ರಿಕ ಅಧಿಕಾರಿಗಳು ಕಾರ್ಯ ಒತ್ತಡದಿಂದ ಇತ್ತ ತಲೆಹಾಕುತ್ತಿಲ್ಲ. ತಾಂತ್ರಿಕ ಅಧಿಕಾರಿಯ ಅನುಮತಿ ವಿನಃ ಕೆಲಸದ ಬಿಲ್ಲು ಪಾವತಿಯಾಗುತ್ತಿಲ್ಲ. ಇದರಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಾರ್ಚ್ ಬಂದರೂ ಖಾತರಿ ಕೆಲಸ ಗುರಿ ತಲುಪುತ್ತಿಲ್ಲ.
ಖಾತರಿ ಯೋಜನೆಗೆ ಪ್ರತ್ಯೇಕವಾಗಿ ಹೊರಗುತ್ತಿಗೆಯಲ್ಲಿ ತಾಂತ್ರಿಕ ಅಧಿಕಾರಿಗಳನ್ನು ನೇಮಿಸುವಂತೆ ಕೇಂದ್ರ ಸರ್ಕಾರ 2009ರಲ್ಲೇ ಆದೇಶ ನೀಡಿತ್ತು. ಆಗ ಉದ್ಯೋಗ ಬಯಸುವ ಕೈಗಳ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ತಾಂತ್ರಿಕ ಅನುಮೋದನೆ ಕೆಲಸವನ್ನು ತೋಟಗಾರಿಕೆ, ಜಲಾನಯನ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾಡುತ್ತಿದ್ದರು. ಕ್ರಮೇಣ ಖಾತರಿ ಕೆಲಸ ವಿಸ್ತಾರವಾದರೂ ಕೆಲಸ ಖಾತ್ರಿ ಪಡಿಸುವುದನ್ನು ಈ ಎಂಜಿನಿಯರ್ಗಳೇ ಮಾಡುತ್ತಿದ್ದರು. ಈಗ ಅವರಿಗೂ ಇಲಾಖಾ ಕೆಲಸದ ಒತ್ತಡ ಹೆಚ್ಚಾದ್ದರಿಂದ ಖಾತರಿಯತ್ತ ಗಮನ ಹರಿಸಲು ಆಗುತ್ತಿಲ್ಲ.
ಇದರಿಂದ ಖಾತರಿ ಕೆಲಸಕ್ಕೆ ತಾಂತ್ರಿಕ ಅಧಿಕಾರಿಗಳ ಅನುಮೋದನೆ ಸಿಗದೆ ಕೂಲಿ ಮೊತ್ತ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದು ಖಾತರಿ ಅನುಷ್ಠಾನ ವಿಳಂಬಕ್ಕೆ ಕಾರಣವಾಗಿದೆ.
ನಿರ್ದೇಶಕರ ಆತಂಕ: ಖಾತರಿ ಯೋಜನೆಯ ರಾಜ್ಯ ನಿರ್ದೇಶಕರಾಗಿದ್ದ ಪ್ರಸನ್ನ ಕುಮಾರ್ ಎಲ್ಲ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ (14-7-2010 ಗ್ರಾಅಪ 70 ಉಖಾಯೋ) ಬರೆದಿದ್ದರು. ಆ ಪತ್ರದಲ್ಲಿ, ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಂತೆ ಎಲ್ಲಿಯೂ ಹೊರಗುತ್ತಿಗೆಯಲ್ಲಿ ತಾಂತ್ರಿಕ ಅಧಿಕಾರಿಗಳ ನೇಮಕಾತಿ ನಡೆಸಿಲ್ಲ. ಇದರಿಂದ ಖಾತರಿ ಕಾಮಗಾರಿಯ ಅಳತೆ, ಕೂಲಿ ಪಾವತಿ ವಿಳಂಬವಾಗುತ್ತಿದೆ. ಕಳಪೆ ಕಾಮಗಾರಿಯಲ್ಲದೆ ಪ್ರಗತಿಯೂ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಪ್ರತಿ 6 ಸಾವಿರ ಕುಟುಂಬ ಇರುವಲ್ಲಿ ಇಬ್ಬರು ತಾಂತ್ರಿಕ ಅಧಿಕಾರಿಯನ್ನು ನೇಮಿಸಬೇಕು ಎಂದಿದೆ. ಕೊನೆಗೂ ಬೆಂಗಳೂರಿನಲ್ಲಿ ನಡೆದ ನರೇಗ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದು, ಜಿಲ್ಲಾ ಪಂಚಾಯ್ತಿಯ ಶೇ.6 ಆಡಳಿತ ವೆಚ್ಚದಲ್ಲಿ ಹೊರಗುತ್ತಿಗೆಯಲ್ಲಿ ತಾಂತ್ರಿಕ ಅಧಿಕಾರಿಗಳ ನೇಮಕಾತಿಗೆ ಒಪ್ಪಿಗೆ ಸೂಚಿಸಿತು.
ಪೂರ್ತಿಯಾಗದ ನೇಮಕಾತಿ: ಅದರಂತೆ ಆಯಾ ಜಿಲ್ಲಾ ಪಂಚಾಯ್ತಿಯಲ್ಲಿ ನೇಮಕಾತಿ ಪ್ರಕ್ರಿಯೆ ಶುರುವಾದಾಗ, ನೇರವಾಗಿ ಸರ್ಕಾರವೇ ತಾನೇ ನೇಮಕಾತಿ ನಡೆಸುವುದಾಗಿ ಹೇಳಿತ್ತು. ಈಗ ಬೀದರ್, ಉತ್ತರ ಕನ್ನಡ, ಬಳ್ಳಾರಿ ಹೊರತುಪಡಿಸಿ ಬೇರೆ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ಪೂರ್ಣಗೊಳಿಸಿರುವುದಾಗಿ ಖಾತರಿ ಅಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಯಾವ ಜಿಲ್ಲೆಯಲ್ಲೂ ನೇಮಕಾತಿ ಪೂರ್ತಿಯಾಗಿಲ್ಲ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

