ದಕ್ಷಿಣ ಕನ್ನಡ

ಅತ್ಯಾಚಾರಿಗೆ ಮತ ಬೇಡ, ಮಹಿಳಾ ದೌರ್ಜನ್ಯಕ್ಕೆ ತಡೆ

Published On :

ಕ.ಪ್ರ.ವಾರ್ತೆ  ಮಂಗಳೂರು  ಮಾ.8
'ಚುನಾವಣೆಗೆ ಅತ್ಯಾಚಾರಿಗಳು ಸ್ಪರ್ಧಿಸಿದರೆ ಮತ ಹಾಕಬೇಡಿ. ಉಳಿದವರು ಮತ ಕೇಳಲು ಬಂದರೆ ಮಹಿಳೆಯರ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು ಎಂದು ಪ್ರಶ್ನಿಸಿ. ಅವರ ರಾಜಕೀಯ ನಿಲವನ್ನು ಸ್ಪಷ್ಟವಾಗಿ ಅರಿತುಕೊಳ್ಳಿ. ಮಹಿಳೆಯಾಭ್ಯುದಯಕ್ಕೆ ಯಾವುದೇ ಯೋಜನೆ ಹೊಂದಿರದವರನ್ನು ಸರಾಸಗಟ ತಿರಸ್ಕರಿಸಿ'.
ಇದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಹಿಳಾ ಸಂಘಗಳ ಜಾಲದ ಆಶ್ರಯದಲ್ಲಿ ಹಿಂಸಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಶುಕ್ರವಾರ ನಡೆದ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶದಲ್ಲಿ ಕೇಳಿಬಂದ ಆಗ್ರಹವಿದು. ವಿಶಾಖ ಗೈಡ್ಲೈನ್ಸ್ಗೆ (ಮಹಿಳಾ ದೌರ್ಜನ್ಯ ತಡೆಗೆ ರಾಜಸ್ಥಾರ ಸರ್ಕಾರ ಜಾರಿಗೆ ತಂದ ನಿಯಮ) ನಿಯಮಾವಳಿ ರಚನೆಗೆ ಕಾರಣಕರ್ತರಾದ ರಾಜಸ್ಥಾನದ ಭಾಂವ್ರಿದೇವಿ ಸಮಾವೇಶಕ್ಕೆ ಚಾಲನೆ ನೀಡುತ್ತಾ, ಒಕ್ಕೊರಲ ಕೂಗಿಗೆ ಸಭಾಂಗಣದಲ್ಲಿದ್ದ ಅಷ್ಟೂ ಮಹಿಳಾ ಬಳಗ ಕೈ ಎತ್ತಿ ಬೆಂಬಲ ಸೂಚಿಸಿತು.
ಅತ್ಯಾಚಾರಿಗೆ ಗಲ್ಲು ಬೇಡ!: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಬೇಡ, ಪುರುಷತ್ವ ಹರಣವೂ ಬೇಡ ಎನ್ನುವ ಮೂಲಕ ಮಹಿಳಾವಾದಿಗಳು ಅಚ್ಚರಿ ಮೂಡಿಸಿದರು. ಆದರೆ ಹೆಣ್ಮಕ್ಕಳ ಮೇಲೆ ಕೈ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಯೊಂದೂ ಹೆಣ್ಣಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಮಹಿಳೆಯರ ತಂಟೆಗೆ ಬಂದರೆ ಒಕ್ಕೊರಲಿಂದ ವಿರೋಧಿಸುವುದಾಗಿ ಸಮಾವೇಶದಲ್ಲಿ ಸಾರಲಾಯಿತು.
ರಾಜ್ಯದಲ್ಲಿ ಮಹಿಳಾ ಸೇನೆ: ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆ, ಅತ್ಯಾಚಾರ, ನೈತಿಕ ಪೊಲೀಸ್ಗಿರಿ ತಡೆಗೆ 'ಗುಲಾಬಿ ಸೇನೆ' ಮಾದರಿಯಲ್ಲಿ ಮಹಿಳಾ ಸೇನೆ ಸಂಘಟಿಸಲು ಸಮಾವೇಶದಲ್ಲಿ ಸಂಕಲ್ಪ ತೊಡಲಾಯಿತು. ಕೋಮುಭಾವನೆ ಕೆರಳಿಸುವ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿತಲ್ಲದೆ, ಮಹಿಳಾ ಸೇನೆ ಪ್ರೀತಿ, ಸಹನೆಯಿಂದ ಹೋರಾಟ ನಡೆಸಲಿದೆ ಎಂದು ಸಮಾವೇಶದಲ್ಲಿ ಘೋಷಿಸಲಾಯಿತು.
ಮಹಿಳೆಯರಿಗೆ ರಕ್ಷಣೆ ಇಲ್ಲ: ಈ ಸಮಾವೇಶಕ್ಕೆ ಯಾವೊಬ್ಬ ಜನಪ್ರತಿನಿಧಿಯೂ ಬರಲಿಲ್ಲ. ಇದು ಮಹಿಳೆಯರ ರಕ್ಷಣೆ ಬಗ್ಗೆ ಜನಪ್ರತಿನಿಧಿಗಳಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಅಂಥವರಿಗೆ ಯಾಕೆ ಮತ ನೀಡಬೇಕು ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ವೈದೇಹಿ ಪ್ರಶ್ನಿಸಿದರು.
ಪುರುಷರ ಭರವಸೆಯನ್ನು ಮಹಿಳೆಯರು ಬೇಗನೆ ನಂಬುತ್ತಾರೆ. ಹಾಗೆಯೇ ಬೇಗ ಮೋಸ ಹೋಗುತ್ತಾರೆ. ಮಹಿಳೆಯರ ಲಜ್ಜೆ, ಸರಳತೆ, ದಾಕ್ಷಿಣ್ಯವನ್ನು ಅಪಾರ್ಥ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ತೊಂದರೆಯಾದಾಗ ಮಹಿಳೆಯರು ಬೀದಿಗಿಳಿದು ಹೋರಾಡಬೇಕೆಂದರು. ಮಣಿಪುರದಲ್ಲಿ ಸೈನಿಕರ ದೌರ್ಜನ್ಯ ವಿರುದ್ಧ ಹೋರಾಟ ನಡೆಸುತ್ತಿರುವ ಇಶಾ ಶರ್ಮರನ್ನು ಬೆಂಬಲಿಸಿ ಮಹಿಳಾ ಸಂಘಟನೆಗಳು ರಾಷ್ಟ್ರಪತಿಗೆ ಪತ್ರ ಚಳುವಳಿ ನಡೆಸಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.