ಗಡುವು ಕಳೆದರೂ ಮನ್ನಾ ಆಗಿಲ್ಲ ಅಡಕೆ ಸಾಲ
-ಆತ್ಮಭೂಷಣ್
ಮಂಗಳೂರು: ಅಡಕೆ ಬೆಳೆಯುವ ರೈತರ ಎಲ್ಲ ಬೆಳೆ ಸಾಲ ಮನ್ನಾ ಮಾಡುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿ ಮೂರು ತಿಂಗಳು ಕಳೆದಿದೆ. ಈ ಗಡುವಿನ ಬಗ್ಗೆ ತುಟಿ ಪಿಟಿಕ್ ಎನ್ನದ ಕೇಂದ್ರ ಹಣಕಾಸು ಇಲಾಖೆ ವಿರುದ್ಧ ಇದೀಗ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಯುತ್ತಿದೆ.
ಕೇಂದ್ರ ಸರ್ಕಾರವೇ ನೇಮಿಸಿದ ತೋಟಗಾರಿಕಾ ಇಲಾಖಾ ಆಯುಕ್ತ ಗೋರಖ್ಸಿಂಗ್ ಸಮಿತಿ ರೈತರ ಎಲ್ಲ ಸಾಲ ಮನ್ನಾ ಸೇರಿದಂತೆ ಎಂಟು ಶಿಫಾರಸ್ಸುಗಳನ್ನು ಮಾಡಿತ್ತು. ರೈತರ ಆತ್ಮಹತ್ಯೆ ತಡೆಯಲು ಈ ಶಿಫಾರಸ್ಸುಗಳನ್ನು ತ್ವರಿತ ಅನುಷ್ಠಾನಗೊಳಿಸುವಂತೆ ಸೂಚಿಸಿತ್ತು.
ಇದನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯದ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ 2011 ಮೇ 5ರಂದು ಹೈಕೋರ್ಟ್ನಲ್ಲಿ (ರಿಟ್ ನಂ.32043/2011) ರಿಟ್ ದಾಖಲಿಸಿತ್ತು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ 2012 ಸೆ.25ರಂದು ತೀರ್ಪು ನೀಡಿ, ಅಡಕೆ ಬೆಳೆಗಾರರ ಎಲ್ಲ ಸಾಲವನ್ನು ಇನ್ನು 3 ತಿಂಗಳೊಳಗೆ ಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಇಲಾಖೆಗೆ ಆದೇಶಿಸಿತ್ತು.
ಹೈಕೋರ್ಟ್ ತರಾಟೆ: ರೈತರು ಆತ್ಮಹತ್ಯೆ ಮಾಡುತ್ತಿರುವಾಗ ರೋಮ್ನಲ್ಲಿ ನೀರೋ 'ಪಿಟೀಲು ನುಡಿಸಿದಂತೆ' ಕೇಂದ್ರ ವರ್ತಿಸುತ್ತಿದೆ. ದೊಡ್ಡ ಕೈಗಾರಿಕೆಗಳು, ವಿಮಾನ ಕಂಪನಿಗಳಿಗೆ ಸಾಲ ಮನ್ನಾ ಮಾಡುವ ಸರ್ಕಾರಕ್ಕೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ತೀರ್ಪಿನಲ್ಲಿ ಕಟುವಾಗಿ ಪ್ರಶ್ನಿಸಿತ್ತು.
ಬೆಳೆಗಾರರನ್ನು ರಕ್ಷಿಸುವ ನಿಟ್ಟಿನಲ್ಲಿ ತಕ್ಷಣವೇ ಕೇಂದ್ರ ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಾಕೀತು ಮಾಡಿತ್ತು.
ಕೋರ್ಟ್ ತೀರ್ಪು ನೀಡಿ ಜನವರಿಗೆ 3 ತಿಂಗಳು ಕಳೆದಿದೆ. ಈಗ ಮಾರ್ಚ್ ಬಂದರೂ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಯಾವುದೇ ಮುಂದಡಿ ಇಡುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದ ಮತ್ತೆ ಹೈಕೋರ್ಟ್ ಆದೇಶ ಉಲ್ಲಂಘನೆ ಹಿನ್ನಲೆಯಲ್ಲಿ ಹಣಕಾಸು ಇಲಾಖಾ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಲು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಮುಂದಾಗಿದೆ.
ಮಾ.11ರಂದು ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಿದ್ದು, ಹಣಕಾಸು ಇಲಾಖಾ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡುವಂತೆ ಕೋರಲಾಗುವುದು ಎಂದು ಕಿಸಾನ್ ಖೇತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗಾ ಭಾನುವಾರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಐತಿಹಾಸಿಕ ತೀರ್ಪು: ರಾಜ್ಯದ ವಿವಿಧ ಭಾಗಗಳಲ್ಲಿ ಅಡಕೆ ಬೆಳೆಯುವ ಬೆಳೆಗಾರರಿಗೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪು ಐತಿಹಾಸಿಕವಾಗಿದ್ದು, ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಅಡಕೆ ಬೆಳೆಗಾರರ ಆತ್ಮಹತ್ಯೆ ತಡೆಗೆ, ರೈತರ ಸಂಕಷ್ಟ ತಿಳಿಯಲು 2009 ನವೆಂಬರ್ನಲ್ಲಿ ಕೇಂದ್ರ ನೇಮಿಸಿದ್ದ ಗೋರಖ್ಸಿಂಗ್ ಸಮಿತಿ 2010ರಲ್ಲಿ ವರದಿ ಸಲ್ಲಿಸಿತ್ತು. ವರದಿಯಲ್ಲಿ ಮುಖ್ಯವಾಗಿ ಅಡಕೆ ತೋಟಗಳಿಗೆ ತಗಲಿದ ಹಳದಿ ರೋಗ ಸೇರಿದಂತೆ ಇತರೆ ರೋಗಗಳ ಅಧ್ಯಯನ ನಡೆಸಿ ಪರಿಹಾರ ಕ್ರಮಗಳ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸು ಪೈಕಿ ಹಳದಿ ರೋಗ ಪೀಡಿತ ಅಡಕೆ ತೋಟಗಳಲ್ಲಿ ಪರ್ಯಾಯ ಬೆಳೆಗೆ ಪುನಶ್ಚೇತನ ಕಾರ್ಯಕ್ರಮಕ್ಕೆ ರು. 40 ಕೋಟಿ ಬಿಡುಗಡೆ, ರೈತರ ಬೆಳೆ ಸಾಲವನ್ನು 11 ವರ್ಷಕ್ಕೆ ದೀರ್ಘಾವಧಿ ಮುಂದಕ್ಕೆ ಹಾಕಲು ಕ್ರಮ ಕೈಗೊಂಡಿತು. ಆದರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಮಾತ್ರ ಕೇಂದ್ರ ಮೌನ ವಹಿಸಿತು.
ಸಾಲ ಮನ್ನಾ 880 ಕೋಟಿ: ಸರ್ಕಾರದ ಅಂಕಿಅಂಶ ಪ್ರಕಾರ, ಸುಮಾರು ರು. 880 ಕೋಟಿ ಸಾಲ ಮನ್ನಾ ಆಗಬೇಕಿದ್ದು, ಇದರಲ್ಲಿ ರು. 300 ಕೋಟಿ ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲ ಇದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಪ್ರದೇಶಗಳ 1.75 ಲಕ್ಷ ಕೃಷಿಕ ಕುಟುಂಬಕ್ಕೆ ಸಾಲ ಮನ್ನಾ ಪ್ರಯೋಜನ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

