ಆಂಟಿ ಆಸೆ: ಕಾರ್ಮಿಕಗೆ ಬಿತ್ತು ಗೂಸಾ
ಮಂಗಳೂರು: ಮೊಬೈಲ್ನಲ್ಲಿ ಪರಿಚಿತಳಾದ ವಿವಾಹಿತ ಮಹಿಳೆ ಬರುವಳೆಂದು ಕೆಎಸ್ಆರ್ಟಿಸಿಯಲ್ಲಿ ಆಸೆಯಿಂದ ಯುವಕ ಕಾಯುತ್ತಿದ್ದ. ಆದರೆ ಬಂದವರು ಬಜರಂಗದಳದ ಕಟ್ಟು ಮಸ್ತಾದ ಯುವಕರು. ಬಂದವರೇ ಮುಖ ಮೂತಿ ನೋಡದೆ ನಾಲ್ಕು ಬಾರಿಸಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ರಿಚಾರ್ಜ್ ಸೆಂಟರ್ ಬಳಿ ಸುಳಿದಾಡಿಕೊಂಡು ಮಹಿಳೆಯರ ಮೊಬೈಲ್ ಸಂಖ್ಯೆ ಹೇಗೊ ಗಳಿಸುತ್ತಿದ್ದ ಕೂಲಿ ಕಾರ್ಮಿಕ ಬಾಗಲಕೋಟೆ ಮೂಲದ ಬಸವರಾಜ ಮಹಿಳೆಯರಿಗೆ ಕರೆ ಮಾಡಿ ಸತಾಯಿಸುವುದನ್ನೇ ಚಟವಾಗಿ ಮಾಡಿಕೊಂಡಿದ್ದ. ಈ ಹಿಂದೆಯೂ ಅನೇಕ ಮಹಿಳೆಯರಿಗೆ ಅಶ್ಲೀಲ ಕರೆ ಮಾಡಿ, ಸಂಧಿಸುವಂತೆ ಬಲವಂತ ಮಾಡುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ, ಎಚ್ಚರಿಕೆಯನ್ನೂ ಪಡೆದಿದ್ದ. ಇತ್ತೀಚೆಗೆ ಕೊಂಚಾಡಿಯ ವಿವಾಹಿತೆಯೊಬ್ಬರ ನಂಬರ್ ಪಡೆದು ಸತಾಯಿಸುತ್ತಿದ್ದ. ಆಕೆ ಎಚ್ಚರಿಕೆ ನೀಡಿದ್ದರೂ ಕೊಳಕುಬುದ್ಧಿ ಬಿಟ್ಟಿರಲಿಲ್ಲ. ಮಹಿಳೆ ಕೊನೆಗೆ ಬಜರಂಗದಳದ ಮೊರೆ ಹೋದರು. ಅದರಂತೆ ಕಾರ್ಮಿಕನನ್ನು ಸಂಧಿಸುವ ಬಗ್ಗೆ ಮಹಿಳೆ ಸಮ್ಮತಿ ಸೂಚಿಸಿದಳು. ಏಕಾ ಏಕಿ ಪರಿವರ್ತನೆಯಿಂದ ಸಂಶಯಿತನಾದ ಕಾರ್ಮಿಕ ಭೇಟಿ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿದ್ದ. ಆದರೆ ಮಂಗಳವಾರ ಮಾತ್ರ ಕೆಎಸ್ಆರ್ಟಿಸಿ ಬಳಿ ಸಿಗಲು ಒಪ್ಪಿದ್ದ. ಆದರೆ ಆಸೆಯಿಂದ ಬಂದವನಿಗೆ ಸಿಕ್ಕಿದ್ದು ಗೂಸಾ!
ತೆಂಗಿನ ಗರಿ ವಿಚಾರ ಪ್ರಶ್ನಿಸಿದ ವೃದ್ಧರ ಕೈ ಮುರಿದ
ಮಂಗಳೂರು: ನೆರೆಮನೆ ತೆಂಗಿನ ಗರಿ ತಮ್ಮ ಮನೆಗೆ ಬೀಳುತ್ತಿದ್ದನ್ನು ಪ್ರಶ್ನಿಸಿದ ವೃದ್ಧರಿಗೆ ನೆರೆಮನೆ ಕೋಪಿಷ್ಟ ಕಬ್ಬಿಣ ರಾಡ್ನಿಂದ ಹಲ್ಲೆ ನಡೆಸಿ ಕೈ ಮುರಿದಿದ್ದಾನೆ. ಆಶೀರ್ವಾದ ಭಾರತಿ ನಗರ ಬಿಜೈ ನಿವಾಸಿ ಸದಾಶಿವ ಮಲ್ಯ (78) ಹಲ್ಲೆಗೊಳಗಾದವರು. ಬುಧವಾರ ಬೆಳಗ್ಗೆ 11ಕ್ಕೆ ನೆರೆಮನೆಯ ರಾಮಚಂದ್ರ ಶ್ರಿಯಾನ್ ಬಳಿ ತೆಂಗಿನಗರಿ ವಿಚಾರ ಪ್ರಶ್ನಿಸಿದಾಗ ಏಕಾಏಕಿ ಸಿಟ್ಟುಗೊಂಡು ರಾಡ್ನಿಂದ ಹಲ್ಲೆ ನಡೆಸಿದರು. ಪರಿಣಾಮ ಕೈ ಮೂಳೆ ಮೂರಿತದಿಂದ ಗಾಯಗೊಂಡಿರುವ ಸದಾಶಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಚಂದ್ರ ಯಾನೆ ಚಂದ್ರ ಶ್ರೀಯಾನ್ ವಿರುದ್ಧ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೊಸೈಟಿಗೆ ನುಗ್ಗಿ ಕಳವು
ಮಂಗಳೂರು: ಕಂಕನಾಡಿ ಕುಣಿಲ್ ಕಾಂಪ್ಲೆಕ್ಸ್ನ ಕಚ್ಚೂರು ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಕಿಟಕಿ ಸರಳು ತುಂಡರಿಸಿದ ಕಳ್ಳ, ರು. 6 ಸಾವಿರ ಮೌಲ್ಯದ ಸೊತ್ತ ಕಳವು ಮಾಡಿದ್ದಾನೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಾಸೋಹ ಅಕ್ಕಿ ಕಳವು ಮಾಡಿದ ಶಿಕ್ಷಕ
ಸುಳ್ಯ: ಆಲೆಟ್ಟಿ ಗ್ರಾಮದ ಬಡ್ಡಡ್ಕ ಶಾಲೆ ಶಿಕ್ಷಕ ಗೋಪಾಲಕೃಷ್ಣ ಅಕ್ಷರ ದಾಸೋಹದ 2 ಕ್ವಿಂಟಾಲ್ ಅಕ್ಕಿ ಕಳವು ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದು ಸ್ಥಳೀಯರು ಶಿಕ್ಷಣಾಧಿಕಾರಿ ಮತ್ತು ಅಕ್ಷರ ದಾಸೋಹ ಅಧಿಕಾರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಶಿಕ್ಷಕರ ಮನೆಗೆ ದಾಳಿ ನಡೆಸಿ 2 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡು ಶಾಲೆಗೆ ತಂದರು. ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕಿ ವಿರುದ್ಧ ಪೊಲೀಸ್ ದೂರು
ಸುಳ್ಯ: ಸುಳ್ಯ ಕಸಬಾ ಗ್ರಾಮದ ಬೂಡು ಬಳಿಯ ನಿವಾಸಿ, ಅಜ್ಜನಗದ್ದೆ ಶಾಲೆ ಶಿಕ್ಷಕಿಯೊಬ್ಬರು ಅಲ್ಲಿನ ಸ್ಥಳೀಯರಿಗೆ ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಠಾಣೆಗೆ ದೂರು ನೀಡಿದ್ದಾರೆ. ದೂರು ಬಂದ ಹಿನ್ನಲೆಯಲ್ಲಿ ಶಿಕ್ಷಕಿಯಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.
ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ; ದೂರು
ಸುಳ್ಯ: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಹಿನ್ನಲೆಯಲ್ಲಿ ಗೆದ್ದ ಅಭ್ಯರ್ಥಿ ಮನೆಗೆ ಊಟಕ್ಕೆ ಹೋಗುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರರಾದ ವಸಂತ್, ಉಮೇಶ್, ಸುಂದರ, ಬಿ.ಜೆ.ಪಿ. ಕಾರ್ಯಕರ್ತರಾದ ಅಶೋಕ್, ಶಿವಕುಮಾರ್ ಮತ್ತು ಅನಂತೇಶ್ ಎಂಬವರನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಯ ಠಾಣೆಗೆ ದೂರು ನೀಡಲಾಗಿದೆ.
ಸರ್ಕಾರಿ ಬಸ್- ಪಿಕಪ್ ಮುಖಾಮುಖಿ
ಸುಳ್ಯ: ಸರ್ಕಾರಿ ಬಸ್ ಮತ್ತು ಪಿಕಪ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ಬುಧವಾರ ಮಧ್ಯಾಹ್ನ ಪಂಜದಲ್ಲಿ ನಡೆದಿದೆ.
ಪಂಜ- ಕಡಬ ರಸ್ತೆ ಮಧ್ಯೆ ಪಾದೆ ಎಂಬಲ್ಲಿ ಈ ಘಟನೆ ಸಂಭವಿಸಿತು. ಸುಳ್ಯದಿಂದ ಕಡಬಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ಗೆ ಪೊಳಂಜ ಕಡೆಯಿಂದ ಪಂಜಕ್ಕೆ ಬರುತ್ತಿದ್ದ ಪಿಕಪ್ ಡಿಕ್ಕಿಯಾಯಿತು. ಈ ಅಪಘಾತದಿಂದಾಗಿ ಸುಮಾರು ಅರ್ಧ ಗಂಟೆ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಪಿಕಪ್ ಮಾಲೀಕರು ಸ್ಥಳಕ್ಕೆ ಬಂದ ಬಳಿಕ ಘಟನೆಯನ್ನು ಪಂಚಾಯತಿಕೆಯಲ್ಲಿ ಇತ್ಯರ್ಥಪಡಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

