ಹುಡುಗರಿಗಿಲ್ಲದ ಭಾಗ್ಯ ಹುಳಗಳಿಗೆ!
ಮಂಗಳೂರು: ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ, ಇಲಾಖೆಯಿಂದ ಬಂದಿದ್ದ ಹಾಸಿಗೆ ವಿದ್ಯಾರ್ಥಿಗಳಿಗೆ ವಿತರಿಸದೇ ಯಾರಿಗೂ ಇಲ್ಲದೇ ಬಾಕಿಯಾಗಿ ಚಿಂದಿ ಚೂರಾಗಿವೆ. ಮತ್ತೆ ಹೊಸ ಹಾಸಿಗೆ ಕೂಡ ಕಳೆದ ಐದು ವರ್ಷಗಳಿಂದ ಬಾರದೇ ಇರುವ ಪರಿಣಾಮ ಮಕ್ಕಳು ಜಮಖಾನಾ, ಚಾಪೆಯಲ್ಲೇ ಮಲಗುವಂಥ ಪರಿಸ್ಥಿತಿ ಬಡ ವಿದ್ಯಾರ್ಥಿಗಳದ್ದಾಗಿದೆ.
ಮಂಗಳೂರು ಹೊರ ವಲಯದ ಬಜ್ಪೆ ಬಾಲಕರ ವಸತಿ ನಿಲಯದ ಬಾಲಕರ ದುಃಸ್ಥಿತಿಯಿದು.
ಬಡಮಕ್ಕಳ ಭವಿಷ್ಯಕ್ಕಾಗಿ, ಉತ್ತಮ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ ಅನುಷ್ಠಾನದಲ್ಲಿನ ಎಡರು ತೊಡರುಗಳಿಂದ ಯೋಜನೆಗಳು ಕಾರ್ಯರೂಪಕ್ಕೆ ಬರದೆ ಸವಲತ್ತಿನಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳ ಸಾಲಿಗೆ ಬಜ್ಪೆಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯವೇ ಸಾಕ್ಷಿ. ಇಲ್ಲಿ ಇಲಾಖೆ ನೀಡಿದ ಹಾಸಿಗೆಗಳ ಗಂಟು ವಸತಿ ನಿಲಯದ ಮೂಲೆಯಲ್ಲಿ ರಾಶಿ ಬಿದ್ದಿದೆ, ಹುಳು ಹಿಡಿದು, ಹರಿದು ಹೋಗುತ್ತಿದೆ. ಮಕ್ಕಳಿಗಿಲ್ಲದ ಭಾಗ್ಯ ಹುಳುಗಳಿಗಾಗಿದೆ. ಹಾಸಿಗೆಯ ಬದಲು ಮಕ್ಕಳಿಗೆ ಮಲಗಲು ಚಾಪೆಗಳನ್ನು ನೀಡಲಾಗಿದೆ.
8ನೇ ತರಗತಿಯಿಂದ 10ನೇ ತರಗತಿಯವರೆಗಿನ ರಾಜ್ಯದ ವಿವಿಧ ಜಿಲ್ಲೆಯ ಸುಮಾರು 50 ಹಿಂದುಳಿದ ವರ್ಗ ಮಕ್ಕಳು ಈ ವಿದ್ಯಾರ್ಥಿ ನಿಲಯದಲ್ಲಿದ್ದಾರೆ.
ಇಲಾಖೆಯಿಂದ ನೀಡಿರುವ ಹಾಸಿಗೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗದೇ ಮೇಲಿನ ಹೊದಿಕೆ ಹರಿದು ಚಿಂದಿಯಾಗಿ, ಒಳಗಿನ ನಾರುಗಳು ಹೊರಬಂದಿದೆ. ಸುಮಾರು 100ಕ್ಕಿಂತಲೂ ಅಧಿಕ ಹಾಸಿಗೆಗಳು ಉಪಯೋಗಕ್ಕೆ ಬಾರದೆ ಮೂಲೆಗುಂಪಾಗಿವೆ.
'ಕೆಲವು ವರ್ಷಗಳ ಹಿಂದೆ ಆಶ್ರಮದಿಂದ ಕೊಡುತ್ತಿದ್ದ ಹಾಸಿಗೆ ಗಟ್ಟಿಯಾಗಿದ್ದು, ಮಲಗಲು ಕಷ್ಟವಾಗುತ್ತಿತ್ತು. ಮೈಕೈ ನೋವುಂಟಾಗುತ್ತಿತ್ತು. ಇದಕ್ಕೆ ನಾವು ನಿರಾಕರಿಸುತ್ತಿದ್ದು, ನಂತರ 5 ವರ್ಷದಿಂದ ಹಾಸಿಗೆಯನ್ನೇ ನೀಡಿಲ್ಲ' ಎನ್ನುತ್ತಾರೆ ವಿದ್ಯಾರ್ಥಿ ನಿಲಯದ ಮಕ್ಕಳು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅರುಣ್ ಫುಟಾರ್ಡೊ ಪ್ರಕಾರ, ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾನು ಇತ್ತೀಚೆಗಷ್ಟೇ ಆಗಮಿಸಿದ್ದೇನೆ. ಪಾಲಿಕೆ ಚುನಾವಣೆ ಕೆಲಸದಲ್ಲಿರುವುದರಿಂದ, ಚುನಾವಣೆ ಬಳಿಕ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿ ಜಾರಿಕೊಂಡರು.
ವಸತಿ ನಿಲಯದಲ್ಲಿರುವ ಹೆಚ್ಚಿನ ಮಕ್ಕಳು ಹಳ್ಳಿ ಪ್ರದೇಶದಿಂದ ಬಂದವರಾಗಿದ್ದಾರೆ. ವಸತಿ ನಿಲಯವನ್ನು ಇತ್ತೀಚೆಗೆ ನವೀಕರಿಸಲಾಗಿದ್ದು, ಉತ್ತಮ ಸೌಲಭ್ಯ ಒದಗಿಸಲಾಗಿದೆ.
ಶೀತ ಪ್ರದೇಶಕ್ಕೆ ನೀಡಲಾಗುವ ನಾರಿನ ಹಾಸಿಗೆಗಳನ್ನು ಬಿಸಿಲ ಬೇಗೆಯ ಕರಾವಳಿ ಪ್ರದೇಶಕ್ಕೆ ನೀಡಿರುವುದು ವಿಪರ್ಯಾಸ. ಬಿಸಿಲನ ಬೇಗೆ ಹತ್ತಿ ಹಾಸಿಗೆ ಮಕ್ಕಳಿಗೆ ಪೂರಕವಾಗಿರುತ್ತದೆ. ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದ್ದು, ಇಲಾಖೆ ಅವುಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರದ ಪರಿಣಾಮ ಯೋಜನೆಗಳು ಮೂಲೆಗುಂಪಾಗಿದೆ.
- ವಜ್ರಾಕ್ಷಿ ಬಂಟ್ವಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

