ಸುಂಕಕ್ಕೆ ಇಲ್ಲಿ ಬಿಂಕವೇ ಇಲ್ಲ!
- ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಲಿಸುವ ವಾಹನ ಸವಾರರಿಗೆ ಸದ್ಯದಲ್ಲಿ ಬಂದೆರಗಲಿದೆ ಟೋಲ್ ಫೀ ಗ್ರಹಣ. ನೇತ್ರಾವತಿಯಲ್ಲಿ 10 ವರ್ಷಗಳಾದರೂ ಮುಗಿಯದ ಟೋಲ್ ಸಂಗ್ರಹದಿಂದ ಕೆಂಗೆಟ್ಟ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಂಬಂತೆ ಇನ್ನೊಂದು ಕಡೆ ಟೋಲ್ ಫೀ ಸಂಗ್ರಹಣೆಗೆ ಬೂತ್ ಸ್ಥಾಪಿಸಲಾಗಿದೆ. ಸುರತ್ಕಲ್-ಬಿ.ಸಿ. ರೋಡಿನ ಚತುಷ್ಪಥ ರಸ್ತೆಯ ಟೋಲ್ ಫೀ ಸಂಗ್ರಹಣೆಗೆ ಬ್ರಹ್ಮರಕೂಟ್ಲುವಿನಲ್ಲಿ ಬೂತ್ ತೆರೆಯಲಾಗುತ್ತಿದೆ.
ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತೆ ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ಕೋಟ್ಯಾಂತರ ವೆಚ್ಚದಲ್ಲಿ ಸಾರ್ವಜನಿಕ ಸವಲತ್ತುಗಳನ್ನು ಒದಗಿಸಿಕೊಡುವ ಭರವಸೆ ನೀಡುತ್ತದೆ. ಆದರೆ ಇವುಗಳು ನಿರ್ಮಾಣಗೊಂಡ ಬಳಿಕ ಮತ್ತೆ ಶುಲ್ಕ ವಸೂಲಿ ಮಾಡುವ ನೆಪದಲ್ಲಿ ಮತ್ತೆ ಜನರಿಂದಲೇ ಹಣ ದೋಚಲಾಗುತ್ತಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡಿನ ನೇತ್ರಾವತಿ ಅಣೆಕಟ್ಟಿಗೆ ಕಳೆದ 10 ವರ್ಷಗಳಿಂದ ವಾಹನ ಸವಾರರು ಟೋಲ್ ಶುಲ್ಕ ಪಾವತಿಸುತ್ತಿದ್ದು, ಕೇವಲ 3 ಕಿ.ಮೀ ಅಂತರದಲ್ಲಿ ಮತ್ತೆ ಚತುಷ್ಪಥ ರಸ್ತೆಗಾಗಿ ಟೋಲ್ ಶುಲ್ಕ ಕಟ್ಟುವ ಹೊಣೆಗಾರಿಕೆ ವಾಹನ ಸವಾರರದ್ದು.
ಮೇ-ಜೂನ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಟೋಲ್ ಶುಲ್ಕ ಸಂಗ್ರಹಣೆ ಪ್ರಕ್ರಿಯೆಗೆ ಟೆಂಡರ್ ಕರೆಯಲು ತಯಾರಿ ನಡೆಯುತ್ತಿದೆ. ಒಟ್ಟು ನಾಲ್ಕು ಬೂತ್ಗಳಲ್ಲಿ ಟೋಲ್ ಸಂಗ್ರಹಣೆ ನಡೆಯಲಿದ್ದು, ಇದು ರಾಷ್ಟ್ರೀಯ ಹೆದ್ದಾರಿಯ ಆದೇಶವಾಗಿದೆ.
ಸುಮಾರು ರು. 168 ಕೋಟಿ ವೆಚ್ಚದಲ್ಲಿ ಇರ್ಕಾನ್ ಸಂಸ್ಥೆ ಪ್ರಾರಂಭಿಸಿದ ಕಾಮಗಾರಿ ಇನ್ನೂ ಪೂರ್ಣ ಹಂತ ತಲುಪಿಲ್ಲ. ಸುರತ್ಕಲ್-ಬಿ.ಸಿರೋಡ್ ರಸ್ತೆ ಕಾಮಗಾರಿಯು ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿದ್ದು, ಶೇ. 20 ರಷ್ಟು ಕೆಲಸ ಇನ್ನೂ ಬಾಕಿ ಇದೆ.
ಪೂರ್ಣಗೊಳ್ಳದ ಕಾಮಗಾರಿ: ಪಡೀಲ್ ರೈಲು ಸೇತುವೆಯ ಕೆಳಭಾಗದಲ್ಲಿ ಅರ್ಧ ಕಿ.ಮೀ ಅಂತರದಲ್ಲಿ ಒನ್ವೇ ರಸ್ತೆ ಇದ್ದು, ಹೆದ್ದಾರಿ ಮತ್ತು ರೈಲ್ವೆ ಇಲಾಖೆ ಜಂಜಾಟದಲ್ಲಿ ಇನ್ನೂ ಯಾವುದೇ ಅಂತಿಮ ಒಮ್ಮತ ದೊರಕದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿದೆ. ಇದಲ್ಲದೆ ಕಣ್ಣೂರು ಮಸೀದಿ ಬಳಿಯಲ್ಲಿ ಮೋರಿ ನಿರ್ಮಾಣದಲ್ಲಿ ರಸ್ತೆಯನ್ನು ರಿಪೇರಿ ಮಾಡಲಾಗಿದ್ದು, ಅಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಯಲ್ಲಿ ಉಬ್ಬುತಗ್ಗುಗಳಿದೆ.
ಬ್ರಹ್ಮರಕೂಟ್ಲುವಿನಲ್ಲಿ ಸೇತುವೆ ನಿರ್ಮಾಣದ ಕಾಮಗಾರಿ ಪೂರ್ತಿಯಾಗಿಲ್ಲ. ಹಳೆಯ ಸೇತುವೆಯಲ್ಲಿಯೇ ಎರಡು ಬದಿ ವಾಹನಗಳು ಓಡಾಡುತ್ತಿದ್ದು, ಸೇತುವೆ ಮಧ್ಯೆ ಬಿರುಕು ಬಿಟ್ಟಿದೆ.
ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯ ಹೆದ್ದಾರಿ ಸಂಪರ್ಕಿಸುವ ಎರಡು ಬದಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಫುಟ್ಪಾತ್, ಚರಂಡಿ ವ್ಯವಸ್ಥೆ ಇನ್ನೂ ನಿರ್ಮಾಣವಾಗಿಲ್ಲ. ಹೆದ್ದಾರಿಯಿಂದ ಮೇಲ್ಸೇತುವೆಗೆ ಸಂಪರ್ಕಿಸಲು ಸೂಕ್ತ ನಿರ್ದೇಶನವಿಲ್ಲ.
2003ರಿಂದ ಟೋಲ್ ಸಂಗ್ರಹಣೆ: ನೇತ್ರಾವತಿ ಅಣೆಕಟ್ಟಿಗೆ 2003ರಲ್ಲಿ ಪ್ರಾರಂಭವಾಗಿರುವ ಟೋಲ್ ಸಂಗ್ರಹಣೆ ಇನ್ನೂ ಸ್ಥಗಿತಗೊಂಡಿಲ್ಲ. ಇಲ್ಲಿ ಪ್ರತಿದಿನ ರು. 51 ಸಾವಿರ ಹಣ ಸಂಗ್ರಹವಾಗುತ್ತಿದೆ. ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವಾಹನಗಳಿಂದ ರು. 5 ರಿಂದ ರು. 20 ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿ ಮೈಲುಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುತ್ತದೆ.
ಸಭೆ ಸಮಾರಂಭಗಳ ಸಮಯದಲ್ಲಿ ಒಂದೂವರೆ ಕಿ.ಮೀ. ವರೆಗೆ ವಾಹನಗಳು ಟೋಲ್ ಶುಲ್ಕ ನೀಡಲು ಸಾಲುಗಟ್ಟಿ ನಿಂತಿರಬೇಕಾಗಿರುತ್ತದೆ.
ಇನ್ನು ಮತ್ತದೆ ಪರಿಸ್ಥಿತಿ 3 ಕಿ.ಮೀ. ಅಂತರದಲ್ಲಿ ಅನುಭವಿಸುವ ಪರಿಸ್ಥಿತಿ ಪ್ರಯಾಣಿಕರದ್ದು, ಚಾಲಕರದ್ದು.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಹೆದ್ದಾರಿ ಪ್ರಾಧಿಕಾರ ಮತ್ತೆ ಜನರಿಂದ ಟೋಲ್ ಸಂಗ್ರಹಣೆ ನಡೆಸಲು ಮುಂದಾಗಿರುವುದು ವಿಪರಾಸ್ಯವೇ ಸರಿ.
ಕಳೆದ ಹತ್ತು ವರ್ಷಗಳಿಂದ ನೇತ್ರಾವತಿ ಅಣೆಕಟ್ಟಿಗೆ ಟೋಲ್ ನೀಡುತ್ತಿರುವ ಜನ, ಇನ್ನು ಮುಂದೆ ಹೆದ್ದಾರಿಗಾಗಿ ಟೋಲ್ ನೀಡುವ ಪರಿಸ್ಥಿತಿ ಇದೆ.
ನೇತ್ರಾವತಿ ಅಣೆಕಟ್ಟಿನ ಸಂಗ್ರಹ ಹಣ ಖಾಸಗಿ ಕಂಪನಿಗೆ ತಲುಪುತ್ತಿದ್ದರೆ. ಇಲ್ಲಿಯ ಹಣ ಕೇಂದ್ರಕ್ಕೆ ರವಾನೆಯಾಗಲಿದೆ ಎಂಬುದು ಅಧಿಕಾರಿಗಳ ಅಂಬೋಣ.
ಇದರ ಜವಾಬ್ದಾರಿ ಹೊರಲು ಮುಂದೆ ಬರುವ ಸಂಸ್ಥೆಗಳನ್ನು ಇಲಾಖೆ ಕಾಯುತ್ತಿದ್ದು, ಸದ್ಯದಲ್ಲಿ ಟೆಂಡರ್ ಕರೆಯುವ ಯೋಜನೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

